ಬ್ರಸೆಲ್ಸ್: ಅಥ್ಲೆಟಿಕ್ಸ್‌ನ ವಿಶ್ವ ಶ್ರೇಷ್ಠ ತಾರೆಗಳು ಭಾಗವಹಿಸುತ್ತಿರುವ ಡೈಮಂಡ್ ಲೀಗ್ ಫೈನಲ್ಸ್ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದು, ಜಾವೆಲಿನ್ ಥ್ರೊ ದಿಗ್ಗಜ ನೀರಜ್ ಚೋಪ್ರಾ ಮತ್ತು ಸ್ಟೀಪಲ್ ಚೇಸರ್ ಅವಿನಾಶ ಸಾಬ್ಳೆ ಅವರು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ಮೊದಲ ಬಾರಿ ಈ ಕೂಟ ಎರಡು ದಿನ ನಡೆಯುತ್ತಿದೆ. ಒಲಿಂಪಿಕ್ ಪದಕಗಳನ್ನು ಗೆದ್ದ ಅಥ್ಲೀಟುಗಳು ಅಭೂತಪೂರ್ವ ಸಂಖ್ಯೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕಿಂಗ್ ಬೋದುವಾ ಕ್ರೀಡಾಂಗಣದಲ್ಲಿ ಒಟ್ಟು 32 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.
ಪೋಲ್ ವಾಲ್ಡ್ ವಿಶ್ವದಾಖಲೆ ವೀರ ಅರ್ಮಾಂಡ್ ಡುಪ್ಲಾಂಟಿಸ್, ಅಮೆರಿಕದ ವೇಗದ ರಾಣಿ ಶಾ‘ಕೇರಿ ರಿಚರ್ಡ್‌ಸಬ್ ಮತ್ತು ಸ್ಟಾರ್ ಹರ್ಡಲ್ಸ್ ಓಟಗಾರ ಸಿಡ್ನಿ ಮೆಕ್‌ಲಾಗ್ಲಿನ್ ಲೆವ್ರೊನ್ ಇಲ್ಲಿ ಕಣದಲ್ಲಿರುವ ಪ್ರಮುಖರಲ್ಲಿ ಒಳಗೊಂಡಿದ್ದಾರೆ.
ಮೊದಲ ಬಾರಿ ಭಾರತದ ಇಬ್ಬರು ಸ್ಪರ್ಧಿಗಳು ಡೈಮಂಡ್ ಲೀಗ್ ಕಣದಲ್ಲಿದ್ದಾರೆ. 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಸಾಬ್ಳೆ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನುಭವಿಸಿರುವ ನಿರಾಶೆಯನ್ನು ಮರೆಸಲು ಈ ಕೂಟ ಅವಕಾಶ ನೀಡಿದೆ. ಅಲ್ಲಿ ಅವರು 11ನೇ ಸ್ಥಾನ ಗಳಿಸಿದ್ದರು. ಅವರಿಗೆ ಇದು ಮೊದಲ ಡೈಮಂಡ್ ಲೀಗ್ ಫೈನಲ್. ಅವರ ಸ್ಪರ್ಧೆ ಶುಕ್ರವಾರ ಇದೆ.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ, 26 ವರ್ಷ ವಯಸ್ಸಿನ ನೀರಜ್ ಚೋಪ್ರಾ ಅವರು ಉತ್ತಮ ಸಾಧನೆಯೊಡನೆ ವರ್ಷವನ್ನು ಕೊನೆಗೊಳಿಸುವ ಗುರಿ ಹೊಂದಿದ್ದಾರೆ.