ಪ್ಯಾರಿಸ್ : ಒಲಿಂಪಿಕ್ ಕೂಟದ ಹಾಕಿಯ ಸೆಮಿಫೈನಲ್ ಪಂದ್ಯದಲ್ಲಿ ಸೋತ ಭಾರತ ತಂಡವು ಗುರುವಾರ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.
ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಕಂಚು ಜಯಿಸಿದ್ದ ಭಾರತ ತಂಡವು ಇಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿದೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಬಳಗವು ಮಂಗಳವಾರ ನಾಲ್ಕನೇ ಘಟ್ಟದ ಪಂದ್ಯದಲ್ಲಿ ಜರ್ಮನಿಯ ವಿರುದ್ಧ ಸೋಲನುಭವಿಸಿತ್ತು.
ರೋಚಕ ಹಣಾಹಣಿ ನಡೆದಿದ್ದ ಆ ಪಂದ್ಯದ ಆರಂಭದಲ್ಲಿ ಭಾರತ ತಂಡವು ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಹಂತದಲ್ಲಿ ಜರ್ಮನಿ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಈ ಹಂತದಲ್ಲಿ ಭಾರತ ತಂಡದ ರಕ್ಷಣಾ ವಿಭಾಗದ ಲೋಪಗಳು ದುಬಾರಿಯಾದವು. ಅದರಲ್ಲೂ ಜರ್ಮನ್‌ಪ್ರೀತ್ ಸಿಂಗ್ ಅವರು ಗೋಲು ಗಳಿಸುವ ಅವಕಾಶ ಕೈಚೆಲ್ಲಿದರು.
ಭಾರತ ದ ಆಟಗಾರರು ತಮಗೆ ಲಭಿಸಿದ ಸುಮಾರು 10 ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಗಳಿಸುವ ಅವಕಾಶಗಳನ್ನು ವ್ಯರ್ಥ ಮಾಡಿಕೊಂಡರು. ಪ್ರಸ್ತುತ ವಿಶ್ವದ ಶ್ರೇಷ್ಠ ಡ್ರ್ಯಾಗ್ ಫ್ಲಿಕರ್‌ಗಳಲ್ಲಿ ಒಬ್ಬರಾಗಿರುವ ಹರ್ಮನ್‌ಪ್ರೀತ್ ಅವರು ಒಂದು ಬಾರಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದರು.
ಈ ವಿಭಾಗದಲ್ಲಿ ಲೋಪಗಳನ್ನು ತಿದ್ದಿಕೊಂಡು ಕಣಕ್ಕಿಳಿಯುವ ಸವಾಲು ಭಾರತಕ್ಕೆ ಇದೆ. ಅಮಿತ್ ರೋಹಿದಾಸ್ ಅವರು ಈ ಪಂದ್ಯಕ್ಕೆ ಮರಳುತ್ತಿರುವುದು ಸಮಾಧಾನಕರ ವಿಷಯ.
ಅಮಿತ್ ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೆಂಪು ಕಾರ್ಡ್ ದರ್ಶನ ಮಾಡಿದ್ದರು. ಅದರಿಂದಾಗಿ ಅವರಿಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗಿತ್ತು. ಅವರು ಸೆಮಿಫೈನಲ್‌ನಲ್ಲಿ ಆಡಿರಲಿಲ್ಲ.
44 ವರ್ಷಗಳ ನಂತರ ಫೈನಲ್ ತಲುಪುವ ಭಾರತದ ಕನಸು ಈ ಒಲಿಂಪಿಕ್ ಕೂಟದಲ್ಲಿಯೂ ಈಡೇರಲಿಲ್ಲ. ಆದರೂ ವಿಜಯವೇದಿಕೆ ಏರಿನಿಲ್ಲುವ ಅವಕಾಶ ಈಗಲೂ ಇದೆ. ಸ್ಪೇನ್ ತಂಡವನ್ನು ಮಣಿಸಿದರೆ ಕಂಚಿನ ಪದಕ ಒಲಿಯಲಿದೆ.
ಸ್ಪೇನ್ ತಂಡವು ಸೆಮಿಫೈನಲ್‌ನಲ್ಲಿ 0–4ರಿಂದ ನೆದರ್ಲೆಂಡ್ಸ್ ವಿರುದ್ಧ ಸೋತಿತ್ತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಸ್ಪೇನ್ ತಂಡವು 8ನೇ ಸ್ಥಾನದಲ್ಲಿದೆ. ಭಾರತವು ಐದರಲ್ಲಿದೆ. ಉಭಯ ತಂಡಗಳು ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಹತ್ತು ಬಾರಿ ಮುಖಾಮುಖಿಯಾಗಿದ್ದು ಭಾರತವು 7 ಸಲ ಜಯಿಸಿದೆ. ಸ್ಪೇನ್ ಒಂದರಲ್ಲಿ ಗೆದ್ದಿದೆ. ಎರಡು ಪಂದ್ಯ ಡ್ರಾ ಆಗಿವೆ. ಮೇಲ್ನೋಟಕ್ಕೆ ಸ್ಪೇನ್ ವಿರುದ್ಧ ಭಾರತವೇ ಹೆಚ್ಚು ಬಲಶಾಲಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.