ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...

Last Updated 31 ಆಗಸ್ಟ್ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಬದ್ಧತೆಯಿಂದ ಸಾಧನೆಯ ಶಿಖರ ಏರು. ಯಶಸ್ಸಿಗಾಗಿ ಯಾವತ್ತೂ ಅಡ್ಡ ದಾರಿ ಹಿಡಿಯಬೇಡ...

ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌, ಕ್ರಿಕೆಟ್‌ ಆಡಲು ಶುರುಮಾಡಿದಾಗ ಅಪ್ಪ ರಮೇಶ್‌ ತೆಂಡೂಲ್ಕರ್‌ ಹೇಳಿದ್ದ ಕಿವಿಮಾತುಗಳಿವು. ಎಳವೆಯಿಂದಲೂ ತಂದೆಯ ನುಡಿಗಳನ್ನು ಚಾಚೂ ತಪ್ಪದೆ ಪಾಲಿಸಿದ್ದ ಸಚಿನ್‌ ‘ಕ್ರಿಕೆಟ್‌ ದೇವರಾಗಿ’ ಬೆಳೆದಿದ್ದು ಈಗ ಇತಿಹಾಸ.

ಸಚಿನ್‌ರಂತೆ ಸರಿ ದಾರಿಯಲ್ಲಿ ಸಾಗಿ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಿದವರು ಹಲವರಿದ್ದಾರೆ. ಯಶಸ್ಸಿಗಾಗಿ ವಾಮಮಾರ್ಗ ಹಿಡಿದು ಕ್ರೀಡಾ ಬದುಕಿಗೆ ಕಳಂಕ ಮೆತ್ತಿಕೊಂಡವರ ಪಟ್ಟಿಯೂ ದೊಡ್ಡದಿದೆ. ಸಾಮರ್ಥ್ಯ ಹೆಚ್ಚಿಸಿಕೊಳ್ಳಲೆಂದೇ ನಿಷೇಧಿತ ಮದ್ದುಗಳನ್ನು ಅತಿಯಾಗಿ ಸೇವಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದೂ ಇದೆ.

ಡೋಪಿಂಗ್‌, ಶತಮಾನಗಳಿಂದಲೂ ಕ್ರೀಡಾ ಕ್ಷೇತ್ರಕ್ಕೆ ಕಾಡುತ್ತಿರುವ ಪೆಡಂಭೂತ. ಲ್ಯಾನ್ಸ್‌ ಎಡ್ವರ್ಡ್‌ ಆರ್ಮ್‌ಸ್ಟ್ರಾಂಗ್‌, ಬೆನ್ ಜಾನ್ಸನ್, ಆ್ಯಂಡ್ರೆ ಅಗಾಸಿ, ಮರಿಯಾ ಶರಪೋವಾ, ಜಸ್ಟಿನ್‌ ಗ್ಯಾಟ್ಲಿನ್‌, ಶೇನ್‌ ವಾರ್ನ್‌, ಶೋಯೆಬ್‌ ಅಖ್ತರ್‌ ಅವರಂತಹಕ್ರೀಡಾ ಕಲಿಗಳೇ ಮದ್ದು ಸೇವಿಸಿ ಮರ್ಯಾದೆ ಕಳೆದುಕೊಂಡಿದ್ದಾರೆ.

ಅರ್ಜೆಂಟೀನಾದ ಆಟಗಾರ, ಫುಟ್‌ಬಾಲ್‌ ಪ್ರಿಯರ ‘ಆರಾಧ್ಯ ದೈವ’ ಡೀಗೊ ಮರಡೋನಾ, ಎಫೆಡ್ರೀನ್ (ಕೊಕೆನ್‌) ಸೇವಿಸಿ ಕುಖ್ಯಾತರಾಗಿದ್ದರು. ಇದರ ಅಡ್ಡಪರಿಣಾಮದಿಂದ ಸ್ಥೂಲಕಾಯರಾಗಿದ್ದ (130 ಕೆ.ಜಿ) ಅವರು ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

90ರ ದಶಕದಲ್ಲಿ ವೃತ್ತಿಪರ ಸೈಕ್ಲಿಂಗ್‌ನಲ್ಲಿ ಪ್ರಜ್ವಲಿಸಿದ್ದ ಅಮೆರಿಕದ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್‌ ಅವರ ಕಥೆ ಇದಕ್ಕಿಂತ ಭಿನ್ನ. ವಿಶ್ವದ ಅಗ್ರಮಾನ್ಯ ಸೈಕ್ಲಿಸ್ಟ್ ಆಗಿದ್ದ ಅವರು ಟೂರ್‌ ಡಿ ಫ್ರಾನ್ಸ್‌ನಲ್ಲಿ ಸತತ ಏಳು ಬಾರಿ ಚಾಂಪಿಯನ್‌ ಆಗಿದ್ದರು. ದೇಹದಲ್ಲಿ ಕೆಂಪು ರಕ್ತಕಣಗಳನ್ನು ವೃದ್ಧಿಸಲು ನೆರವಾಗುವ (ಬ್ಲಡ್‌ ಬೂಸ್ಟರ್‌) ಎರಿಥ್ರೋಪೊಯೆಟಿನ್ ಅನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದರು. ಇದರಿಂದ ಸಾಮರ್ಥ್ಯ ಹೆಚ್ಚುತ್ತಿತ್ತು. ದಿನಗಟ್ಟಲೇ ಸೈಕಲ್‌ ತುಳಿದರೂ ಅವರು ಒಂದಿಷ್ಟೂ ದಣಿಯುತ್ತಿರಲಿಲ್ಲ. ಈ ಆಘಾತಕಾರಿ ಅಂಶ ಬಯಲಾದ ಬಳಿಕ ಅವರಿಂದ ಅಷ್ಟೂ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯಲಾಗಿತ್ತು. ಆಜೀವ ನಿಷೇಧವನ್ನೂ ಹೇರಲಾಗಿತ್ತು.

‘ಬ್ಯಾಡ್‌ ಬಾಯ್’ ಎಂದೇ ಗುರುತಿಸಿಕೊಂಡಿರುವ ಅಮೆರಿಕದ ಸ್ಪ್ರಿಂಟರ್‌ ಗ್ಯಾಟ್ಲಿನ್‌ ಅವರ ದೇಹದಲ್ಲಿ ನಿಷೇಧಿತ ಟೆಸ್ಟೊಸ್ಟೆರಾನ್ ಮದ್ದಿನ ಅಂಶ ಪತ್ತೆಯಾಗಿದ್ದರಿಂದ 2006ರಲ್ಲಿ ಅವರ ಮೇಲೆ ನಾಲ್ಕು ವರ್ಷ ನಿಷೇಧ ಹೇರಲಾಗಿತ್ತು.

ಅಮೆರಿಕದ ಟ್ರ್ಯಾಕ್ ಮತ್ತು ಫೀಲ್ಡ್‌ ಅಥ್ಲೀಟ್‌ ಮರಿಯನ್‌ ಜೋನ್ಸ್‌ ಅವರ ಕ್ರೀಡಾ ಬದುಕಿನ ಮೇಲೂ ಡೋಪಿಂಗ್‌ ಕರಿ ನೆರಳು ಆವರಿಸಿತ್ತು. 2000ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಅವರು ಮೂರು ಚಿನ್ನ ಸೇರಿ ಒಟ್ಟು ಐದು ಪದಕಗಳಿಗೆ ಕೊರಳೊಡ್ಡಿದ್ದರು. ಸ್ಟೆರಾಯ್ಡ್‌ ತೆಗೆದುಕೊಂಡಿದ್ದು ಗೊತ್ತಾದ ಕೂಡಲೇ ಪದಕಗಳನ್ನು ಹಿಂಪಡೆಯಲಾಗಿತ್ತು. ಜಮೈಕಾದ ಓಟಗಾರ ಟೈಸನ್‌ ಗೇ, 1988ರ ಸೋಲ್‌ ಒಲಿಂಪಿಕ್ಸ್‌ನ 100 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಕೆನಡಾದ ಬೆನ್‌ ಜಾನ್ಸನ್‌, ಸೈಕ್ಲಿಸ್ಟ್‌ ಅಲ್ಬರ್ಟ್‌ ಕಾಂಟಡೊರ್‌ ಅವರೂ ಮದ್ದಿನ ಅಮಲಿನಲ್ಲಿ ಜಾರಿಬಿದ್ದವರೇ. ಜಾನ್ಸನ್‌ ಅವರ ಮೂತ್ರದ ಮಾದರಿಯಲ್ಲಿ ಸ್ಟ್ಯಾನಜೊಲೊಲ್‌ ಮದ್ದಿನ ಅಂಶ ಪತ್ತೆಯಾಗಿತ್ತು. ಹೀಗಾಗಿ ಮೂರೇ ದಿನದಲ್ಲಿ ಅವರಿಂದ ಚಿನ್ನದ ಪದಕ ವಾಪಸ್‌ ಪಡೆಯಲಾಗಿತ್ತು.

ಭಾರತದ ಅಥ್ಲೀಟ್‌ಗಳೂ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಸುದ್ದಿಯಾಗಿದ್ದಿದೆ. ಸನಮಾಚಾ ಚಾನು (ವೇಟ್‌ಲಿಫ್ಟಿಂಗ್‌), ಸೀಮಾ ಪೂನಿಯಾ (ಶಾಟ್‌ಪಟ್‌), ರೆಂಜಿತ್‌ ಮಹೇಶ್ವರಿ (ಟ್ರಿಪಲ್‌ ಜಂಪ್‌), ಇಂದ್ರಜಿತ್‌ ಸಿಂಗ್‌ (ಶಾಟ್‌ಪಟ್‌), ಕುಸ್ತಿಪಟು ನರಸಿಂಗ್‌ ಯಾದವ್‌, ಕರ್ನಾಟಕದ ಓಟಗಾರ್ತಿ ಅಶ್ವಿನಿ ಅಕ್ಕುಂಜಿ, ಸೀಮಾ ಆಂಟಿಲ್‌ (ಡಿಸ್ಕಸ್‌ ಥ್ರೋ), ಕ್ರಿಕೆಟಿಗರಾದ ಯೂಸುಫ್‌ ಪಠಾಣ್‌, ಪೃಥ್ವಿ ಶಾ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಡೆನ್ಮಾರ್ಕ್‌ನ ಸೈಕ್ಲಿಸ್ಟ್‌ ಕ್ನುಡ್‌ ಎನೆಮಾರ್ಕ್‌ ಜೆನ್ಸನ್‌ ಅವರ ಪ್ರಕರಣವನ್ನು ಇಲ್ಲಿ ಉಲ್ಲೇಖಿಸಲೇಬೇಕು. 1960ರಲ್ಲಿ ನಡೆದಿದ್ದ ಸ್ಪರ್ಧೆಯೊಂದರ ವೇಳೆಯೇ ಜೆನ್ಸನ್‌ ನಿಧನರಾಗಿದ್ದರು. ಅವರ ದೇಹದಲ್ಲಿ ‘ನಿಕೋಟಿನಿಲ್‌ ಟಾರ್‌ಟ್ರೇಟ್‌’ ಮದ್ದಿನ ಅಂಶ ಇರುವುದು ಮರಣೋತ್ತರ ಪರೀಕ್ಷೆಯಿಂದ ಬಹಿರಂಗಗೊಂಡಿತ್ತು.

ಇಷ್ಟೆಲ್ಲಾ ಆದರೂ ಡೋಪಿಂಗ್‌ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಡಾ ಮತ್ತು ವಾಡಾ ಇನ್ನಷ್ಟು ಕಠಿಣ ನಿಯಮ ರೂಪಿಸಬೇಕು. ಅಂತರ ವಾರ್ಸಿಟಿ ಮತ್ತು ಜೂನಿಯರ್‌ ಹಂತದಲ್ಲೇ ಈ ರೋಗಕ್ಕೆ ‘ಮದ್ದು’ ಅರೆಯುವ ಕೆಲಸ ಮಾಡಬೇಕು.

ಬ್ಲಡ್‌ ಡೋಪಿಂಗ್
ಪ್ರತಿಷ್ಠಿತ ಟೂರ್‌ ಡಿ ಫ್ರಾನ್ಸ್‌ ಚಾಂಪಿಯನ್‌ ಆಗಿದ್ದ ಸೈಕ್ಲಿಸ್ಟ್ ಲ್ಯಾನ್ಸ್‌ ಆರ್ಮ್‌ಸ್ಟ್ರಾಂಗ್ ಅವರಿದ್ದ ತಂಡ ಬ್ಲಡ್‌ ಡೋಪಿಂಗ್ ತಂತ್ರ ಅನುಸರಿಸಿತ್ತು ಎನ್ನಲಾಗಿದೆ. ಅದರಲ್ಲಿ ಸಿಕ್ಕಿಬಿದ್ದಿದ್ದ ಅವರು ನಿಷೇಧಕ್ಕೂ ಒಳಗಾಗಿದ್ದರು.

ಈ ರೀತಿಯ ನಿಯಮಬಾಹಿರ ಕೆಲಸ ದಶಕಗಳ ಹಿಂದೆಯೇ ನಡೆದಿದೆ. ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚಿಸಿ ಆ ಮೂಲಕ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಹೊಸ ತಂತ್ರವನ್ನು ಕೆಲವು ಅಥ್ಲೀಟ್‌ಗಳು ಅನುಸರಿಸುತ್ತಾರೆ. ಇದನ್ನು ‘ಬ್ಲಡ್‌ ಡೋಪಿಂಗ್‌’ ಎನ್ನುತ್ತಾರೆ.

ಇದನ್ನು ಎರಡು ರೀತಿಯಲ್ಲಿ ಮಾಡಬಹುದು. ‘ರಕ್ತ ವರ್ಗಾವಣೆ’ (ಬ್ಲಡ್‌ ಟ್ರ್ಯಾನ್ಸ್‌ಫ್ಯೂಷನ್‌) ಒಂದು ವಿಧಾನ. ಸ್ಪರ್ಧೆಗೆ ಕೆಲವು ವಾರಗಳು ಇರುವಾಗ ಅಥ್ಲೀಟ್‌ನ ದೇಹದಿಂದ ರಕ್ತವನ್ನು ಹೊರ ತೆಗೆದು. ಅದನ್ನು ಸೂಕ್ತ ವಿಧಾನದಲ್ಲಿ ಸಂರಕ್ಷಿಸಿಡಲಾಗುವುದು.

ಅದೇ ರಕ್ತವನ್ನು ಸ್ಪರ್ಧೆಗೆ 1 ರಿಂದ 7 ದಿನಗಳು ಇರುವಾಗ ಮತ್ತೆ ಅಥ್ಲೀಟ್‌ನ ದೇಹಕ್ಕೆ ಸೇರಿಸಲಾಗುವುದು. ಇದರಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ಆಯಾಸವನ್ನು ದೀರ್ಘಕಾಲ ತಾಳಿಕೊಳ್ಳುವಂತಹ ಶಕ್ತಿ ದೇಹಕ್ಕೆ ಲಭಿಸುತ್ತದೆ. ದೇಹವು ಹೆಚ್ಚು ಆಮ್ಲಜನಕವನ್ನು ಬಳಸಿಕೊಳ್ಳುತ್ತದೆ. ಆದರೆ ಇದೀಗ ಎರಿತ್ರೊಪೊಯೆಟಿನ್‌ (ಇಪಿಒ) ಎಂಬ ಉದ್ದೀಪನ ಮದ್ದು ದೊರೆಯುವ ಕಾರಣ ‘ಬ್ಲಡ್‌ ಡೋಪಿಂಗ್‌’ ಸುಲಭ ಎನಿಸಿದೆ. ಇದನ್ನು ಚುಚ್ಚುವ ಮೂಲಕ ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತಾರೆ.

ಆದೇ ರೀತಿ ಆಮ್ಲಜನಕ ಒಯ್ಯಬಲ್ಲ ‘ಸಿಂಥೆಟಿಕ್‌ ಕೆಮಿಕಲ್‌’ಅನ್ನು ಚುಚ್ಚುವ ವಿಧಾನವನ್ನೂ ಕೆಲವರು ಅನುಸರಿಸುತ್ತಾರೆ. ‘ಬ್ಲಡ್‌ ಡೋಪಿಂಗ್‌’ಅನ್ನು ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಿಲ್ಲ. ಇದರಿಂದ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾದರೂ ಅಥ್ಲೀಟ್‌ಗಳು ಸಿಕ್ಕಿಬೀಳದೆ ಪಾರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT