ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಥಿಯೋಪಿಯಾದ ತೋಲಾಗೆ ಮ್ಯಾರಥಾನ್‌ ಚಿನ್ನ

Published 10 ಆಗಸ್ಟ್ 2024, 14:12 IST
Last Updated 10 ಆಗಸ್ಟ್ 2024, 14:12 IST
ಅಕ್ಷರ ಗಾತ್ರ

ಪ್ಯಾರಿಸ್‌: ಇಥಿಯೋಪಿಯಾದ ತಮಿರತ್‌ ತೋಲಾ ಅವರು ಶ್ರೇಷ್ಠ ಗುಣಮಟ್ಟದ ಪ್ರದರ್ಶನ ನೀಡಿ ಒಲಿಂಪಿಕ್ಸ್‌ ಪುರುಷರ ಮ್ಯಾರಥಾನ್ ಚಿನ್ನ ಗೆದ್ದುಕೊಂಡರು. ಸತತ ಮೂರನೇ ಬಾರಿ ಚಿನ್ನದ ಪದಕ ಗೆಲ್ಲುವ ಇಲ್ಯುಡ್‌ ಕಿಪ್ಚೊಗೆ ಅವರ ಕನಸು ಶನಿವಾರ ನುಚ್ಚುನೂರಾಯಿತು.

ತೋಲಾ ಅವರು 42.195 ಕಿ.ಮೀ. (26.21 ಮೈಲಿ) ಓಟವನ್ನು 2 ಗಂಟೆ 06 ನಿಮಿಷ 26 ಸೆಕೆಂಡುಗಳಲ್ಲಿ ಓಟವನ್ನು ಪೂರೈಸಿ ಒಲಿಂಪಿಕ್ ದಾಖಲೆ ಸ್ಥಾಪಿಸಿದರು. ಬೆಳ್ಳಿ ಗೆದ್ದ ಬೆಲ್ಜಿಯಂನ ಬಶೀರ್‌ ಅಬ್ದಿ ಅವರಿಗಿಂತ 21 ಸೆಕೆಂಡು ಮೊದಲೇ ಗುರಿಮುಟ್ಟಿದರು. ಮೂರು ವರ್ಷ ಹಿಂದೆ ಟೋಕಿಯೊ ಕ್ರೀಡೆಗಳ ಮ್ಯಾರಥಾನ್‌ನಲ್ಲಿ ಅಬ್ದಿ ಕಂಚಿನ ಪದಕ ಗೆದ್ದಿದ್ದು, ಇಲ್ಲಿ ಮೇಲ್ದರ್ಜೆಗೇರಿದರು.

ಇತ್ತೀಚಿನ ವರ್ಷಗಳಲ್ಲಿ ಟೋಕಿಯೊ, ಬೋಸ್ಟನ್‌ ಮತ್ತು ಷಿಕಾಗೊ ಮ್ಯಾರಥಾನ್‌ಗಳಲ್ಲಿ ವಿಜೇತರಾದ ಕೆನ್ಯಾದ ಬೆನ್ಸನ್ ಕಿಪ್ರುಟೊ ಕೇವಲ 13 ಸೆಕೆಂಡಗಳಿಂದ ಹಿಂದೆಬಿದ್ದು ಕಂಚಿನ ಪದಕ ಗೆದ್ದುಕೊಂಡರು.

‘ಥಾಂಕ್ಯೂ ಪ್ಯಾರಿಸ್‌!’ ಎಂದು ತೋಲಾ ಉದ್ಗರಿಸಿದರು. 2016ರ ರಿಯೊ ಕ್ರೀಡೆಳಲ್ಲಿ 10,000 ಮೀ. ಓಟದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದ ತೊಲಾ ಅವರು ಭಾನುವಾರ (ಆಗಸ್ಟ್‌  18ರಂದು) 33ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ.

‘ನನಗೆ ಇಂದು ಅತೀವ ಸಂತಸವಾಗಿದೆ. ನಾನು 2022ರ ವಿಶ್ವ ಚಾಂಪಿಯನ್ ಆದೆ. ಈಗ ಒಲಿಂಪಿಕ್ ಚಾಂಪಿಯನ್ ಆಗಿದ್ದೇನೆ. ಇದು ನನ್ನ ಜೀವನದ ಅತ್ಯಂತ ಮಹತ್ವದ ದಿನ. ಇದು ನನ್ನ ಗುರಿಯೂ ಆಗಿತ್ತು’ ಎಂದು ಪ್ರತಿಕ್ರಿಯಿಸಿದರು.

ತೋಲಾ ಅವರು ಮೂಲ ತಂಡದಲ್ಲಿ ಇರಲಿಲ್ಲ. ಯುಜೀನ್‌ನಲ್ಲಿ ನಡೆದ 2022ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಸಿಸೇ ಲೆಮ್ಮಾ ಗಾಯಾಳಾದ ಕಾರಣ ತೊಲಾ ಅವರಿಗೆ ಕೊನೆಗಳಿಗೆಯಲ್ಲಿ ಒಲಿಂಪಿಕ್ಸ್‌ಗೆ ಅವಕಾಶ ಪಡೆದಿದ್ದರು.

ಕಳೆದ ವರ್ಷ ಲಂಡನ್‌ ಮ್ಯಾರಥಾನ್‌ನಲ್ಲಿ ತೊಲಾ ಮೂರನೇ ಸ್ಥಾನ ಪಡದಿದಗ್ದರು. ನ್ಯೂರ್ಯಾರ್ಕ್ ಸಿಟಿ ಮ್ಯಾರಥಾನ್‌ನಲ್ಲಿ ದಾಖಲೆಯೊಡನೆ (2:04.58ಸೆ.) ಅಗ್ರಸ್ಥಾನ ಗಳಿಸಿದ್ದರು.

‘ಇಥಿಯೋಪಿಯಾ ತಂಡದಲ್ಲಿ ನಾನು ಮೀಸಲು ಸ್ಪರ್ಧಿ ಆಗಿದ್ದೆ. ಸಿಸೇ ಗಾಯಾಳು ಆದಾಗ ನನಗೆ ಅವರ ಬದಲು ಅವಕಾಶ ಸಿಕ್ಕಿತು’ ಎಂದು ತೋಲಾ ಹೇಳಿದರು.

‘ನಾನು ಸಂಪೂರ್ಣ ಸಜ್ಜಾಗಿದ್ದೆ. ನನ್ನ ಕನಸು ಈಡೇರಿಸಬಹುದೆಂದು ತಿಳಿದಿದ್ದೆ. ಇದು ಒಲಿಂಪಿಕ್ಸ್‌. ಇಲ್ಲಿ ಗೆಲ್ಲುವುದು ಸಾಮಾನ್ಯವಲ್ಲ. ನನಗೆ ಹೆಮ್ಮೆಯೆನಿಸಿದೆ. ಸಂತುಷ್ಟನಾಗಿದ್ದೇನೆ’ ಎಂದು ಖುಷಿಪಟ್ಟರು.

ಈ ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದ ಮಾಜಿ ವಿಶ್ವದಾಖಲೆ ವೀರ ಕಿಪ್ಚೋಗೆ ಬೆನ್ನು ನೋವಿನ ಕಾರಣ ಸ್ಪರ್ಧೆಯ ಅಂತಿಮ ಹಂತದಲ್ಲಿ ಹಿಂದೆಸರಿದರು. 30 ಕಿ.ಮೀ. ಓಟದ ನಂತರ ಹಿಂದೆಸರಿದಾಗ ಅವರು 71ನೇ ಸ್ಥಾನದಲ್ಲಿದ್ದರು. ಅಲ್ಲಿಗೇ ಸತತ ಮೂರನೇ ಚಿನ್ನ ಗೆಲ್ಲುವ ಆಸೆ ಕಮರಿಹೋಗಿತ್ತು.

‘ಇದು ನನ್ನ ಅತ್ಯಂತ ಕೆಟ್ಟ ಮ್ಯಾರಥಾನ್. ಈ ಹಿಂದೆಂದೂ ನಾನು ಓಟ ಮುಗಿಸದೇ ಹೋದವನಲ್ಲ. ಬಾಕ್ಸರ್‌ ಕೆಡವಿಬಿದ್ದ ಅನುಭವ ನನಗಾಯಿತು. ನಾನು ಗೆದ್ದಿದ್ದಿದೆ. ಎರಡನೇ, ಎಂಟನೇ, 10ನೇ– ಈಗ ಓಟ ಪೂರೈಸಲಾಗಿಲ್ಲ. ಇದು ಜೀವನ’ ಎಂದಿದ್ದಾರೆ.

5000 ಮತ್ತು 10000 ಮೀ. ಓಟದಲ್ಲಿ ಮೂರು ಒಲಿಂಪಿಕ್‌ ಚಿನ್ನ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಐದು ಚಿನ್ನ ಗೆದ್ದು, ನಂತರ ಮ್ಯಾರಥಾನ್‌ ಕಡೆ ಗಮನಹರಿಸಿದ ಕೆನೆನಿಸಾ ಬೆಕೆಲೆ 2:12.24 ಅವಧಿಯೊಡನೆ 39ನೇ ಸ್ಥಾನ ಪಡೆದರು. ಅವರಿಗೆ 42 ವರ್ಷ ವಯಸ್ಸು.

ಎರಡನೇ ಸ್ಥಾನ ಪಡೆದ ಅಬ್ದಿ ಅವರು ‘ತುಂಬಾ ಬಿಸಿಲಿತ್ತು. ಓಟದ ಸ್ಥಳಗಳಲ್ಲಿ ಸಾಕಷ್ಟು ಏರು, ತಗ್ಗುಗಳಿದ್ದವು. ಇದು ನಾನು ಓಡಿದ ಅತ್ಯಂತ ಕಠಿಣ ಮ್ಯಾರಥಾನ್‌ ಕೋರ್ಸ್‌’ ಎಂದರು.

‘ಕೆಲವು ಕಡೆ ತುಂಬಾ ಇಳಿಜಾರು ರೀತಿಯಲ್ಲಿತ್ತು. ದೇಹದ ಮೇಲೆ ನಿಯಂತ್ರಣ ಸಾಧಿಸಲು ಕಷ್ಟವಾಗುತಿತ್ತು. ಜಾಗ ಭಯಹುಟ್ಟಿಸುತಿತ್ತು. ಸುಮಾರು 2 ಕಿ.ಮೀ. ತಗ್ಗಿನಂಥ ಪ್ರದೇಶದಲ್ಲಿ ಓಡಬೇಕಾಯಿತು. ನನಗೆ ಬೀಳುತ್ತೇನೆಂಬ ಭಯಹುಟ್ಟಿತ್ತು...’ ಎಂದರು

ಸಹ ಓಟಗಾರರೊಂದಿಗೆ ಕಿಪ್ಚೋಗೆ
ಸಹ ಓಟಗಾರರೊಂದಿಗೆ ಕಿಪ್ಚೋಗೆ

ವಿದಾಯ ಹೇಳಿದ ಕಿಪ್ಚೋಗೆ...

ಪ್ಯಾರಿಸ್‌: ರಿಯೊ (2016) ಮತ್ತು ಟೋಕಿಯೊ (2021) ಕ್ರೀಡೆಗಳಲ್ಲಿ ಮ್ಯಾರಥಾನ್ ಚಾಂಪಿಯನ್ ಆಗಿದ್ದ ಕೆನ್ಯಾದ ಇಲ್ಯುಡ್‌ ಕಿಪ್ಚೊಗೆ ಅವರು ಪ್ಯಾರಿಸ್‌ ಕ್ರೀಡೆಗಳಲ್ಲಿ ಹಿನ್ನಡೆ ಕಂಡ ನಂತರ ಇದು ತಮ್ಮ ಕೊನೆಯ ಒಲಿಂಪಿಕ್ಸ್‌ ಎಂದು ಘೋಷಿಸಿದರು. ಮ್ಯಾರಥಾನ್ ಓಟವನ್ನು ಎರಡು ಗಂಟೆಗಳ ಒಳಗೆ ಓಡಿದ ಏಕೈಲ ಓಟಗಾರ ಎಂಬ ಶ್ರೇಯಸ್ಸು ಹೊಂದಿರುವ ಕೆನ್ಯಾದ ಸೂಪರ್‌ಸ್ಟಾರ್‌ ಸುಮಾರು 30 ಕಿ.ಮೀ. ಓಡಿದ ನಂತರ ಬೆನ್ನುನೋವಿನಿಂದ ಮುಂದುವರಿಸಲಾಗಲಿಲ್ಲ. ಓಟ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಯೊಬ್ಬನ ಬಳಿಗೆ ಹೋದ ಅವರು ತಮ್ಮ ಓಟದ ಶೂಗಳನ್ನು ಆತನಿಗೆ ಕೊಟ್ಟರು. ಬಳಿಕ ಅಯೋಜಕರು ವ್ಯವಸ್ಥೆ ಮಾಡಿದ್ದ  ವಾಹನವೊಂದನ್ನು ಹತ್ತಿ ರೇಸ್‌ ಮುಕ್ತಾಯದ ಜಾಗ ತಲುಪಿ ಅಲ್ಲಿ ವಿದಾಯದ ನಿರ್ಧಾರ ಪ್ರಕಟಿಸಿದರು. ಭವಿಷ್ಯದ ನಿರ್ಧಾರದ ಬಗ್ಗೆ ಏನನ್ನೂ ಹೇಳಲಿಲ್ಲ. ‘ನಾನು ಮುಂದೇನು ಮಾಡಬೇಕೆಂದು ನಿರ್ಧರಿಸಿಲ್ಲ. ಮುಂದಿನ ಮೂರು ತಿಂಗಳ ನಂತರ ಆ ಬಗ್ಗೆ ನಿರ್ಧರಿಸುವೆ. ಕೆಲವು ಮ್ಯಾರಥಾನ್‌ಗಳಲ್ಲಿ ಓಡುವ ಮನಸ್ಸಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT