ಚಟೌರೊಕ್ಸ್ (ಫ್ರಾನ್ಸ್): ಒಂದೇ ಒಲಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ಬರೆದಿರುವ ಶೂಟಿಂಗ್ ಪಟು ಮನು ಭಾಕರ್ ಅವರ ಹ್ಯಾಟ್ರಿಕ್ ಪದಕ ಸಾಧಿಸುವ ಕನಸು ಭಗ್ನವಾಗಿದೆ. ಇಂದು(ಶನಿವಾರ) ನಡೆದ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಹಂಗೇರಿಯಾದ ವೆರೋನಿಕಾ ಮೇಜರ್ ಜೊತೆಗೆ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಎಲಿಮಿನೇಷನ್ ಪ್ಲೇ ಆಫ್ ಸುತ್ತಿನಲ್ಲಿ ಸೋಲುವ ಮೂಲಕ ಭಾಕರ್ ಹ್ಯಾಟ್ರಿಕ್ ಕನಸು ಭಗ್ನವಾಗಿದೆ.
ಸರಣಿ ಒಂದರಲ್ಲಿ ಎಡವಿದ್ದ ಭಾಕರ್, ಎರಡು ಮತ್ತು ಮೂರನೇ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲಿಮಿನೇಷನ್ ಸುತ್ತಿಗೆ ಆಯ್ಕೆ ಆಗಿದ್ದರು. ಅಂತಿಮ ಸುತ್ತಿನಲ್ಲಿ ಭಾಕರ್ 28 ಅಂಕ ಪಡೆದರೆ, ಕಂಚಿನ ಪದಕ ಗೆದ್ದ ವೆರೋನಿಕಾ 31 ಅಂಕ ಗಳಿಸಿದ್ದಾರೆ.
ಈ ಒಲಿಂಪಿಕ್ಸ್‌ನಲ್ಲಿ ಮನು ಅವರು 10 ಮೀ ಏರ್ ಪಿಸ್ತೂಲ್ ಮತ್ತು 10 ಮೀ ಏರ್ ಪಿಸ್ತೂಲ್ ಮಿಶ್ರ (ಸರಬ್ಜೋತ್‌ಸಿಂಗ್ ಜೊತೆಗೂಡಿ) ತಂಡ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.