ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ | ಭಾರತದ 4 ಸ್ಪರ್ಧಿಗಳು ಕ್ವಾರ್ಟರ್‌ ಫೈನಲ್‌ಗೆ: ಐತಿಹಾಸಿಕ ಕ್ಷಣ– ಆನಂದ್‌

Published 15 ಆಗಸ್ಟ್ 2023, 13:34 IST
Last Updated 15 ಆಗಸ್ಟ್ 2023, 13:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಭಾರತದ ನಾಲ್ವರು ಸ್ಪರ್ಧಿಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವುದು ‘ಐತಿಹಾಸಿಕ ಕ್ಷಣ’ ಎಂದು ದಿಗ್ಗಜ ಆಟಗಾರ ವಿಶ್ವನಾಥನ್‌ ಆನಂದ್‌ ಶ್ಲಾಘಿಸಿದ್ದಾರೆ.

ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿ.ಗುಕೇಶ್, ಆರ್‌.ಪ್ರಜ್ಞಾನಂದ, ಅರ್ಜುನ್‌ ಇರಿಗೇಶಿ ಮತ್ತು ವಿದಿತ್ ಗುಜರಾತಿ ಅವರು ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಚೆಸ್‌ನಲ್ಲಿ ಎಂಟರಘಟ್ಟದಲ್ಲಿ ಸ್ಥಾನ ಪಡೆದಿದ್ದಾರೆ.

‘ಭಾರತದ ಚೆಸ್‌ ಕ್ರೀಡೆಯಲ್ಲಿ ಇದು ಐತಿಹಾಸಿಕ ಕ್ಷಣ. ಏಕೆಂದರೆ ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿಯ ಸನಿಹ ತಲುಪಬಲ್ಲ ಹಲವು ಸ್ಪರ್ಧಿಗಳು ನಮ್ಮಲ್ಲಿದ್ದಾರೆ’ ಎಂದು ಚೆಸ್‌ ಡಾಟ್‌ ಕಾಮ್‌ಗೆ ನೀಡಿದ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

‘ಈಗ ನಡೆಯುತ್ತಿರುವ ಫಿಡೆ ವಿಶ್ವಕಪ್‌ನಲ್ಲಿ ಒಬ್ಬರು ಅಥವಾ ಇಬ್ಬರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬಹುದು ಎಂದು ಭಾವಿಸಿದ್ದೆ. ಆದರೆ ನಾಲ್ವರು ಕ್ವಾರ್ಟರ್‌ ಫೈನಲ್‌ ಹಂತ ತಲುಪಿದ್ದಾರೆ. ಆದ್ದದಿಂದ ಭಾರತದ ಚೆಸ್‌ಗೆ ಇದು ಸಂತಸದ ಸಮಯ. ಈ ಸಾಧನೆ ನನಗೂ ಖುಷಿ ನೀಡಿದೆ’ ಎಂದು ಐದು ಬಾರಿಯ ವಿಶ್ವ ಚಾಂಪಿಯನ್‌ ಹೇಳಿದ್ದಾರೆ.

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಗುಕೇಶ್‌ ಅವರು ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಲಿದ್ದಾರೆ. ವಿದಿತ್‌ ಅವರು ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧ ಹಣಾಹಣಿ ನಡೆಸುವರು. ‘ಆಲ್‌–ಇಂಡಿಯನ್‌’ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಜ್ಞಾನಂದ ಮತ್ತು ಇರಿಗೇಶಿ ಎದುರಾಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT