ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಿಗೆ ಡರ್ಬಿಗೆ ₹2 ಕೋಟಿ ಮೊತ್ತದ ಬಹುಮಾನ

ಹೆಚ್‌ಪಿಎಸ್‌ಎಲ್‌ ಬೆಂಗಳೂರು ಬೇಸಿಗೆ ಡರ್ಬಿ ಕಪ್‌ ಅನಾವರಣ:
Published : 22 ಆಗಸ್ಟ್ 2024, 16:41 IST
Last Updated : 22 ಆಗಸ್ಟ್ 2024, 16:41 IST
ಫಾಲೋ ಮಾಡಿ
Comments

ಬೆಂಗಳೂರು: ಉದ್ಯಾನನಗರಿಯ ರೇಸ್‌ಪ್ರಿಯರು ಕಾತರದಿಂದ ಕಾಯುತ್ತಿದ್ದ  ಬೆಂಗಳೂರು ಬೇಸಿಗೆ ಡರ್ಬಿ  ಭಾನುವಾರ (ಆ.25) ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆಯಲಿದೆ. ಈ ಬಾರಿಯ ಒಟ್ಟು ಬಹುಮಾನ ಮೊತ್ತವು ₹2 ಕೋಟಿ ಆಗಿದೆ.

ಗುರುವಾರ ಸಂಜೆ ಬಿಟಿಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರೋಫಿ ಅನಾವರಣಗೊಳಿಸಲಾಯಿತು. ಮುಖ್ಯ ಪ್ರಾಯೋಜಕತ್ವ ನೀಡಿರುವ ಎಚ್‌ಪಿಎಸ್‌ಎಲ್ ಸಂಸ್ಥೆಯ ನಿರ್ದೇಶಕ ವಿ.ಎಸ್.ಎನ್. ರಾಜು ಅವರು ಬಿಟಿಸಿಯ ಸ್ಟೀವರ್ಡ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರವಿಂದ್ ಕಾತರಕಿ ಅವರಿಗೆ ಟ್ರೋಫಿ ಹಸ್ತಾಂತರಿಸಿದರು. 

ಇದೇ ಸಂದರ್ಭದಲ್ಲಿ ಡರ್ಬಿಯಲ್ಲಿ ಸ್ಪರ್ಧಿಸುವ ಕುದುರೆಗಳ ಕ್ರಮ ಸಂಖ್ಯೆಗಳ ಡ್ರಾ ಕೂಡ ನಡೆಯಿತು. ಭಾನುವಾರ  ಸಂಜೆ 4.05ಕ್ಕೆ ಬೇಸಿಗೆ ಕಾಲದ ರೇಸ್‌ಗಳು ನಡೆಯಲಿವೆ. 12 ಅಶ್ವಗಳು ಕಣದಲ್ಲಿವೆ.  ಅದರಲ್ಲಿ ಹತ್ತು ಗಂಡು ಮತ್ತು ಎರಡು ಹೆಣ್ಣು ಕುದುರೆಗಳಿವೆ. ಮೊದಲ ಸ್ಥಾನ ಪಡೆಯುವ ಕುದುರೆಗೆ ಸುಮಾರು ರೂ.99 ಲಕ್ಷ ಬಹುಮಾನ ನೀಡಲಾಗುತ್ತಿದೆ. 

ಬುಕ್‌ಮೇಕರ್ಸ್‌ಗಳಿಗೆ ಅವಕಾಶ: ಬಿಟಿಸಿಯು ಕೆಲವು ಕಾರಣಾಂತರಗಳಿಂದ ಹಣದ ಬಿಕ್ಕಟ್ಟು ಎದುರಿಸುತ್ತಿರುವ ಬಿಟಿಸಿಯು ಈ ಬಾರಿಯ ಡರ್ಬಿಗೆ ಉತ್ತಮ ಮೊತ್ತದ ಬಹುಮಾನವನ್ನು ನಿಗದಿಪಡಿಸಿದೆ. ಅಲ್ಲದೇ ಈ ಡರ್ಬಿಗೆ ಬುಕ್‌ಮೇಕರ್ಸ್‌ಗಳಿಗೆ ಅನುಮತಿ ನೀಡಲಾಗಿದ್ದು ಬಿಟಿಸಿಗೆ ಸ್ವಲ್ಪಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ. 17 ಬುಕ್‌ಮೆಕರ್ಸ್‌ಗಳಿಗೆ  ಲೈಸೆನ್ಸ್‌ ನೀಡಲಾಗುತ್ತಿದೆ. 

‘ಬಿಟಿಸಿಗೆ ಬುಕ್‌ಮೇಕರ್ಸ್‌ಗಳು ಜೀವನಾಡಿಗಳಿದ್ದಂತೆ.  ಅವರಿಲ್ಲದ ಕಾರಣಕ್ಕೆ ಟೋಟಲೈಟರ್ಸ್‌ ಮೇಲೆ ಒತ್ತಡ ಹೆಚ್ಚಿತ್ತು. ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಹೊರೆಯಿಂದಲೂ ಆದಾಯ ಕುಸಿದಿತ್ತು. ₹ 2200 ಕೋಟಿ ವಹಿವಾಟು ಬದಲು ₹ 300 ಕೋಟಿಗೆ ಇಳಿದಿದೆ. ಶೇ 28ರಷ್ಟು ಜಿಎಸ್‌ಟಿ ಪಾವತಿಸಲೇಬೇಕು. ಆದ್ದರಿಂದ ಬುಕ್‌ಮೇಕರ್ಸ್‌ಗಳಿಂದ ಬರುವ ಲೈಸೆನ್ಸ್‌ ಶುಲ್ಕವು ಮಹತ್ವದ್ದಾಗಿದೆ’ ಎಂದು ಸ್ಟೀವರ್ಡ್ ಉದಯ್ ಈಶ್ವರನ್ ವಿವರಿಸಿದರು.

‘ಕ್ಲಬ್‌ಗೆ ಆಫ್‌ಕೋರ್ಸ್‌ ರೇಸ್‌ ಬೆಟ್ಟಿಂಗ್  ಮೂಲಕ ಹೆಚ್ಚು ಆದಾಯ ಸಿಗುತ್ತದೆ. ಆನ್‌ಕೋರ್ಸ್‌ ಬೆಟ್ಟಿಂಗ್‌ ಆದಾಯದಲ್ಲಿ  ನಿರ್ವಹಣೆ ವೆಚ್ಚ ಸರಿದೂಗಿಸಬೇಕಾಗುತ್ತದೆ. ಬುಕ್‌ಮೇಕರ್ಸ್‌ ಇಲ್ಲದೇ ಆದಾಯ ಖೋತಾ ಆಗಿತ್ತು. ಇದೀಗ 17 ಬುಕ್‌ಮೇಕರ್ಸ್‌ಗೆ ಲೈಸೆನ್ಸ್‌ ನೀಡಲು ಅನುಮತಿ ಸಿಗುತ್ತಿದೆ. ಸರ್ಕಾರವು ಈ ಕುರಿತು ಮುತುವರ್ಜಿ ವಹಿಸಿ ಕಾನೂನುಪ್ರಕಾರ ಪರಿಶೀಲನೆ ಮತ್ತು ಪೊಲೀಸ್ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು. 

ಇತ್ತೀಚೆಗೆ ಕ್ಲಬ್‌ನಲ್ಲಿ ನಡೆದ ಕೆಲವು ವಿವಾದಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್ ಅವರಿಗೆ ಕ್ಲಬ್‌ ಕುರಿತು ಸಮಗ್ರ ವಿವರಣೆ ನೀಡಿದ್ದೇವೆ. 13 ಸ್ಲೈಡ್‌ಗಳ ಪ್ರೆಸೆಂಟೇಷನ್ ಕೂಡ ನೀಡಿದ್ದು, ಅವರಿಗೂ ಬುಕ್‌ಮೇಕರ್ಸ್‌ಗಳ ಪಾತ್ರದ ಕುರಿತು ಅರಿವು ಮೂಡಿದೆ. ಅಕ್ರಮ ಬುಕ್‌ಕೀಪಿಂಗ್ ಚಟುವಟಿಕೆಗೆ ಕಡಿವಾಣ ಹಾಕಲು ನಾವು (ಕ್ಲಬ್) ಶ್ರಮಿಸಿದ್ದರ ಕುರಿತು ಅವರಿಗೂ ಮನವರಿಕೆಯಾಗಿದೆ’ ಎಂದರು. 

‘ಪ್ರತಿಯೊಬ್ಬ ಬುಕ್‌ಮೇಕರ್ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಮೂಲಕ ಬೆಟ್ಟಿಂಗ್ ನಿರ್ವಹಿಸಬೆಕು. ಬೆಟ್ ಮಾಡಿದ ಅಧಿಕೃತ ಪಾವತಿ ನೀಡಬೇಕು. ಎಲ್ಲ ವಹಿವಾಟುಗಳು ಬಿಟಿಸಿಯ ಕೇಂದ್ರೀಕೃತ ಸರ್ವರ್‌ಗೆ ಜೋಡಣೆ ಮಾಡುವ ವ್ಯವಸ್ಥೆಯನ್ನು ಮುಂಬರುವ ತಿಂಗಳಲ್ಲಿ ಮಾಡಲಾಗುವುದು’ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT