ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಸಿದ್ಧತೆ: ಗೋಲ್‌ಕೀಪರ್‌ಗಳಿಗೆ ಡೆನಿಸ್ ಮಾರ್ಗದರ್ಶನ

ಭಾರತ ಪುರುಷರ ಹಾಕಿ ತಂಡ
Published 17 ಮಾರ್ಚ್ 2024, 15:44 IST
Last Updated 17 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತಯಾರಿಯಲ್ಲಿರುವ ಭಾರತ ಪುರುಷರ ಹಾಕಿ ತಂಡಕ್ಕೆ ಡಚ್ ಗೋಲ್‌ಕೀಪಿಂಗ್ ಪರಿಣತ ಡೆನ್ನಿಸ್ ವ್ಯಾನ್ ಡಿ ಪೋಲ್ ಮಾರ್ಗದರ್ಶನ ನೀಡುತ್ತಿದ್ದಾರೆ.

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತರಬೇತಿ ಶಿಬಿರವನ್ನು 45 ವರ್ಷದ ಡೆನಿಸ್ ಸೇರಿಕೊಂಡಿದ್ದಾರೆ. ಅವರು ಭಾರತ ತಂಡದ ಗೋಲ್‌ಕೀಪರ್‌ಗಳಾದ ಪಿ.ಆರ್. ಶ್ರೀಜೇಶ್, ಕ್ರಿಶನ್ ಪಾಠಕ್ ಮತ್ತು ಸೂರಜ್ ಕರ್ಕೇರ ಅವರಿಗೆ ತರಬೇತಿ ನೀಡುವರು.

ಭಾರತ ತಂಡದ ಮುಖ್ಯ ಕೋಚ್‌ ಕ್ರೇಗ್ ಫುಲ್ಟನ್ ಅವರ ಮೇಲ್ವಿಚಾರಣೆಯಲ್ಲಿ 10 ದಿನಗಳ ವಿಶೇಷ ಗೋಲ್‌ಕೀಪಿಂಗ್ ಶಿಬಿರವು ಮಾರ್ಚ್ 26ರಂದು ಕೊನೆಗೊಳ್ಳಲಿದೆ. ನಂತರ ತಂಡವು ಆಸ್ಟ್ರೇಲಿಯಾ ಪ್ರವಾಸ ಹೊರಡಲಿದೆ.

‘ಭಾರತದ ಪುರುಷರ ಹಾಕಿ ತಂಡಕ್ಕೆ ಇದು ಅತ್ಯಂತ ಪ್ರಮುಖ ಹಂತವಾಗಿದೆ. ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕದ ನಿರೀಕ್ಷೆಯಲ್ಲಿರುವ ತಂಡಕ್ಕೆ ಹಾಕಿ ಇಂಡಿಯಾವು ಎಲ್ಲಾ ಬೆಂಬಲವನ್ನು ಒದಗಿಸುತ್ತದೆ. ಈ ವಿಶೇಷ ತರಬೇತಿಯಲ್ಲಿ ಗೋಲ್ ಕೀಪಿಂಗ್ ಮತ್ತು ಡ್ರ್ಯಾಗ್ ಫ್ಲಿಕ್ಕಿಂಗ್‌  ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದೇವೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಾಲ್ಕು ವರ್ಷಗಳಿಂದ ಭಾರತದ ಗೋಲ್‌ಕೀಪರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಡೆನಿಸ್ ಅವರನ್ನು ತಂಡದೊಂದಿಗೆ ತೊಡಗಿಸಿಕೊಳ್ಳಲು ನಾವು ಸಂತೋಷ ಪಡುತ್ತೇವೆ. ಆಟಗಾರರ ಕಾರ್ಯಕ್ಷಮತೆ ಹೆಚ್ಚಿಸಲು ಅವರಿಂದ ಸಲಹೆ ಪಡೆಯುತ್ತೇವೆ’ ಎಂದು ಹೇಳಿದ್ದಾರೆ.

ಕಳೆದ ವರ್ಷ ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನ ವ್ಯಾನ್ ಡಿ ಪೋಲ್ ಅವರು ಭಾರತ ತಂಡದೊಂದಿಗೆ ಎರಡು ವಿಶೇಷ ಶಿಬಿರಗಳನ್ನು ನಡೆಸಿದ್ದರು. ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವು ಚಿನ್ನದ ಸಾಧನೆಯೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT