ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಶೂಟಿಂಗ್‌: ಗರಿಗೆದರಿದ ನಿರೀಕ್ಷೆ

Published 23 ಸೆಪ್ಟೆಂಬರ್ 2023, 15:19 IST
Last Updated 23 ಸೆಪ್ಟೆಂಬರ್ 2023, 15:19 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ಶೂಟರ್‌ಗಳು ಈ ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ನಿರೀಕ್ಷೆಗೆ ತಕ್ಷ ಪ್ರದರ್ಶನ ನೀಡಿಲ್ಲ. ಆದರೆ ಇತ್ತೀಚೆಗೆ  ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ, ಅವರನ್ನು ಏಷ್ಯನ್‌ ಕ್ರೀಡಾಕೂಟದಲ್ಲಿ ಲಘುವಾಗಿ ಪರಿಗಣಿಸುವಂತಿಲ್ಲ ಎಂಬುದನ್ನು ಸೂಚಿಸಿದೆ.

ಭಾರತ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಒಟ್ಟು 14 (ಆರು ಚಿನ್ನ ಮತ್ತು ಎಂಟು ಕಂಚು) ಪದಕಗಳನ್ನು ಗೆದ್ದುಕೊಂಡಿತ್ತು. ಈಗ ಮತ್ತೊಂದು ಏಷ್ಯನ್ ಗೇಮ್ಸ್‌ ಎದುರಾಗಿದ್ದು, ಭರವಸೆಯೂ ಗರಿಗೆದರಿದೆ. 2018ರ ಜಕಾರ್ತಾ ಕ್ರೀಡೆಗಳಲ್ಲಿ ಭಾರತದ ಗುರಿಕಾರರು ಎರಡು ಸ್ವರ್ಣ, ನಾಲ್ಕು ರಜತ ಸೇರಿ 9 ಪದಕಗಳನ್ನು ಗೆದ್ದುಕೊಂಡಿದ್ದರು. ಆಗಿನ ತಂಡದಲ್ಲಿದ್ದ ಕೆಲವು ಅನುಭವಿಗಳು ಈಗ ತಂಡದಲ್ಲಿಲ್ಲದಿದ್ದರೂ, ಸುಧಾರಿತ ಪ್ರದರ್ಶನದ ವಿಶ್ವಾಸವಂತೂ ಇದೆ.

ಕಳೆದ ಸಲ ಚಿನ್ನದ ಪದಕಗಳನ್ನು ಗೆದ್ದ ರಾಹಿ ಸರ್ನೊಬತ್ (25 ಮೀ. ಸ್ಪೋರ್ಟ್ಸ್‌ ಪಿಸ್ತೂಲ್) ಮತ್ತು ಸೌರಭ್ ಚೌಧರಿ (10 ಮೀ. ಏರ್‌ ಪಿಸ್ತೂಲ್‌) ಈ ಸಲ ತಂಡದಲ್ಲಿಲ್ಲ. ರೈಫಲ್ ವಿಭಾಗದಲ್ಲಿ ಅನುಭವಿಗಳಾದ ಸಂಜೀವ್ ರಜಪತೂತ್‌, ಅಪೂರ್ವಿ ಚಾಂಡೇಲಾ ಮತ್ತು ಹೀನಾ ಸಿಧು ಕೂಡ ಇಲ್ಲ.

ಆದರೆ ಪ್ರತಿಭಾನ್ವಿತರಾದ ರುದ್ರಾಂಕ್ಷ್ ಪಾಟೀಲ್, ಇಶಾ ಸಿಂಗ್ (10 ಮೀ. ಏರ್ ಪಿಸ್ತೂಲ್), ಸಿಫ್ತ್‌ ಕೌರ್ ಸಮ್ರಾ ಮತ್ತು ಅಶಿಕ ಚೋಕ್ಸಿ (50 ಮೀ. ರೈಫಲ್ 3–ಪೊಷಿಷನ್ಸ್‌) ಅವರು ಪದಕಕ್ಕೆ ಗುರಿಯಿಡಬಲ್ಲ ಸಮರ್ಥರು. ಇವರಿಗೆ ಆತಿಥೇಯ ಚೀನಾದಿಂದಲೇ ಹೆಚ್ಚು ಪೈಪೋಟಿ  ಎದುರಾಗಬಹುದು.

19 ವರ್ಷದ ರುದ್ರಾಂಕ್ಷ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಜೊತೆ ಒಲಿಂಪಿಕ್ಸ್‌ಗೆ ಸ್ಥಾನ ಕಾದಿರಿಸಿದ್ದು, ಅವರ ಮೇಲೆ ನಿರೀಕ್ಷೆಯ ಭಾರ ಇದೆ. 10 ಮೀ. ಏರ್‌ ರೈಫಲ್‌ನಲ್ಲಿ ಮತ್ತೊಬ್ಬ ಪ್ರಮುಖ ಸ್ಪರ್ಧಿ ಎಂದರೆ ಒಲಿಂಪಿಯನ್ ದಿವ್ಯಾಂಶ್ ಸಿಂಗ್ ಪನ್ವರ್‌. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿರಾಶೆ ಅನುಭವಿಸಿದ ಯುವ ಶೂಟರ್‌ ಐಶ್ವರಿ ಪ್ರತಾಪ್ ಸಿಂಗ್ ತೋಮಾರ್ ಅದನ್ನು ಮರೆತು ಇಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಸಿಫ್ಟ್‌ ಅವರೂ ಪದಕಕ್ಕೆ ಗಂಭೀರ ಆಕಾಂಕ್ಷಿ. ಒಲಿಂಪಿಕ್ಸ್‌ಗೆ ಕೋಟಾ ಗಿಟ್ಟಿಸಿರುವ ಸ್ವಪ್ನಿಲ್ ಕುಸಾಲೆ ಅವರು ಏಷ್ಯಾದಲ್ಲೇ ಉತ್ತಮ ಶೂಟರ್‌ ಆಗಿ ಬೆಳೆದಿದ್ದಾರೆ.

21 ವರ್ಷದ ಮನು ಭಾಕರ್‌ ಅವರು ತಂಡದಲ್ಲಿರುವ ಅನುಭವಿ ಎನಿಸಿದ್ದು, ಇಲ್ಲಿ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮಾತ್ರ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT