ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ | ನಮ್ಮ ಮೇಲೆ ವಿಶ್ವಾಸವಿಡಿ; ನಿರಾಶೆಗೊಳಿಸುವುದಿಲ್ಲ: ಹರ್ಮನ್‌ಪ್ರೀತ್ ಭರವಸೆ

Published 5 ಜುಲೈ 2024, 14:30 IST
Last Updated 5 ಜುಲೈ 2024, 14:30 IST
ಅಕ್ಷರ ಗಾತ್ರ

ನವದೆಹಲಿ: ನಿರೀಕ್ಷೆಯ ಭಾರದೊಡನೆ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ಗೆ ಹೋಗುತ್ತಿರುವುದನ್ನು ಮನಗಂಡಿರುವ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ‘ಭರ್ಜರಿ ಯಶಸ್ಸಿನೊಡನೆ ಪ್ಯಾರಿಸ್‌ನಿಂದ ಮರಳುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ವಿಜಯೀ ಟಿ20 ಕ್ರಿಕೆಟ್‌ ತಂಡದ ರೀತಿ ಅಭಿಮಾನಿಗಳೊಂದಿಗೆ ದೊಡ್ಡ ಮಟ್ಟದಲ್ಲಿ ಸಂಭ್ರಮ ಆಚರಿಸುವುದಾಗಿಯೂ ಹೇಳಿದ್ದಾರೆ.

ಮೂರು ವರ್ಷ ಕೆಳಗೆ ಟೋಕಿಯೊದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ತಂಡ, ಹಾಕಿಯಲ್ಲಿ 41 ವರ್ಷಗಳ ಪದಕದ ಬರವನ್ನು ಕೊನೆಗಾಣಿಸಿತ್ತು.

‘ನಾವು ಟೋಕಿಯೊದಲ್ಲಿ ಪದಕ ಗೆದ್ದಾಗ ಅದು ಭಾರತದಲ್ಲಿ ಹಾಕಿಗೆ ಟಾನಿಕ್‌ ರೀತಿ ಕೆಲಸ ಮಾಡಿತ್ತು. ಈ ಬಾರಿ ನಮ್ಮ ಹೊಣೆ ಹೆಚ್ಚಾಗಿದೆ. ಆ ಪದಕ ಗೆದ್ದ ನಂತರ ನಮ್ಮ ಮೇಲೆ ಅಭಿಮಾನ ಮತ್ತು ಗೌರವ ಎಷ್ಟು ಹೆಚ್ಚಾಗಿದೆ ಎಂಬುದನ್ನು ಎಲ್ಲರಿಗೂ ತಿಳಿದಿರುವ ವಿಷಯ’ ಎಂದು ಹರ್ಮನ್‌ಪ್ರೀತ್‌ ಪಿಟಿಐಗೆ ತಿಳಿಸಿದರು.

‘ಈ ಬಾರಿಯೂ ನಾವು ಮೊದಲ ಪಂದ್ಯದಿಂದ ಕೊನೆಯ ಪಂದ್ಯದವರೆಗೂ ಶೇ 100ರಷ್ಟು ಶ್ರಮ ಹಾಕುತ್ತೇವೆ. ನಮ್ಮ ಮೇಲೆ ವಿಶ್ವಾಸ ಇಡಿ. ನಾವು ನಿಮ್ಮನ್ನು ನಿರಾಶರನ್ನಾಗಿಸುವುದಿಲ್ಲ’ ಎಂದು ಅವರು ಭರವಸೆಯಿತ್ತರು.

ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್‌ ಗೆದ್ದುದು ಹರ್ಮನ್‌ಪ್ರೀತ್‌ ಅವರಲ್ಲೂ ಸಂತಸ ಮೂಡಿಸಿದೆ. ‘ವಿಶ್ವಕಪ್‌ನಂಥ ದೊಡ್ಡ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಿ ಟ್ರೋಫಿ ಗೆಲ್ಲುವುದಕ್ಕಿಂತ ದೊಡ್ಡದು ಬೇರಾವುದೂ ಇಲ್ಲ. ಇಡೀ ದೇಶ ಕ್ರಿಕೆಟಿಗರೊಂದಿಗೆ ಖುಷಿಪಟ್ಟಿತು. ಎಲ್ಲರ ಮುಖದಲ್ಲಿ ಸಂಭ್ರಮದ ಕಳೆ ಮೂಡಿಸಿರುವುದು ಹೆಮ್ಮೆಯ ವಿಷಯ’ ಎಂದರು.

ಪ್ಯಾರಿಸ್‌ನಿಂದ ಮರಳಿದ ಬಳಿಕ ಅಂಥಹದೇ ಖುಷಿ ಹಂಚಲು ಹರ್ಮನ್‌ಪ್ರೀತ್‌ ಕಾತರರಾಗಿದ್ದಾರೆ. ‘ಪ್ಯಾರಿಸ್‌ನಲ್ಲಿ ಚಿನ್ನಗೆದ್ದು ವಾ‍ಪಸಾದ ಬಳಿಕ ನಾವು ಇಂಥದ್ದೇ ಖುಷಿಯನುಭವಿಸಲು ಬಯಸಿದ್ದೇವೆ’ ಎಂದಿದ್ದಾರೆ. ಇದು ಹರ್ಮನ್‌ಪ್ರೀತ್ ಅವರಿಗೆ ಮೂರನೇ ಒಲಿಂಪಿಕ್ಸ್‌.

ಭಾರತ ತಂಡದ ನಾಯಕ 188 ಪಂದ್ಯಗಳಿಂದ 219 ಗೋಲುಗಳನ್ನು ಗಳಿಸಿದ್ದಾರೆ. ಅವರು ರೋಹಿತ್‌ ಶರ್ಮಾ ಅವರ ದೊಡ್ಡ ಅಭಿಮಾನಿ. ‘ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಸೋತ ನಂತರ ಅವರು (ರೋಹಿತ್‌), ಟಿ20 ವಿಶ್ವಕಪ್‌ ಗೆದ್ದುಕೊಂಡಿರುವುದು ದೊಡ್ಡ ವಿಷಯ. ಅವರದೂ ದೀರ್ಘ ಪಯಣವಾಗಿದ್ದು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಇಡೀ ದೇಶಕ್ಕೆ ಅವರ ಬಗ್ಗೆ ಹೆಮ್ಮೆಯಿದೆ’ ಎಂದರು.

ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ನಾಯಕತ್ವ ವಹಿಸಿರುವ ಹರ್ಮನ್‌ಪ್ರೀತ್, ಮೈದಾನದಲ್ಲಿ ಶಾಂತಚಿತ್ತದಿಂದ ಮತ್ತು ಏಕಾಗ್ರತೆಯಿಂದ ಇರುತ್ತಾರೆ.

‘ನಾಯಕನಾದವನಿಗೆ ತುಂಬಾ ಜವಾಬ್ದಾರಿಗಳಿರುತ್ತವೆ. ಮೈದಾನದಿಂದ ಶಾಂತಚಿತ್ತರಾಗಿದ್ದಲ್ಲಿ ಮಾತ್ರ ಉಳಿದವರಿಗೆ ನೀವು ನೆರವಾಗಲು ಸಾಧ್ಯ. ಪಂದ್ಯ ಮತ್ತು ಅಭ್ಯಾಸದ ವೇಳೆ ಸಮಾಧಾನದಿಂದ ಇರುತ್ತೇನೆ. ಆಟಗಾರರು ತಮ್ಮಿಂದಾದಷ್ಟು ಉತ್ತಮ ಆಟ ನೀಡಲು ಹುರಿದುಂಬಿಸುತ್ತೇನೆ’ ಎಂದರು.

‘ಪ್ರೊ ಲೀಗ್‌ನಲ್ಲಿ ನಮ್ಮ ಗಮನ ಎದುರಾಳಿಗಳ ಸಾಮರ್ಥ್ಯ ವಿಶ್ಲೇಷಿಸುವ ಕಡೆಯಿತ್ತು. ಆಟದ ಎಲ್ಲವನ್ನು ತೆರೆದಿಡುವ ಕಡೆ ಇರಲಿಲ್ಲ. ಎಲ್ಲ ಡ್ರ್ಯಾಗ್‌ಫ್ಲಿಕರ್‌ಗಳಿಗೆ ಅವಕಾಶ ನೀಡುವುದಾಗಿದೆ. ನಮ್ಮ ಪ್ರದರ್ಶನ ಉತ್ತಮವಾಗಿತ್ತು. ಆದರೆ ನಾವು ಇನ್ನಷ್ಟು ಚೆನ್ನಾಗಿ ಆಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಭಾರತ ಒಲಿಂಪಿಕ್ಸ್‌ನಲ್ಲಿ ಪ್ರಬಲ ತಂಡಗಳಿರುವ ಗುಂಪಿನಲ್ಲಿದೆ. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ಆರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ ವಿರುದ್ಧ ಆಡಬೇಕಾಗಿದೆ. ‘ಒಲಿಂಪಿಕ್ಸ್‌ನಲ್ಲಿ ಯಾವುದೇ ಗುಂಪು ಇರಲಿ, ಪ್ರತಿಯೊಂದು ಪಂದ್ಯವೂ ಮಹತ್ವದ್ದು. ಮೊದಲ ಪಂದ್ಯ ನ್ಯೂಜಿಲೆಂಡ್‌ ವಿರುದ್ಧ ಇದೆ. ಸದ್ಯ ನಮ್ಮ ಗಮನ ಆ ಪಂದ್ಯದ ಕಡೆಗಷ್ಟೇ ಇರುತ್ತದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇವೆ’ ಎಂದು ಹರ್ಮನ್‌ಪ್ರೀತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT