ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ: ಕೆನ್ಯಾ ಅಥ್ಲೀಟ್‌ಗೆ ಸಮಾಜ ಸೇವೆ ‘ಶಿಕ್ಷೆ’

Last Updated 13 ಮಾರ್ಚ್ 2021, 13:51 IST
ಅಕ್ಷರ ಗಾತ್ರ

ನೈರೋಬಿ: ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ತಿದ್ದಿದ ಆರೋಪದಡಿ ದೂರ ಅಂತರದ ಓಟಗಾರ್ತಿ ಫ್ಲಾರೆನ್ಸ್ ಜೆಕೊಸ್ಗಿ ಚೆಪೋಸಿ ಅವರಿಗೆ ಒಂದು ವರ್ಷ ಸಮಾಜಸೇವೆಯ ಶಿಕ್ಷೆ ವಿಧಿಸಲಾಗಿದೆ. ಕೆನ್ಯಾದ ಉದ್ದೀಪನ ಮದ್ದು ನಿಷೇಧ ಸಂಸ್ಥೆ (ಎಡಿಎಕೆ) ಶನಿವಾರ ಈ ವಿಷಯವನ್ನು ತಿಳಿಸಿದೆ.

2017ರಲ್ಲಿ, ಸಾಮರ್ಥ್ಯ ವೃದ್ಧಿಗಾಗಿ ಪ್ರೆಡ್ನಿಸೊಲೊನ್ ಎಂಬ ಔಷಧವನ್ನು ಬಳಸಿದ ಆರೋಪ 36 ವರ್ಷದ ಫ್ಲಾರೆನ್ಸ್‌ ಮೇಲೆ ಇತ್ತು. ನಾಲ್ಕು ವರ್ಷಗಳ ವಿಚಾರಣೆಯ ನಂತರ ಈ ತೀರ್ಪು ಪ್ರಕಟವಾಗಿದ್ದು ಫ್ಲಾರೆನ್ಸ್, ಕ್ರೀಡಾ ನ್ಯಾಯಾಲಯದಿಂದ ದಂಡನೆಗೆ ಒಳಗಾದ ಕೆನ್ಯಾದ ಮೊದಲ ಅಥ್ಲೀಟ್‌ ಆಗಿದ್ದಾರೆ.

ಆರೋಪದಿಂದ ಮುಕ್ತಗೊಳ್ಳಲು ಅವರು ಎಲ್ಡೊರೆಟ್ ಉವಾಸಿನ್ ಗಿಶು ಆಸ್ಪತ್ರೆಯಿಂದ ನಕಲಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದರು. ಆದರೆ ಅಲ್ಲಿನ ಜಿಲ್ಲಾ ಆಸ್ಪತ್ರೆಯು ದಾಖಲೆಗಳು ನಕಲಿ ಎಂದೂ ಆ ಆಸ್ಪತ್ರೆಯಲ್ಲಿ ಫ್ಲಾರೆನ್ಸ್‌ ಚಿಕಿತ್ಸೆ ಪಡೆದುಕೊಂಡಿರಲಿಲ್ಲ ಎಂದೂ ತಿಳಿಸಿತ್ತು.

ಉದ್ದೀಪನ ಮದ್ದು ಸೇವಿಸಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 60ಕ್ಕೂ ಹೆಚ್ಚು ಅಥ್ಲೀಟ್‌ಗಳ ಮೇಲೆ ನಿಷೇಧ ಹೇರಲಾಗಿದೆ. ನಕಲಿ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸಿದ ಆರೋಪದಡಿ ಜೆಮಿಮಾ ಸುಮ್ಗಾಂಗ್ ಮೇಲೆ ಸುದೀರ್ಘ ಅವಧಿಯ ನಿಷೇಧ ಹೇರಲಾಗಿದೆ. 2016ರ ರಿಯೊ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಜೆಮಿಮಾ ಈ ಸಾಧನೆ ಮಾಡಿದ ಕೆನ್ಯಾದ ಮೊದಲ ಮಹಿಳೆ ಎಂದೆನಿಸಿಕೊಂಡಿದ್ದರು. ಒಲಿಂಪಿಕ್ಸ್‌ ಮುಗಿದು ಐದು ತಿಂಗಳ ನಂತರ ಕ್ರೀಡಾಕೂಟವೊಂದಕ್ಕೆ ಸಂಬಂಧಿಸಿ ಪರೀಕ್ಷೆ ನಡೆಸಿದಾಗ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT