ಪ್ಯಾರಿಸ್: ಭಾರತದ ಕಿರಣ್ ಪಹಲ್ ಸೋಮವಾರ ಒಲಿಂಪಿಕ್ಸ್‌ನ ಮಹಿಳೆಯರ 400 ಮೀಟರ್ ಸ್ಪರ್ಧೆಯಲ್ಲಿ ನೇರವಾಗಿ ಸೆಮಿಫೈನಲ್ ಅರ್ಹತೆ ಪಡೆಯಲು ವಿಫಲವಾದರು. ತಮ್ಮ ಹೀಟ್‌ನಲ್ಲಿ ಏಳನೇ ಸ್ಥಾನ ಗಳಿಸಿ ಇದೀಗ ರೆಪೆಷಾಜ್ ಸುತ್ತಿನಲ್ಲಿ ಓಡಲಿದ್ದಾರೆ.
24ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದ ಪಹಲ್ ಅವರು 52.51 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (50.92) ಕಡಿಮೆಯಾಗಿದೆ.
ವಿಶ್ವ ಚಾಂಪಿಯನ್ ಡೊಮಿನಿಕಾದ ಮರಿಲಿಡಿ ಪಾಲಿನೊ (49.42) ಹೀಟ್‌ಗಳಲ್ಲಿ ಅಗ್ರಸ್ಥಾನ ಪಡೆದರು. ನಂತರದ ಸ್ಥಾನದಲ್ಲಿ ಅಮೆರಿಕದ ಆಲಿಯಾ ಬಟ್ಲರ್ (50.52) ಮತ್ತು ಆಸ್ಟ್ರಿಯಾದ ಸುಸಾನ್ನೆ ಗೊಗ್ಲ್ ವಾಲಿ (50.67) ಇದ್ದಾರೆ.
ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ 50.92 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದ ಪಹಲ್, ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 200 ಮೀಟರ್‌ನಿಂದ 1500 ಮೀಟರ್ ವರೆಗಿನ ಎಲ್ಲಾ ವೈಯಕ್ತಿಕ ಟ್ರ್ಯಾಕ್ ಸ್ಪರ್ಧೆಗಳಿಗೆ ರೆಪೆಷಾಜ್ ಸುತ್ತನ್ನು ಪರಿಚಯಿಸಲಾಗಿದೆ. ಇದರಲ್ಲಿ ಹರ್ಡಲ್ಸ್ ಸ್ಪರ್ಧೆಗಳೂ ಸೇರಿವೆ.
ಆರು ಹೀಟ್ಸ್‌ಗಳಲ್ಲಿ ಅಗ್ರ ಮೂರು ಸ್ಥಾನ ಪಡೆದವರು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಹೀಟ್ಸ್‌ನಲ್ಲಿದ್ದ ಉಳಿದ ಸ್ಪರ್ಧಿಗಳು ರಿಪೆಷಾಜ್ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಎರಡನೇ ಅವಕಾಶ ಹೊಂದಿದ್ದಾರೆ. ರೆಪೆಷಾಜ್ ಸುತ್ತು ಮಂಗಳವಾರ ನಡೆಯಲಿದೆ.