ಕಲ್ಲು ಬಂಡೆಗಳಿಂದ ಕೂಡಿರುವ ಕಡಿದಾದ ರಸ್ತೆಗಳು. ಅಪಾಯವನ್ನು ಕೈಬೀಸಿ ಕರೆಯುವ ಮರಳುಗಾಡಿನ ಪ್ರಪಾತಗಳು. ಇಂತಹ ದುರ್ಗಮ ಹಾದಿಗಳಲ್ಲಿ ಪ್ರಾಣದ ಹಂಗು ತೊರೆದು ಮೋಟರ್ ಬೈಕ್ ಚಲಾಯಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಬೈಕ್ ಸಾಹಸಿ ಕರ್ನಾಟಕದ ಅಬ್ದುಲ್ ವಾಹೀದ್ ತನ್ವೀರ್.

ಮೈಸೂರಿನ ತನ್ವೀರ್, ಮೋಟರ್ ಸ್ಪೋರ್ಟ್ಸ್‌ನಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಶೆರ್ಕೊ ಟಿವಿಎಸ್ ರ‍್ಯಾಲಿ ಫ್ಯಾಕ್ಟರಿ ತಂಡದ ಸದಸ್ಯರಾಗಿರುವ ತನ್ವೀರ್, ರ‍್ಯಾಲಿ ಮತ್ತು ಸೂಪರ್‌ಕ್ರಾಸ್ ವಿಭಾಗಗಳಲ್ಲಿ ಮೂರು ಸಲ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ವಿಶ್ವದ ಅತ್ಯಂತ ಅಪಾಯಕಾರಿ ರ‍್ಯಾಲಿ ‘ರೇಡ್ ಡಿ ಹಿಮಾಲಯ’ದಲ್ಲಿ ಪ್ರಶಸ್ತಿ ಜಯಿಸಿದ ಹಿರಿಮೆಗೂ ಭಾಜನರಾಗಿದ್ದಾರೆ. 2016ರಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ‘ಗ್ರೂಪ್ ಎ’ ವಿಭಾಗದಲ್ಲಿ ಸ್ಪರ್ಧಿಸಿ ಈ ಸಾಧನೆ ಮಾಡಿದ್ದರು. 2017ರಲ್ಲಿ ರಾಜಸ್ಥಾನದಲ್ಲಿ ಜರುಗಿದ್ದ ಡೆಸರ್ಟ್ ಸ್ಟಾರ್ಮ್ ರ‍್ಯಾಲಿಯಲ್ಲಿ ರನ್ನರ್ ಅಪ್ ಆಗಿದ್ದ ತನ್ವೀರ್, ಮರು ವರ್ಷ ಆಯೋಜನೆಯಾಗಿದ್ದ ಇಂಡಿಯಾ ಬಾಜಾ ರ‍್ಯಾಲಿಯ 500 ಸಿ.ಸಿ.ಒಳಗಿನವರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದರು.

ಅದೇ ವರ್ಷ (2018) ಪಾನ್ ಆಫ್ರಿಕಾ ರ‍್ಯಾಲಿಯಲ್ಲೂ ತನ್ವೀರ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಎಂಡ್ಯುರೊ ಕ್ಲಾಸ್ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಹೋದ ವಾರ ನಡೆದಿದ್ದ ಮೆರ್ಗೌಜಾ ರ‍್ಯಾಲಿಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿರುವ ಅವರು ತಮ್ಮ ಸಾಧನೆಯ ಹಾದಿ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಮೋಟರ್ ಸ್ಪೋರ್ಟ್ಸ್ ಅತ್ಯಂತ ಅಪಾಯಕಾರಿ. ಪ್ರಾಣಕ್ಕೆ ಸಂಚಕಾರ ತರುವಂತಹ ಕ್ರೀಡೆ. ಇದರ ಅರಿವಿದ್ದರೂ ಇದನ್ನೇ ವೃತ್ತಿಪರವಾಗಿ ಸ್ವೀಕರಿಸಲು ಕಾರಣ?

ಮೋಟರ್ ಸ್ಪೋರ್ಟ್ಸ್ ಬಗ್ಗೆ ಆರಂಭದಿಂದಲೂ ವಿಶೇಷ ಆಸಕ್ತಿ ಇತ್ತು. ಅಣ್ಣ ಅಬ್ದುಲ್ ಮಾಜೀದ್ ಕೂಡಾ ರ‍್ಯಾಲಿ ಪಟು ಆಗಿದ್ದರು. ಅವರು ಭಾಗವಹಿಸುತ್ತಿದ್ದ ಸ್ಪರ್ಧೆಗಳನ್ನು ನೋಡಲು ಹೋಗುತ್ತಿದ್ದೆ. ಹಾಗೇ ನೋಡುತ್ತಾ ಬೆಳೆದ ನಾನು ಇದನ್ನು ವೃತ್ತಿಪರವಾಗಿ ಸ್ವೀಕರಿಸಿದೆ. ಇದರಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಕನಸು ಕಂಡೆ. ಆರಂಭದಲ್ಲಿ ಸ್ಥಳೀಯವಾಗಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುತ್ತಾ ಸಾಗಿದೆ. ಆಗೆಲ್ಲಾ ಸ್ನೇಹಿತರು ಅಭಿನಂದಿಸಿದಾಗ ಖುಷಿಯಾಗುತ್ತಿತ್ತು. ಇನ್ನಷ್ಟು ಸಾಧನೆಗೆ ಅದು ಸ್ಫೂರ್ತಿಯಾಯಿತು.

* ನಿಮ್ಮ ನಿರ್ಧಾರವನ್ನು ಮನೆಯವರು ವಿರೋಧಿಸಲಿಲ್ಲವೆ?

ಶುರುವಿನಲ್ಲಿ ಎಲ್ಲರೂ ಸಾಕಷ್ಟು ಆತಂಕ ಪಡುತ್ತಿದ್ದರು. ಪ್ರಶಸ್ತಿಗಳನ್ನು ಜಯಿಸುತ್ತಾ ಹೋದಂತೆ ಅವರಲ್ಲೂ ವಿಶ್ವಾಸ ಮೂಡಿತು. ಕ್ರಮೇಣ ಅಪ್ಪ ಮತ್ತು ಅಮ್ಮ ನನ್ನ ಕನಸಿಗೆ ಆಸರೆಯಾಗಿ ನಿಂತರು. ಈಗ ಅವರಿಗೆ ಎಲ್ಲವೂ ಅಭ್ಯಾಸವಾಗಿ ಹೋಗಿದೆ.

* ರ‍್ಯಾಲಿಪಟುಗೆ ಇರಬೇಕಾದ ಗುಣಲಕ್ಷಣಗಳೇನು?

ಮುಖ್ಯವಾಗಿ ಧೈರ್ಯ ಇರಬೇಕು. ಶರವೇಗದಲ್ಲಿ ಬೈಕ್ ಚಲಾಯಿಸುವ ಕಲೆ ಕರಗತ ಮಾಡಿಕೊಂಡಿರಬೇಕು. ಎಂತಹುದೇ ಹಾದಿಯಲ್ಲಾದರೂ ಛಲದಿಂದ ಬೈಕ್ ಓಡಿಸಬಲ್ಲೆ ಎಂಬ ಅಚಲ ವಿಶ್ವಾಸ ಇರಬೇಕು.

* ರ‍್ಯಾಲಿ ಮತ್ತು ಸೂಪರ್‌ಕ್ರಾಸ್‌ಗೆ ಇರುವ ವ್ಯತ್ಯಾಸಗಳು ಏನು?

ಸೂಪರ್ ಕ್ರಾಸ್‌ನಲ್ಲಿ ಒಂದೂವರೆ ಕಿಲೊ ಮೀಟರ್ ದೂರದ ಟ್ರ್ಯಾಕ್ ಇರುತ್ತದೆ. ಅದರಲ್ಲೇ ಹತ್ತು ಇಲ್ಲವೇ ಹದಿನೈದು ಸುತ್ತು ಹಾಕಬೇಕಾಗುತ್ತದೆ. ಸ್ಪರ್ಧೆಗೂ ಮುನ್ನ ಖುದ್ದಾಗಿ ಟ್ರ್ಯಾಕ್ ನೋಡಿರುತ್ತೇವೆ. ಎಲ್ಲಿ ಹಳ್ಳ ಇದೆ, ಎಲ್ಲಿ ಜಂಪ್ ಮಾಡಬೇಕು ಎಂಬುದು ಗೊತ್ತಿರುತ್ತದೆ. ಆದರೆ ರ‍್ಯಾಲಿಯಲ್ಲಿ ಹಾಗಾಗುವುದಿಲ್ಲ. ಸಾಗಬೇಕಾದ ಹಾದಿ ಹೇಗಿರುತ್ತದೆ ಎಂಬುದು ತಿಳಿದಿರುವುದಿಲ್ಲ. ಎರಡರಲ್ಲೂ ಅಪಾಯ ಇದ್ದೇ ಇರುತ್ತದೆ. ಇವುಗಳಿಗೆ ಆಸ್ಪದ ನೀಡದ ಹಾಗೆ ಬೈಕ್ ಚಲಾಯಿಸುವುದೇ ದೊಡ್ಡ ಸವಾಲು.

* ರ‍್ಯಾಲಿಯಲ್ಲಿ ದಿಕ್ಸೂಚಿಯ (ನ್ಯಾವಿಗೇಷನ್) ಮಹತ್ವವೇನು?

ರ‍್ಯಾಲಿ ಯಾವುದೇ ಇರಲಿ. ಅದರಲ್ಲಿ ಪ್ರಶಸ್ತಿ ಜಯಿಸಬೇಕಾದರೆ ನ್ಯಾವಿಗೇಷನ್ ಪಾತ್ರ ಮಹತ್ವದ್ದಾಗಿರುತ್ತದೆ. ಯಾರು ಬೇಕಾದರೂ ಬೈಕ್ ಚಲಾಯಿಸಬಹುದು. ದುರ್ಗಮ ರಸ್ತೆಗಳಲ್ಲಿ ಒಮ್ಮೆ ದಿಕ್ಕು ತಪ್ಪಿದರೆ ಮರಳಿ ಸರಿದಾರಿಗೆ ಬರಲು ತುಂಬಾ ಸಮಯ ಹಿಡಿಯುತ್ತದೆ. ಅಷ್ಟರಲ್ಲಾಗಲೇ ಪ್ರತಿಸ್ಪರ್ಧಿಗಳು ಬಹುದೂರ ಸಾಗಿರುತ್ತಾರೆ. ದಿಕ್ಸೂಚಿಯ ಜೊತೆಗೆ ವೇಗದೆಡೆಗೂ ನಿಗಾ ಇಡಬೇಕಾಗುತ್ತದೆ. ಏಕಕಾಲದಲ್ಲಿ ಎರಡರ ಮೇಲೂ ಗಮನ ಹರಿಸಿ ಬೈಕ್ ಓಡಿಸುವುದು ತುಂಬಾ ಕಷ್ಟ. ಅದಕ್ಕಾಗಿ ಪ್ರತಿ ರ‍್ಯಾಲಿಗೂ ಮುನ್ನ ಎಲ್ಲಾ ಸ್ಪರ್ಧಿಗಳು ನ್ಯಾವಿಗೇಷನ್ ಬಗ್ಗೆ ವಿಶೇಷ ತರಬೇತಿ ಪಡೆದಿರುತ್ತಾರೆ. ಜೊತೆಗೆ ರೋಡ್ ಬುಕ್‌ಗಳನ್ನೂ ಚೆನ್ನಾಗಿ ನೋಡಿಕೊಳ್ಳಬೇಕಾಗಿರುತ್ತದೆ.

* ರ‍್ಯಾಲಿಗೂ ಮುನ್ನ ನೀವು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳೇನು?

ರ‍್ಯಾಲಿಗಳ ಸಂದರ್ಭದಲ್ಲಿ ಬೈಕ್‌ನ ಚಕ್ರಗಳು ಬೆಂಡಾಗುವ ಅಪಾಯಗಳು ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ತರಬೇತಿ ಪಡೆದಿರುತ್ತೇವೆ. ಜೊತೆಗೆ ಉತ್ತಮ ಗುಣಮಟ್ಟದ ಜ್ಯಾಕೆಟ್‌ಗಳು, ಕೈಗವಸುಗಳು, ಹೆಲ್ಮೆಟ್‌ಗಳು, ಶೂ ಹಾಗೂ ನೀ ಕ್ಯಾಪ್‌ಗಳನ್ನು ಧರಿಸುತ್ತೇವೆ.

* 50, 150 ಕಿಲೊ ಮೀಟರ್‌ಗಳ ವಿಶೇಷ ಹಂತಗಳು ಇದ್ದಾಗ ನಿರಂತರವಾಗಿ ಬೈಕ್ ಓಡಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಹಸಿವಾದರೆ ಏನು ಮಾಡುತ್ತೀರಿ?

ನಮ್ಮ ಬಳಿ ಮೂರು ಲೀಟರ್‌ಗಳ ವಾಟರ್ ಬ್ಯಾಗ್ ಇರುತ್ತದೆ. ಅದನ್ನು ಬೆನ್ನಿಗೆ ಹಾಕಿಕೊಂಡಿರುತ್ತೇವೆ. ಜೊತೆಗೆ ಒಂದಿಷ್ಟು ಪ್ರೋಟಿನ್ ಬಾರ್, ಒಣ ಹಣ್ಣುಗಳು ಮತ್ತು ಚಾಕೊಲೇಟ್‌ಗಳನ್ನು ಇಟ್ಟುಕೊಂಡಿರುತ್ತೇವೆ. ಬೈಕ್‌ಗೆ ಇಂಧನ ತುಂಬಿಸುವ ಸಮಯದಲ್ಲಿ ಸಾಧ್ಯವಾದರೆ ಹಣ್ಣು ಸೇವಿಸುತ್ತೇವೆ. ಹಾಗೆ ಸಮಯ ಸಿಗುವುದು ತೀರ ವಿರಳ. ಹೀಗಾಗಿ ನೀರು ಕುಡಿದುಕೊಂಡೇ ಬೈಕ್ ಚಲಾಯಿಸಬೇಕಾಗುತ್ತದೆ. ಅದು ಅನಿವಾರ್ಯ ಕೂಡಾ.

* ಕರ್ನಾಟಕದಲ್ಲಿ ಮೋಟರ್ ಸ್ಪೋರ್ಟ್ಸ್ ಬೆಳವಣಿಗೆ ಹೇಗಿದೆ?

ಆರಂಭದ ದಿನಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಟಿವಿಎಸ್ ಸಂಸ್ಥೆ ಬೆಂಗಳೂರಿನ ಹೊಸೂರಿನಲ್ಲಿ ಎರಡು ಟ್ರ್ಯಾಕ್‌ಗಳನ್ನು ನಿರ್ಮಿಸಿದೆ. ನಾವು ಅಲ್ಲಿ ಅಭ್ಯಾಸ ಮಾಡುತ್ತೇವೆ. ಮೊದಲು ರೇಸ್‌ಗಳಿಗೆ ಬಳಸುವ ಬೈಕ್‌ಗಳನ್ನು ವಿದೇಶಗಳಿಂದ ತರಿಸಿಕೊಳ್ಳಬೇಕಾಗಿತ್ತು. ಇದಕ್ಕೆ ಸಾಕಷ್ಟು ವೆಚ್ಚವಾಗುತ್ತಿತ್ತು. ಆದರೆ ಈಗ ಭಾರತದಲ್ಲೇ ಬೈಕ್‌ಗಳು ಸಿಗುತ್ತಿವೆ. ಜೊತೆಗೆ ಅವುಗಳ ಬಿಡಿ ಭಾಗಗಳೂ ಲಭ್ಯವಿವೆ. ಸರ್ಕಾರದಿಂದ ಬೆಂಬಲ ಸಿಕ್ಕರೆ ಈ ಕ್ರೀಡೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಲಭಿಸುತ್ತದೆ. ನಾವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿಗಳನ್ನು ಗೆಲ್ಲುತ್ತೇವೆ. ಹೀಗಾಗಿ ಸರ್ಕಾರ ಅಗತ್ಯ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು.

* ನೀವು ಟಿವಿಎಸ್ ಸಂಸ್ಥೆ ಸೇರಿದ್ದು ಹೇಗೆ?

ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ ನನ್ನ ಸಾಮರ್ಥ್ಯವನ್ನು ಕಂಡು ಟಿವಿಎಸ್ ಸಂಸ್ಥೆಯವರು ತಂಡ ಸೇರುವಂತೆ ಕೇಳಿಕೊಂಡರು. ನಾನು ಖುಷಿಯಿಂದ ಒಪ್ಪಿಕೊಂಡೆ. ಅಂದಿನಿಂದ ಇಂದಿನವರೆಗೂ ನನ್ನೆಲ್ಲಾ ಸಾಧನೆಗಳಿಗೆ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ನನ್ನಂತಹ ಹಲವು ಬೈಕ್ ಸಾಹಸಿಗಳಿಗೆ ಎಲ್ಲಾ ಬಗೆಯ ಸಹಕಾರ ಮತ್ತು ಪ್ರೋತ್ಸಾಹ ನೀಡಿ ಬೆಳೆಸುತ್ತಿದೆ.

* ಮೆರ್ಗೌಜಾ ರ‍್ಯಾಲಿಯಲ್ಲಿ ಚಾಂಪಿಯನ್ ಆಗಿದ್ದೀರಿ. ಅಲ್ಲಿ ನೀವು ಎದುರಿಸಿದ ಸವಾಲುಗಳೇನು?

ಹಿಂದೆ ಎರಡು ಸಲ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ. ಹೀಗಾಗಿ ಅದು ನನಗೆ ಎರಡನೇ ತವರಿನಂತಾಗಿದೆ. ವಿಶ್ವದ ಎಲ್ಲಾ ಭಾಗಗಳಿಂದಲೂ ಪ್ರಸಿದ್ಧ ರೈಡರ್‌ಗಳು ಬಂದಿದ್ದರು. ಈ ಸಲ ಪ್ರಶಸ್ತಿ ಗೆಲ್ಲಲೇಬೇಕೆಂದು ನಿಶ್ಚಯಿಸಿದ್ದೆ. ಹೀಗಾಗಿ ಎಲ್ಲಾ ಹಂತಗಳಲ್ಲೂ ಉತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸಿದೆ. ಮರಳುಗಾಡಿನ ಇಳಿಜಾರುಗಳು, ಬೆಟ್ಟ ಗುಡ್ಡಗಳಲ್ಲಿನ ದುರ್ಗಮ ರಸ್ತೆಗಳಲ್ಲಿ ಬೈಕ್ ಚಲಾಯಿಸುವುದು ಸವಾಲೆನಿಸಿತ್ತು. ಅದನ್ನು ಮೀರಿ ನಿಂತು ಚೊಚ್ಚಲ ಪ್ರಶಸ್ತಿ ಜಯಿಸಿದ್ದರಿಂದ ಅತೀವ ಖುಷಿಯಾಗಿದೆ.

* ನೀವು ಬಳಸುವ ಬೈಕ್‌ಗಳ ಬಗ್ಗೆ ಹೇಳಿ?

ಸೂಪರ್‌ಕ್ರಾಸ್ ಸ್ಪರ್ಧೆಗಳಿಗೆ ಬಳಸುವ ಬೈಕ್ 250 ಇಲ್ಲವೇ 300 ಸಿ.ಸಿ.ಯದ್ದಾಗಿರುತ್ತದೆ. ಇದು ಹಗುರವಾಗಿದ್ದು ಕಡಿಮೆ ಇಂಧನ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಹೊಂದಿರುತ್ತವೆ. ರ‍್ಯಾಲಿಗಳ ಸಂದರ್ಭದಲ್ಲಿ 450 ಸಿ.ಸಿ. ಬೈಕ್‌ಗಳನ್ನು ಬಳಸುತ್ತೇವೆ.ಇವುಗಳು ಹೆಚ್ಚು ಭಾರವಾಗಿರುತ್ತವೆ.ಇವುಗಳ ಇಂಧನ ಸಾಮರ್ಥ್ಯವೂ ಹೆಚ್ಚಿರುತ್ತದೆ. ಈ ಬೈಕ್‌ಗಳ ಕನಿಷ್ಠ ಬೆಲೆಯೇ ಎಂಟು ಲಕ್ಷ.

* ರ‍್ಯಾಲಿಪಟುಗಳಿಗೆ ಫಿಟ್‌ನೆಸ್ ಎಷ್ಟು ಅಗತ್ಯ. ಅದನ್ನು ಕಾಪಾಡಿಕೊಳ್ಳಲು ನೀವು ಏನು ಮಾಡುತ್ತೀರಿ?

ಫಿಟ್‌ನೆಸ್ ಕಾಪಾಡಿಕೊಂಡರಷ್ಟೇ ಎತ್ತರದ ಸಾಧನೆ ಮಾಡಲು ಸಾಧ್ಯ. ಹೀಗಾಗಿ 20 ಕಿಲೊ ಮೀಟರ್ಸ್ ರನ್ನಿಂಗ್, 70 ಕಿಲೊ ಮೀಟರ್ಸ್ ಸೈಕ್ಲಿಂಗ್ ಮಾಡುತ್ತೇನೆ. ಜಿಮ್ ಮತ್ತು ಹೊರಾಂಗಣದಲ್ಲಿ ದೈಹಿಕ ಕಸರತ್ತು ನಡೆಸುತ್ತೇನೆ. ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುತ್ತೇನೆ.

* ರ‍್ಯಾಲಿ ತುಂಬಾ ಅಪಾಯಕಾರಿ. ಇದನ್ನು ಬಿಟ್ಟು ಬೇರೆ ಏನಾದರೂ ಕೆಲಸ ಮಾಡಿಕೊಂಡು ಇದ್ದುಬಿಡೋಣ ಎಂದು ಯಾವತ್ತಾದರೂ ಅನಿಸಿದೆಯಾ?

ಖಂಡಿತವಾಗಿಯೂ ಇಲ್ಲ. ಸಣ್ಣ ತಪ್ಪಿನಿಂದಾಗಿ ರ‍್ಯಾಲಿಗಳ ವೇಳೆ ಅವಘಡಗಳು ಸಂಭವಿಸಿರುತ್ತವೆ. ಅಂತಹ ಸಂದರ್ಭಗಳಲ್ಲಿ ಗಂಭೀರ ಗಾಯಗಳಾಗುವುದು ಸಾಮಾನ್ಯ. ಗುಣಮುಖವಾದ ನಂತರ ಮತ್ತೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತೇನೆ. ಹಿಂದಿನ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ.

* ಟಿವಿಎಸ್ ತಂಡದ ಇತರ ಚಾಲಕರು ಏನಾದರೂ ಸಲಹೆ, ಸಹಕಾರ ಕೊಡುತ್ತಾರೆಯೇ?

ರ‍್ಯಾಲಿಯ ಮುನ್ನಾ ದಿನ ನಾವೆಲ್ಲಾ ಒಂದೆಡೆ ಸೇರಿ ಚರ್ಚಿಸುತ್ತೇವೆ. ಪರಸ್ಪರರ ಅನುಭವವನ್ನು ಹಂಚಿಕೊಳ್ಳುತ್ತೇವೆ. ಕರ್ನಾಟಕದ ಕೆ.ಪಿ.ಅರವಿಂದ್ ಸೇರಿದಂತೆ ಕೆಲವರು ವಿಶ್ವ ಪ್ರಸಿದ್ಧ ಡಕಾರ್ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಅವರಿಂದ ಅಮೂಲ್ಯ ಸಲಹೆಗಳು ಸಿಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.