ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಟೇಬಲ್‌ ಟೆನಿಸ್‌: ಚೀನಾ ಪುರುಷರ ತಂಡಕ್ಕೆ ಚಿನ್ನ

ಒಲಿಂಪಿಕ್ಸ್‌ ಇತಿಹಾಸದಲ್ಲಿ ಆರು ಚಿನ್ನ ಗೆದ್ದ ಮಾ ಲಾಂಗ್‌
Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಚೀನಾದ ಮಾ ಲಾಂಗ್ ಅವರು ಒಲಿಂಪಿಕ್‌ ಇತಿಹಾಸದಲ್ಲಿ ತಮ್ಮ ಆರನೇ ಚಿನ್ನ ಗೆದ್ದುಕೊಂಡು ತಮ್ಮ ದೇಶದ ಸಾರ್ವಕಾಲಿಕ ಶ್ರೇಷ್ಠ ಟೇಬಲ್‌ ಟೆನಿಸ್‌ ಆಟಗಾರ ಎನಿಸಿದರು. ಶುಕ್ರವಾರ ನಡೆದ ಟೇಬಲ್‌ಟೆನಿಸ್‌ ಪುರುಷರ ತಂಡ ಸ್ಪರ್ಧೆಯ ಫೈನಲ್‌ನಲ್ಲಿ ಚೀನಾ 3–0 ಯಿಂದ ಸ್ವೀಡನ್‌ ತಂಡವನ್ನು ಮಣಿಸಿತು.

35 ವರ್ಷದ ಲಾಂಗ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯ ಸ್ಕೋರ್‌ ಸೂಚಿಸುವಷ್ಟು ಏಕಪಕ್ಷೀಯ ಆಗಿರದೇ ಪೈಪೋಟಿಯಿಂದ ಕೂಡಿತ್ತು. ಫ್ರಾನ್ಸ್‌ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಮಾ ಅವರು ಡೈವರ್‌ಗಳಾದ ವು ಮಿಂಕ್ಸಿಯಾ ಮತ್ತು ಚೆನ್‌ ರುವೊಲಿನ್, ಜಿಮ್ನಾಸ್ಟ್‌ ಝೌ ಕೈ ಅವರು ಈ ಹಿಂದೆ ಐದು ಪದಕಗಳನ್ನು ಗೆದ್ದುಕೊಂಡಿದ್ದರು. 

ಒಲಿಂಪಿಕ್ಸ್‌ ಸಾಧನೆಯ ಜೊತೆಗೆ ಮಾ ಅವರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ 14 ಬಾರಿ ಪ್ರಶಸ್ತಿ ಗೆದ್ದಿದ್ದು, ಉದ್ಘಾಟನಾ ಸಮಾರಂಭದಲ್ಲಿ ಚೀನಾದ ಧ್ವಜಧಾರಿಯಾಗಿದ್ದರು.

ಈ ಪಂದ್ಯ ನೋಡಲು ಸೌತ್‌ ಪ್ಯಾರಿಸ್‌ ಅರೇನಾ ಕಿಕ್ಕಿರಿದಿತ್ತು.

ಚೀನಾ ತಂಡದಲ್ಲಿ ಸಾಕಷ್ಟು ಪ್ರತಿಭೆಗಳಿರುವ ಕಾರಣ ಮಾ ಅವರನ್ನು ಸಿಂಗಲ್ಸ್‌ಗೆ ಪರಿಗಣಿಸದಿರುವುದು ಚರ್ಚೆಗೆ ದಾರಿಮಾಡಿಕೊಟ್ಟಿತ್ತು. ಹೀಗಾಗಿ ಸಿಂಗಲ್ಸ್‌ನಲ್ಲಿ ಸತತ ಮೂರನೇ ಚಿನ್ನ ಗೆಲ್ಲುವ ಅವಕಾಶದಿಂದ ಅವರು ವಂಚಿತರಾದರು. ಮಾ ಬದಲು ಸಿಂಗಲ್ಸ್‌ ಆಡಿದ ಫಾನ್‌ ಝೆನ್‌ಡಾಂಗ್‌ ಚಿನ್ನ ಗೆದ್ದರು.

ಮಾ–ವಾಂಗ್‌ ಚುಖಿನ್ ಜೋಡಿ, ಸ್ವೀಡನ್‌ನ ಆಂಟನ್‌ ಕಲ್ಬರ್ಗ್‌– ಕ್ರಿಸ್ಟಿಯನ್‌ ಕಾರ್ಲ್‌ಸನ್‌ ಜೋಡಿಯನ್ನು ಸೋಲಿಸಿತು. ಮಾ ಅವರ ಶರವೇಗದ ಫೋರ್‌ಹ್ಯಾಂಡ್‌ ಹೊಡೆತ ಚೀನಾಕ್ಕೆ ಗೆಲುವಿನ ಪಾಯಿಂಟ್ ತಂದುಕೊಟ್ಟಿತು. ಚುಖಿನ್ ಅವರ ಮಿಶ್ರ ತಂಡದ ಸ್ವರ್ಣ ಗೆದ್ದ ಸಂದರ್ಭದಲ್ಲಿ ಛಾಯಾಗ್ರಾಹಕರೊಬ್ಬರು ಫೊಟೊ ತೆಗೆಯಲು ಧಾವಿಸುವಾಗ ಅವರ ರ‍್ಯಾಕೆಟ್‌ಗೆ ಬಡಿದು ಕೆಳಕ್ಕೆ ಬಿದ್ದು ತುಂಡಾಗಿತ್ತು.

ಲಾಂಗ್‌ ಇನ್ನೆಷ್ಟು ಸಮಯ ಆಡುವರೆಂಬುದು ಖಚಿತವಾಗಿಲ್ಲ. ತವರಿನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಅವರು ಎರಡು ಚಿನ್ನ ಗೆದ್ದಿದ್ದು, ‘ಇದು ನನ್ನ ಕೊನೆಯ ಏಷ್ಯನ್ ಗೇಮ್ಸ್‌ ಆಗಬಹುದು‘ ಎಂದಿದ್ದರು.

ಚೀನಾ ಪ್ಯಾರಿಸ್‌ನಲ್ಲಿ ಮಿಶ್ರ ಡಬಲ್ಸ್‌, ಮಹಿಳಾ ಸಿಂಗಲ್ಸ್‌, ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡ ವಿಭಾಗದಲ್ಲಿ ಚಿನ್ನ ಗೆದ್ದಂತೆ ಆಗಿದೆ. ಶನಿವಾರ ನಡೆಯುವ ಮಹಿಳೆಯರ ತಂಡ ವಿಭಾಗದ ಫೈನಲ್‌ನಲ್ಲಿ ಚೀನಾ, ಜಪಾನ್ ತಂಡವನ್ನು ಎದುರಿಸಲಿದೆ.

ಚೀನಾ ಬಿಟ್ಟರೆ ಟೇಬಲ್‌ಟೆನಿಸ್‌ನಲ್ಲಿ ಚಿನ್ನ ಗೆದ್ದ ಇತರ ತಂಡಗಳೆಂದರೆ ದಕ್ಷಿಣ ಕೊರಿಯಾ (3), ಜಪಾನ್ ಮತ್ತು ಸ್ವೀಡನ್‌ (ತಲಾ ಒಂದು ಸಲ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT