ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರಬಾ ಗುಹಾಗೆ ಬ್ಲಿಟ್ಸ್‌ ಚೆಸ್‌ ಕಿರೀಟ: ಕರ್ನಾಟಕದ ಸ್ಟ್ಯಾನಿಗೆ ಮೂರನೇ ಸ್ಥಾನ

Published 22 ಜನವರಿ 2024, 15:48 IST
Last Updated 22 ಜನವರಿ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಗ್ರ್ಯಾಂಡ್‌ಮಾಸ್ಟರ್‌ ಮಿತ್ರಬಾ ಗುಹ (ಪಶ್ಚಿಮ ಬಂಗಾಳ) ಅವರು ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್‌ಮಾಸ್ಟರ್ಸ್‌ ಓಪನ್‌ ಚೆಸ್‌ ಟೂರ್ನಿಯ ಭಾಗವಾಗಿ ನಡೆದ ಬ್ಲಿಟ್ಜ್‌ ಚೆಸ್‌ ಟೂರ್ನಿಯ ಕಿರೀಟ ಧರಿಸಿದರು. ಸೋಮವಾರ ನಡೆದ ಈ ಟೂರ್ನಿಯಲ್ಲಿ ಅವರು ಅಜೇಯ ಸಾಧನೆ ತೋರಿ 9 ಸುತ್ತುಗಳಿಂದ 8.5 ಪಾಯಿಂಟ್ಸ್‌ ಸಂಗ್ರಹಿಸಿದರು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಅವರು ಟ್ರೋಫಿ ಜೊತೆ ₹50,000 ನಗದು ಬಹುಮಾನ ಪಡೆದರು. ತಮಿಳುನಾಡಿನ ಎಸ್‌.ಪಿ.ಸೇತುರಾಮನ್‌, ಕರ್ನಾಟಕ ಜಿ.ಎ.ಸ್ಟ್ಯಾನಿ ಮತ್ತು ಇರಾನ್‌ನ ತಹಬಾಜ್ ಅರಶ್, ಬಂಗಾಳದ ದೀಪ್ತಾಯನ ಘೋಷ್ ಅವರು ತಲಾ ಎಂಟು ಪಾಯಿಂಟ್ಸ್‌ ಸಂಗ್ರಹಿಸಿದರೂ, ಟೈಬ್ರೇಕ್‌ ಆಧಾರದಲ್ಲಿ ಕ್ರಮವಾಗಿ ಎರಡರಿಂದ ಐದರವರೆಗಿನ ಸ್ಥಾನ ಪಡೆದರು. ಸೇತುರಾಮನ್ ಮತ್ತು ಶಿವಮೊಗ್ಗದ ಸ್ಟ್ಯಾನಿ ಟ್ರೋಫಿಗಳ ಜೊತೆಗೆ ಕ್ರಮವಾಗಿ ₹40,000 ಮತ್ತು ₹35,000 ಬಹುಮಾನ ಜೇಬಿಗಿಳಿಸಿದರು.

ಟೂರ್ನಿಯಲ್ಲಿ 18 ಗ್ರ್ಯಾಂಡ್‌ಮಾಸ್ಟರ್‌ಗಳ ಜೊತೆಗೆ ಒಬ್ಬರು ಡಬ್ಲ್ಯುಜಿಎಂ, 28 ಇಂಟರ್‌ನ್ಯಾಷನಲ್ ಮಾಸ್ಟರ್ಸ್‌ ಸೇರಿದಂತೆ 16 ದೇಶಗಳ 476 ಆಟಗಾರರು ಕಣದಲ್ಲಿದ್ದರು.

ಬಿಳಿ ಕಾಯಿಗಳಲ್ಲಿ ಆಡಿದ ಸ್ಟ್ಯಾನಿ ಕೊನೆಯ ಸುತ್ತಿನಲ್ಲಿ ಮಿತ್ರಬಾ ಗುಹಾ ಜೊತೆ ‘ಡ್ರಾ’ ಮಾಡಿಕೊಂಡರು. ದೀಪ್ತಾಯನ ಘೋಷ್‌ ಎರಡನೇ ಬೋರ್ಡ್‌ನಲ್ಲಿ ಸಯಂತನ್ ದಾಸ್‌ (7) ಮಣಿಸಿದರು. ಸೇತುರಾಮನ್, ನಿತಿನ್ ಎಸ್‌. (7) ಅವರನ್ನು ಸೋಲಿಸಿದರು. ಜಿಎಂ ಸಂಕಲ್ಪ್ ಗುಪ್ತಾ, ತಹಹಾಜ್ ಅರಶ್ ಅವರಿಗೆ ಮಣಿದರು.

ಬಂಗಾಳದ ಸಪ್ತರ್ಷಿ ರಾಯತ್ ಚೌಧರಿ (7.5), ಈಜಿಪ್ಟ್‌ನ ಫೌಜಿ ಆದಮ್ (7.5), ಕೇರಳದ ಕೆ.ರತ್ನಾಕರನ್ (7.5) ಕ್ರಮವಾಗಿ ಆರರಿಂದ ಎಂಟರವರೆಗಿನ ಸ್ಥಾನ ಪಡೆದರು. ಅವರಿಗೆ ₹20,000, 15,000 ಮತ್ತು 12,000 ನಗದು ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT