ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ | ಜಾವೆಲಿನ್‌: ಮನು ಕೂಟ ದಾಖಲೆ

ಕರ್ನಾಟಕದ ತೀರ್ಥೇಶ್‌, ವಂದನಾಗೆ ಬೆಳ್ಳಿ
Published 15 ಅಕ್ಟೋಬರ್ 2023, 14:23 IST
Last Updated 15 ಅಕ್ಟೋಬರ್ 2023, 14:23 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಡಿ.ಪಿ.ಮನು ಅವರು ಭಾನುವಾರ ಇಲ್ಲಿ ಕೊನೆಗೊಂಡ 62ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.

ಸರ್ವಿಸಸ್‌ ತಂಡವನ್ನು ಪ್ರತಿನಿಧಿಸಿದ ಅವರು ಕಂಠೀರವ ಕ್ರೀಡಾಂಗಣದಲ್ಲಿ ಕೊನೆಯ ದಿನ ನಡೆದ ಸ್ಪರ್ಧೆಯಲ್ಲಿ 82.06 ಮೀ. ಸಾಧನೆ ಮಾಡಿದರಲ್ಲದೆ, ಕಳೆದ ವರ್ಷ ತಾವೇ ಸ್ಥಾಪಿಸಿದ್ದ (81.23 ಮೀ.) ಕೂಟ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಆದರೆ ಒಲಿಂಪಿಕ್ಸ್‌ ಅರ್ಹತೆಗೆ ನಿಗದಿಪಡಿಸಿರುವ 85 ಮೀ. ದೂರ ಕಂಡುಕೊಳ್ಳಲು ವಿಫಲರಾದರು.

ಮನು ಅವರು ತಮ್ಮ ಮೊದಲ ಎಸೆತದಲ್ಲೇ ಈ ದೂರ ಕಂಡುಕೊಂಡರು. ಫೈನಲ್‌ನಲ್ಲಿ ಕಣಕ್ಕಿಳಿದ 12 ಸ್ಪರ್ಧಿಗಳಲ್ಲಿ 80 ಮೀ. ಗಡಿ ದಾಟಿದ್ದು ಅವರೊಬ್ಬರೇ. 77.72 ಮೀ. ಸಾಧನೆ ಮಾಡಿದ ರಾಜಸ್ಥಾನದ ಯಶ್ವೀರ್‌ ಸಿಂಗ್‌ ಬೆಳ್ಳಿ ಗೆದ್ದರು.

ಪುರುಷರ 400 ಮೀ. ಓಟದಲ್ಲಿ ಕರ್ನಾಟಕದ ತೀರ್ಥೇಶ್‌ ಶೆಟ್ಟಿ ಚಿನ್ನ ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು. ಅವರು 46.15 ಸೆ.ಗಳಲ್ಲಿ ಎರಡನೆಯವರಾಗಿ ಗುರಿ ತಲುಪಿದರು. ಈ ವಿಭಾಗದ ಚಿನ್ನದ ಪದಕ ಒಎನ್‌ಜಿಸಿಯ ಕೆ.ಅವಿನಾಶ್ (46.05 ಸೆ.) ಪಾಲಾಯಿತು.

ಮಹಿಳೆಯರ 20 ಕಿ.ಮೀ. ನಡಿಗೆ ಸ್ಪರ್ಧೆಯನ್ನು 1 ಗಂಟೆ 40.19 ನಿಮಿಷಗಳಲ್ಲಿ ಪೂರೈಸಿದ ಕರ್ನಾಟಕದ ವಂದನಾ ಅವರು ಬೆಳ್ಳಿ ತಮ್ಮದಾಗಿಸಿಕೊಂಡರು.

ರಿಲೇನಲ್ಲಿ ಕೂಟ ದಾಖಲೆ: ಮಹಿಳೆಯರ 4X100 ಮೀ. ರಿಲೇಯಲ್ಲಿ 44.87 ಸೆ. ಸಾಧನೆಯೊಂದಿಗೆ ಚಿನ್ನ ಗೆದ್ದ ರೈಲ್ವೇಸ್‌ ತಂಡ, ಕಳೆದ ವರ್ಷ ತಾನೇ ಸ್ಥಾಪಿಸಿದ್ದ ಕೂಟ ದಾಖಲೆಯನ್ನು (44.98 ಸೆ.) ಉತ್ತಮಪಡಿಸಿಕೊಂಡಿತು. ಪುರುಷರ ವಿಭಾಗದಲ್ಲಿ ತಮಿಳುನಾಡು ತಂಡ ಕೂಟ ದಾಖಲೆಯೊಂದಿಗೆ (39.42 ಸೆ.) ಚಿನ್ನ ಜಯಿಸಿತು. ರೈಲ್ವೇಸ್‌ ಹೆಸರಿನಲ್ಲಿದ್ದ ದಾಖಲೆಯನ್ನು (39.75 ಸೆ.) ಮುರಿಯಿತು.

ಫಲಿತಾಂಶ: ಪುರುಷರ ವಿಭಾಗ: 400 ಮೀ. ಓಟ: ಕೆ.ಅವಿನಾಶ್ (ಒಎನ್‌ಜಿಸಿ; ಕಾಲ: 46.05 ಸೆ.)–1, ತೀರ್ಥೇಶ್‌ ಶೆಟ್ಟಿ (ಕರ್ನಾಟಕ)–2, ಅಕ್ಷಯ್‌ ಎನ್‌. (ಸರ್ವಿಸಸ್)–3

1,500 ಮೀ. ಓಟ: ಅಭಿಷೇಕ್‌ ಠಾಕೂರ್‌ (ಸರ್ವಿಸಸ್‌; ಕಾಲ: 3 ನಿ. 42.21 ಸೆ.)–1, ಶಶಿ ಸಿಂಗ್ (ಬಿಹಾರ)–2, ಅರ್ಜುನ್‌ (ಒಎನ್‌ಜಿಸಿ)–3

4X100 ಮೀ. ರಿಲೇ: ತಮಿಳುನಾಡು (ಕಾಲ: 39.42 ಸೆ.)–1, ಒಡಿಶಾ–2, ಸರ್ವಿಸಸ್‌–3

20 ಕಿ.ಮೀ. ನಡಿಗೆ: ಬಿಲಿನ್‌ ಜಾರ್ಜ್‌ ಆಂಟೊ (ಕೇರಳ: ಕಾಲ: 1 ಗಂಟೆ 25.02 ನಿ.)–1, ಸೆರ್ವಿನ್‌ (ಸರ್ವಿಸಸ್‌)–2, ಧನಂಜಯ್‌ ಯಾದವ್ (ಸರ್ವಿಸಸ್‌)–3

ಜಾವೆಲಿನ್‌ ಥ್ರೋ: ಡಿ.ಪಿ.ಮನು (ಸರ್ವಿಸಸ್; ದೂರ: 82.06 ಮೀ.)–1, ಯಶ್ವೀರ್‌ ಸಿಂಗ್‌ (ರಾಜಸ್ಥಾನ)–2, ವೆಂಕಟ್‌ ಮಲಿಕ್‌ (ಒಡಿಶಾ)–3

ಮಹಿಳೆಯರ ವಿಭಾಗ: 400 ಮೀ. ಓಟ: ದಂಡಿ ಶ್ರೀ (ಆಂಧ್ರ ಪ್ರದೇಶ; ಕಾಲ: 53.26 ಸೆ.)–1, ಸಿಮರ್‌ಜೀತ್‌ ಕೌರ್‌ (ಪಂಜಾಬ್‌)–2, ಕವಿತಾ (ಪೊಲೀಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌)–3

1,500 ಮೀ. ಓಟ: ಪೂಜಾ (ರೈಲ್ವೇಸ್‌; ಕಾಲ: 4 ನಿ. 21.80 ಸೆ.)–1, ಲಿಲಿ ದಾಸ್‌ (ರೈಲ್ವೇಸ್‌)–2, ಸ್ನೇಹಾ ಮಲಿಕ್‌ (ಹರಿಯಾಣ)–3

4X100 ಮೀ. ರಿಲೇ: ರೈಲ್ವೇಸ್‌ (ಕಾಲ: 44.87 ಸೆ.)–1, ತಮಿಳುನಾಡು–2, ಪಂಜಾಬ್‌–3

20 ಕಿ.ಮೀ. ನಡಿಗೆ: ಮುನಿತಾ ಪ್ರಜಾಪತಿ (ರೈಲ್ವೇಸ್‌: ಕಾಲ: 1 ಗಂಟೆ 38.21 ನಿ.)–1, ವಂದನಾ (ಕರ್ನಾಟಕ)–2, ಪೂಜಾ ಕುಮಾವತ್ (ರಾಜಸ್ಥಾನ)–3

ರೈಲ್ವೇಸ್‌ಗೆ ಸಮಗ್ರ ಪ್ರಶಸ್ತಿ

ಕೂಟದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ರೈಲ್ವೇಸ್‌ ತಂಡ ಒಟ್ಟು 220 ಪಾಯಿಂಟ್ಸ್‌ ಕಲೆಹಾಕಿ ಸಮಗ್ರ ಚಾಂಪಿಯನ್‌ಷಿಪ್‌ ತನ್ನದಾಗಿಸಿಕೊಂಡಿತು. ಮಹಿಳೆಯರ ವಿಭಾಗದ ಪ್ರಶಸ್ತಿಯನ್ನೂ ರೈಲ್ವೇಸ್‌ (156 ಪಾಯಿಂಟ್ಸ್‌) ಗೆದ್ದಿತು. ಪುರುಷರ ವಿಭಾಗದಲ್ಲಿ ಸರ್ವಿಸಸ್‌ ತಂಡ (175 ಪಾಯಿಂಟ್ಸ್) ಚಾಂಪಿಯನ್‌ ಆಯಿತು. ಡಿ.ಪಿ. ಮನು ಮತ್ತು ಮಹಾರಾಷ್ಟ್ರದ ಯಮುನಾ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ‘ಶ್ರೇಷ್ಠ’ ಅಥ್ಲೀಟ್‌ ಗೌರವಕ್ಕೆ ಪಾತ್ರರಾದರು.

ತೀರ್ಥೇಶ್‌ ಶೆಟ್ಟಿ
ತೀರ್ಥೇಶ್‌ ಶೆಟ್ಟಿ
ವಂದನಾ
ವಂದನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT