ರಾಮಚಂದ್ರ ಎಂ.
ಅಮೆರಿಕದ ಪೀಟ್ ಸಾಂಪ್ರಾಸ್ 14 ಗ್ರ್ಯಾನ್ ಸ್ಲಾಮ್‌ಗಳನ್ನು ಗೆದ್ದು 2003ರಲ್ಲಿ ನಿವೃತ್ತರಾದಾಗ, ಟೆನಿಸ್ ಪಂಡಿತರು ಹಾಗೂ ಅಭಿಮಾನಿಗಳು ಪುರುಷರ ಟೆನಿಸ್‌ನ ಈ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ ಎಂದೇ ನಂಬಿದ್ದರು. ಆದರೆ ಅಲ್ಲಿಂದ ಆರೇ ವರ್ಷಗಳಲ್ಲಿ ಸಾಂಪ್ರಾಸ್ ಅವರ ಗರಿಷ್ಠ ಗ್ರ್ಯಾನ್ ಸ್ಲಾಮ್‌ಗಳ ದಾಖಲೆಯನ್ನು ಸ್ವಿಜರ್‌ಲೆಂಡ್‌ನ ರೋಜರ್ ಫೆಡೆರರ್ ಮುರಿದು ಟೆನಿಸ್‌ನ ಹೊಸ ದಾಖಲೆ ಸೃಷ್ಟಿಸಿದರು. ಆ ವೇಳೆ ಅವರ ಗ್ರ್ಯಾನ್ ಸ್ಲಾಮ್ ಬೇಟೆಯ ಹಾದಿಯಲ್ಲಿ ತೀವ್ರ ಪ್ರತಿರೋಧ ಒಡ್ಡಿದ್ದು ಸ್ಪೇನ್‌ನ ರಫೆಲ್ ನಡಾಲ್ ಒಬ್ಬರೇ. ಇಡೀ ಟೆನಿಸ್ ಜಗತ್ತೇ ಈ ದಿಗ್ಗಜರಿಬ್ಬರ ಆಟವನ್ನು ಸವಿಯುತ್ತಾ, ಇವರಿಗೆ ಸವಾಲೊಡ್ಡುವ ಇನ್ನೊಬ್ಬ ಟೆನಿಸ್ ಪಟು ಬರಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದಾಗಲೇ, ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಬೆಳಕಿಗೆ ಬಂದವರು ಸರ್ಬಿಯಾದ ನೊವಾಕ್ ಜೊಕೊವಿಚ್!
ಸೆಪ್ಟೆಂಬರ್ 10ರಂದು ನ್ಯೂಯಾರ್ಕ್‌ನ ಆರ್ಥರ್ ಆ್ಯಷ್ ಕೋರ್ಟ್‌ನಲ್ಲಿ ನಡೆದ ಯು.ಎಸ್ ಓಪನ್ ಫೈನಲ್‌ನಲ್ಲಿ ರಷ್ಯಾದ ಡೇನಿಲ್ ಮೆಡ್ವೆಡೇವ್ ಅವರನ್ನು ನಿರಾಯಾಸವಾಗಿ ನೇರ ಸೆಟ್‌ಗಳಿಂದ ಮಣಿಸಿ, ತಮ್ಮ 24ನೇ ಗ್ರ್ಯಾನ್ ಸ್ಲಾಮ್ ಅನ್ನು ಮುಡಿಗೇರಿಸಿಕೊಂಡು ಬೀಗಿದರು ಮೂವತ್ತಾರರ ಹರೆಯದ ಜೊಕೊವಿಚ್. ಈ ಗೆಲುವು ಟೆನಿಸ್‌ನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕ್ಷಣ ಎಂದರೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ, 2003ರಲ್ಲಿ ಮೊದಲ ಬಾರಿಗೆ ವೃತ್ತಿಪರ ಟೆನಿಸ್ ಆಡಲು ಅರ್ಹತೆ ಪಡೆದು ಕಣಕ್ಕಿಳಿದಿದ್ದ ಹದಿನಾರರ ಪೋರ ಜೊಕೊವಿಚ್ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಲವಾರು ಬಾರಿ ತಮ್ಮ ಪಂದ್ಯದ ಬಳಿಕ, ಆಗಿನ ದಿಗ್ಗಜ ಆಟಗಾರರಾದ ಫೆಡೆರರ್, ನಡಾಲ್, ಶರಾಪೋವಾ ಹಾಗೂ ಸೆರೆನಾ ವಿಲಿಯಮ್ಸ್‌ರ ಹಾವ-ಭಾವಗಳನ್ನು ನಕಲು ಮಾಡಿ, ಕೋರ್ಟ್‌ನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಹದಿಹರೆಯದ ಜೊಕೊವಿಚ್ ದಿಟವಾಗಿಯೂ ವೃತ್ತಿಪರ ಟೆನಿಸ್ ಆಟಗಾರನೇ ಎಂದು ಕೆಲವು ಮಾಜಿ ಆಟಗಾರರು ಟೀಕಿಸಿದ್ದರು. ಹೀಗೆ ಆರಂಭದಿಂದಲೂ ತಮ್ಮ ವಿಭಿನ್ನ ನಡವಳಿಕೆಯಿಂದ ಟೆನಿಸ್ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದ್ದ ಜೊಕೊವಿಚ್ ಇಂದು ‘ಓಪನ್ ಎರಾ’ದಲ್ಲಿ ಅತ್ಯಧಿಕ 24 ಗ್ರ್ಯಾನ್ ಸ್ಲಾಮ್‌ಗಳನ್ನು ಗೆದ್ದು, ಪುರುಷರ ಟೆನಿಸ್‌ನಲ್ಲಿ ಯಾರೂ ಏರದ ಶಿಖರವನ್ನೇರಿದ ಪರಿ ಮಾತ್ರ ನಿಜಕ್ಕೂ ಅದ್ವಿತೀಯ.
1987ರ ಮೇ 22ರಂದು ಸರ್ಬಿಯಾದಲ್ಲಿ ಜನಿಸಿದ ಜೊಕೊವಿಚ್ ತಮ್ಮ ನಾಲ್ಕನೇ ವಯಸ್ಸಿಗೆ ತಂದೆ ಕೊಡಿಸಿದ ಟೆನಿಸ್ ರ‍್ಯಾಕೆಟ್ ಹಿಡಿದು ಆಟದ ಬಗೆಗೆ ಒಲವು ಬೆಳೆಸಿಕೊಂಡರು. ನ್ಯಾಟೊ ಪಡೆ ಸರ್ಬಿಯಾದ ಮೇಲೆ ದಾಳಿ ನಡೆಸಿದಾಗ ಕಣ್ಣೆದುರಿಗೆ ತನ್ನ ದೇಶ ಅಕ್ಷರಶಃ ನೆಲಸಮವಾಗಿದ್ದನ್ನು ಕಂಡು ದಿಗ್ಬ್ರಮೆಗೊಂಡಿದ್ದ ಪೋರ ಅವನು. ಆ ದುರಂತದ ವೇಳೆ ಅವರ ಕುಟುಂಬ ಜೀವ ಉಳಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಎಳೆಯ ವಯಸ್ಸಿಗೆ ದೊಡ್ಡ ಮಟ್ಟದ ಸಾವು-ನೋವುಗಳನ್ನು ತೀರಾ ಸಾಮಾನ್ಯ ಆಗುಹೋಗುಗಳಂತೆ ಕಂಡಿದ್ದ ಜೊಕೊವಿಚ್ ಗಟ್ಟಿಗನಾದನು. ಈ ಸವಾಲುಗಳನ್ನು ಹಿಮ್ಮೆಟ್ಟಿದ ಹುಡುಗ ತನ್ನ ಟೆನಿಸ್ ಕಲಿಕೆಯನ್ನು ಮಾತ್ರ ನಿಲ್ಲಿಸದೆ ಒಂದೊಂದೇ ಹೆಜ್ಜೆ ಇಡುತ್ತಾ ಆಟದಲ್ಲಿ ಮುಂದುವರೆಯುತ್ತಾ ಹೋದನು. ಜೆಲೆನಾ ಗೆನ್ಸಿಚ್‌ರ ಗರಡಿಯಲ್ಲಿ ಆಟದ ಮೊದಲ ಪಟ್ಟುಗಳನ್ನು ಕಲಿತು ಆ ಬಳಿಕ ಗಡಿ ದಾಟಿ ಜರ್ಮನಿಯಲ್ಲಿ ವೃತ್ತಿಪರ ಕಲಿಕೆಯಲ್ಲಿ ತೊಡಗಿಕೊಂಡ ಎಳೆಯ ಜೊಕೊವಿಚ್‌ನ ಪ್ರತಿಭೆ ಅನಾವರಣಗೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಕಿರಿಯರ ಪಂದ್ಯಾವಳಿಗಳಲ್ಲಿ ಸಾಲು-ಸಾಲು ಗೆಲುವುಗಳನ್ನು ಪಡೆದು ಮೇಲ್ಮಟ್ಟಕ್ಕೆ ತೇರ್ಗಡೆ ಹೊಂದಿ ತಮ್ಮ ಮೊದಲ ಗ್ರ್ಯಾನ್ ಸ್ಲಾಮ್ ಅನ್ನು 2008ರ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ತಮ್ಮ ತೆಕ್ಕೆಗೆ ಹಾಕಿಕೊಂಡಾದಾಗ ಜೊಕೊವಿಚ್ ಅವರಿಗೆ ಕೇವಲ ಇಪ್ಪತ್ತರ ಪ್ರಾಯ. ಘಟಾನುಘಟಿಗಳಾದ ಫೆಡೆರರ್ ಮತ್ತು ನಡಾಲ್ ಇನ್ನೂ ತಮ್ಮ ಉತ್ತುಂಗದಲ್ಲಿರುವಾಗಲೇ ಟೆನಿಸ್‌ನ ಮೂರನೇ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿ, ಪೈಪೋಟಿ ನೀಡಲಾರಂಭಿಸಿದ ಅವರಿಗೆ ಮತ್ತೊಂದು ಗ್ರ್ಯಾನ್ ಸ್ಲಾಮ್ ಗೆಲ್ಲಲು 2011ರವರೆಗೂ ಕಾಯಬೇಕಾದರೂ ವೃತ್ತಿಬದುಕಿನಲ್ಲಿ ಅಲ್ಲಿಂದ ಮತ್ತೆಂದೂ ಸರ್ಬಿಯಾದ ಈ ಅಪರೂಪದ ಪ್ರತಿಭೆ ಹಿಂದುರಿಗಿ ನೋಡಲಿಲ್ಲ.
ಫೆಡರರ್ ಬಲಾಢ್ಯವಾಗಿರುವ ಅವರ ನೆಚ್ಚಿನ ಹುಲ್ಲುಹಾಸಿನ ವಿಂಬಲ್ಡನ್ ಕೋರ್ಟ್‌ನಲ್ಲಿ ಮೂರು ಫೈನಲ್‌ಗಳಲ್ಲಿ ಅವರನ್ನು ಸೋಲಿಸಿ ಒಟ್ಟು ಏಳು ವಿಂಬಲ್ಡನ್ ಗೆಲ್ಲುವುದು ಮಾತ್ರವಲ್ಲದೆ, ‘ಕಿಂಗ್ ಆಫ್ ಕ್ಲೇ’ ಎಂದೇ ಹೆಸರುವಾಸಿಯಾಗಿರುವ ನಡಾಲ್ ಅವರನ್ನೂ ಜೊಕೊವಿಚ್ ಫ್ರೆಂಚ್ ಓಪನ್‌ನ ಕ್ಲೇ ಅಂಗಳದಲ್ಲಿ ಎರಡು ಬಾರಿ ಮಣಿಸಿ ಒಟ್ಟು ಮೂರು ಬಾರಿ ಫ್ರೆಂಚ್ ಓಪನ್ ಗೆದ್ದಿದ್ದಾರೆ. ಇದರೊಟ್ಟಿಗೆ ಫೆಡೆರರ್-ನಡಾಲ್ ಇಬ್ಬರ ಎದುರಿಗೂ ಹೆಚ್ಚು ಪಂದ್ಯಗಳನ್ನು ಗೆದ್ದು ಜೊಕೊವಿಚ್ ಪ್ರಾಬಲ್ಯ ಮೆರೆದಿದ್ದಾರೆ. ಅದಲ್ಲದೆ ಎದುರಾಳಿ ಮ್ಯಾಚ್ ಪಾಯಿಂಟ್ ಪಡೆದು ಗೆಲುವಿನ ಹೊಸ್ತಿಲಲ್ಲಿರುವಾಗ, ಒತ್ತಡದ ನಡುವೆ ಕೊಂಚವೂ ವಿಚಲಿತರಾಗದೆ ಸೋಲಿನ ದವಡೆಯಿಂದ ಗೆಲುವನ್ನು ಕಸಿದುಕೊಳ್ಳುವ ಜೊಕೊವಿಚ್‌ರ ಆಟ ನೋಡುವುದೇ ಒಂದು ಹಬ್ಬ. ಈ ಬಗೆಯಲ್ಲಿ ಹತ್ತಾರು ಬಾರಿ ಮೇರು ಆಟಗಾರರ ಮೇಲೆ ಜಯ ಸಾಧಿಸಿರುವುದು ಅವರ ಗಟ್ಟಿತನಕ್ಕೆ ಹಿಡಿದ ಕನ್ನಡಿ.
ಆಕ್ರಮಣಕಾರಿ ಬಲಗೈ ಬೇಸ್‌ಲೈನ್ ಆಟಗಾರ ಆಗಿರುವ ಜೋಕೊವಿಚ್‌ರ ಫೋರ್ ಹ್ಯಾಂಡ್ ಮತ್ತು ಎರಡು-ಕೈಗಳ ಬ್ಯಾಕ್ ಹ್ಯಾಂಡ್ ಹೊಡೆತಗಳೂ ಅಷ್ಟೇ ಪರಿಣಾಮಕಾರಿ. ಇನ್ನು ಜೋರಾಗಿ ಸರ್ವ್ ಮಾಡುವ ಅವರು ಪಾದರಸದಂತೆ ಕೋರ್ಟ್‌ನ ತುಂಬೆಲ್ಲಾ ಸಂಚರಿಸುವುದನ್ನು ನೋಡಿ ಕಣ್ತುಂಬಿಸಿಕೊಳ್ಳಬೇಕೆಂಬುದುದೇ ಸಹಸ್ರಾರು ಟೆನಿಸ್ ಪ್ರಿಯರ ಹೆಬ್ಬಯಕೆಯಾಗಿದೆ. ಅತ್ಯಧಿಕ ಕಾಲ ಅಗ್ರ ಶ್ರೇಯಾಂಕಿತ ಆಟಗಾರನಾಗಿರುವ ದಾಖಲೆಯ ಜೊತೆಗೆ ಅತಿ ಹೆಚ್ಚು ಎಟಿಪಿ ಪಂದ್ಯಾವಳಿಗಳನ್ನೂ ಗೆದ್ದು ಆಟದಲ್ಲಿ ಎಲ್ಲಾ ಬಗೆಯ ದಾಖಲೆಯಗಳನ್ನು ತಮ್ಮದಾಗಿಸಿಕೊಂಡಿರುವ ಜೋಕೊವಿಚ್ ಟೆನಿಸ್‌ನ ಅನಭಿಷಕ್ತ ದೊರೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.