ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌: ರ‍್ಯಾ‍‍ಪ್ಟರ್ಸ್‌ಗೆ ತವರಿನಲ್ಲಿ ಗೆಲ್ಲುವ ಛಲ

ಇಂದಿನಿಂದ ಉದ್ಯಾನನಗರಿಯಲ್ಲಿ ಬ್ಯಾಡ್ಮಿಂಟನ್‌ ‘ಹಬ್ಬ’:ಶ್ರೀಕಾಂತ್‌, ಪ್ರಣೀತ್‌ ಆಕರ್ಷಣೆ
Last Updated 6 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನಗರಿಯ ಬ್ಯಾಡ್ಮಿಂಟನ್‌ ಪ್ರಿಯರಿಗೆ ಈಗ ಸುಗ್ಗಿ ಕಾಲ. ಕ್ರಿಕೆಟ್‌ ಮತ್ತು ಫುಟ್‌ಬಾಲ್‌ ಆಟವನ್ನು ನೋಡಿ ಸಂಭ್ರಮಿಸಿದ್ದ ಕ್ರೀಡಾಭಿಮಾನಿಗಳು ಈಗ ಬ್ಯಾಡ್ಮಿಂಟನ್‌ ಆಟದ ಸೊಬಗು ಸವಿಯಲು ಸನ್ನದ್ಧರಾಗಿದ್ದಾರೆ.

ಸೋಮವಾರದಿಂದ ಒಟ್ಟು ಆರು ದಿನಗಳ ಕಾಲ ‘ಸಿಲಿಕಾನ್‌ ಸಿಟಿ’ಯಲ್ಲಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ (ಪಿಬಿಎಲ್‌) ಸಂಭ್ರಮ ಗರಿಗೆದರಲಿದೆ. ಆತಿಥೇಯ ಬೆಂಗಳೂರು ರ‍್ಯಾಪ್ಟರ್ಸ್‌, ಚೊಚ್ಚಲ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕಿಳಿಯುತ್ತಿದ್ದು ಈ ಬಾರಿ ತವರಿನಲ್ಲಿ ಆಡುತ್ತಿರುವ ಮೊದಲ ಪಂದ್ಯದಲ್ಲಿ ಗೆಲ್ಲುವ ಛಲ ಹೊಂದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಹಣಾಹಣಿಯಲ್ಲಿ ಕಿದಂಬಿ ಶ್ರೀಕಾಂತ್‌ ಸಾರಥ್ಯದ ರ‍್ಯಾಪ್ಟರ್ಸ್‌ ತಂಡ ಮುಂಬೈ ರಾಕೆಟ್ಸ್‌ ಸವಾಲಿಗೆ ಎದೆಯೊಡ್ಡಲಿದೆ.

ಬೆಂಗಳೂರಿನ ತಂಡ ಈ ಬಾರಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿದೆ. 20 ಪಂದ್ಯಗಳನ್ನು ಆಡಿರುವ ಶ್ರೀಕಾಂತ್‌ ಪಡೆ 13 ಪಾಯಿಂಟ್ಸ್‌ ಕಲೆಹಾಕಿದೆ.

ರಾಕೆಟ್ಸ್‌ ತಂಡ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದು ಸೆಮಿಫೈನಲ್‌ ಹಾದಿಯನ್ನು ಸುಗಮ ಮಾಡಿಕೊಂಡಿದೆ. 25 ಪಂದ್ಯಗಳನ್ನು ಆಡಿರುವ ಈ ತಂಡದ ಖಾತೆಯಲ್ಲಿ 19 ಪಾಯಿಂಟ್ಸ್‌ ಇವೆ.

ಈ ಸಲ ಆಡಿದ ಮೊದಲ ಪಂದ್ಯದಲ್ಲೇ ಸೋತಿದ್ದ ರ‍್ಯಾಪ್ಟರ್ಸ್‌, ನಂತರ ಗೆಲುವಿನ ‘ಹ್ಯಾಟ್ರಿಕ್‌’ ಸಾಧನೆ ಮಾಡಿ ಭರವಸೆ ಮೂಡಿಸಿದೆ.

ಪುಣೆ 7 ಏಸಸ್‌, ಡೆಲ್ಲಿ ಡ್ಯಾಷರ್ಸ್‌ ಮತ್ತು ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ಎದುರಿನ ಗೆಲುವುಗಳು ಶ್ರೀಕಾಂತ್‌ ಬಳಗ ಆತ್ಮ ವಿಶ್ವಾಸದಿಂದ ಪುಟಿಯುವಂತೆ ಮಾಡಿದೆ.

ಪುರುಷರ ಸಿಂಗಲ್ಸ್‌ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನ ಹೊಂದಿರುವ ಶ್ರೀಕಾಂತ್‌, ತಂಡದ ಆಧಾರ ಸ್ಥಂಭವಾಗಿದ್ದಾರೆ. ಸಾಯಿ ಪ್ರಣೀತ್‌, ಮಾರ್ಕಸ್‌ ಎಲಿಸ್‌, ಹೆಂಡ್ರಾ ಸೆತಿಯವಾನ್‌, ಲೌರೆನ್‌ ಸ್ಮಿತ್‌ ಅವರ ಬಲವೂ ತಂಡಕ್ಕಿದೆ.

ಕನ್ನಡಿಗರಾದ ಮಿಥುನ್‌ ಮಂಜುನಾಥ್‌, ಸಂಜನಾ ಸಂತೋಷ್‌, ತಿ ಟ್ರಾಂಗ್ ವೂ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಲೀ ಯೊಂಗ್‌ ಡೇ ಮುಂದಾಳತ್ವದ ರಾಕೆಟ್ಸ್‌ ತಂಡದಲ್ಲೂ ಪ್ರತಿಭಾನ್ವಿತರಿದ್ದಾರೆ. ಆ್ಯಂಡರ್ಸ್‌ ಆ್ಯಂಟೊನ್‌ಸನ್‌, ಕಿಮ್‌ ಜಿ ಜುಂಗ್‌, ಮನು ಅತ್ರಿ ಅವರು ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಸಮೀರ್‌ ವರ್ಮಾ, ಪಿಯಾ ಜೆಬಾದಿಹಾ ಬರ್ನಾಡೆತ್‌ ಮತ್ತು ಶ್ರಿಯಾಂಸಿ ಪರದೇಶಿ ಅವರೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಅವಧ್‌ಗೆ ಚೆನ್ನೈ ಸವಾಲು: ಸೋಮವಾರ ರಾತ್ರಿ ನಡೆಯುವ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ಮತ್ತು ಚೆನ್ನೈ ಸ್ಮ್ಯಾಷರ್ಸ್‌ ಎದುರಾಗಲಿವೆ.

20 ಪಂದ್ಯಗಳಿಂದ 16 ಪಾಯಿಂಟ್ಸ್‌ ಗಳಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಅವಧ್‌ ತಂಡ ಏಳನೇ ಸ್ಥಾನದಲ್ಲಿರುವ ಚೆನ್ನೈ ಎದುರು ಸುಲಭವಾಗಿ ಗೆಲುವಿನ ತೋರಣ ಕಟ್ಟುವ ಹುಮ್ಮಸ್ಸಿನಲ್ಲಿದೆ.

ಆರಂಭ: ರಾತ್ರಿ 7.
ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT