ಮಾಗಡಿ: ಜೀವನದಲ್ಲಿ ಛಲ ಬೆಳೆಸಿಕೊಳ್ಳುವುದು ಮುಖ್ಯ. ಮನಸಿದ್ದರೆ ಯಾವುದೇ ಸವಾಲುಗಳು ಅಡ್ಡಿಯಾಗುವುದಿಲ್ಲ. ಅಂಗ ವೈಫಲ್ಯವನ್ನು ಮೆಟ್ಟಿ ನಿಂತು ಗುರಿ ತಲುಪಬಹುದು ಎನ್ನುವುದಕ್ಕೆ ನಿದರ್ಶನವಾಗಿ ನಿಂತಿದ್ದಾರೆ ಮಾಗಡಿ ಪಟ್ಟಣದ ತಿರುಮಲೆ ನಿವಾಸಿ ಕೃಷ್ಣಪ್ಪ.
ಮಧುಮೇಹದಿಂದ (ಸಕ್ಕರೆ ಕಾಯಿಲೆ) ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ಕೃಷ್ಣಪ್ಪ, ಕ್ರೀಡಾಸಕ್ತಿಯ ಕೈಬಿಡಲಿಲ್ಲ. ಸತತ ಪರಿಶ್ರಮದಿಂದ ಪ್ಯಾರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಇದೇ ಅಕ್ಟೋಬರ್ ತಿಂಗಳಲ್ಲಿ ಮುಂಬೈನಲ್ಲಿ ನಡಯಲಿರುವ ಏಷ್ಯನ್ ನ್ಯಾಷನಲ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕರ್ನಾಟಕದ ಪರವಾಗಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವ ಇವರು ಪಂಜ ಕುಸ್ತಿಯಲ್ಲಿ ಹೆಚ್ಚಿನ ಸಾಧನೆಮಾಡಿದ್ದಾರೆ. ಜೊತೆಗೆ ಪೆನ್ಸಿಂಗ್ ಪೋಲಿಂಗ್, ಅಥ್ಲೆಟಿಕ್ಸ್ ನಲ್ಲಿ ಗುಂಡು ಎಸೆತ, ಜವಳಿ ಎಸೆತ ಸ್ಪರ್ಧೆಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದಾರೆ. ಕರ್ನಾಟಕ ಪಂಜ ಕುಸ್ತಿದಾರರ ಸಂಘದ ವತಿಯಿಂದ ಆಯೋಜಿಸುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುತ್ತದೆ. ಪಂಜ ಕುಸ್ತಿಯಲ್ಲಿಯೂ ಕೃಷ್ಣಪ್ಪ ಛತ್ತೀಸಗಢ, ಹೈದರಾಬಾದ್, ಮಥುರಾ, ನಾಗಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ, ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಪ್ಯಾರ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸಿನ ಬೆನ್ನು ಹತ್ತಿರುವ ಕೃಷ್ಣಪ್ಪ. ಹೆಚ್ಚಿನ ತಯಾರಿ ಅದಕ್ಕಾಗಿ ನಡೆಸಿದ್ದಾರೆ.
ರಾಷ್ಟ್ರಮಟ್ಟದ ಪಂಜ ಕುಸ್ತಿಯಲ್ಲಿ ಪ್ರಶಸ್ತಿ ಪಡೆದಿರುವ ಕೃಷ್ಣಪ್ಪ
ಪಿಂಚಣಿ ಬಿಟ್ಟರೆ ಬೇರೆ ಪ್ರೋತ್ಸಾಹವಿಲ್ಲ:
ಸರ್ಕಾರದಿಂದ ಅಂಗವಿಕಲರ ಪಿಂಚಣಿ ₹1400 ಬರುತ್ತಿದೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಪ್ರೋತ್ಸಾಹವಿಲ್ಲ. ಒಂದು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ₹ 20 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ನಾನು ಅಂಕವಿಕಲನಾಗಿರುವ ಕಾರಣ ಎಲ್ಲಿ ಹೋದರೂ ಜೊತೆಗೆ ಒಬ್ಬರನ್ನ ಸಹಾಯಕ್ಕೆ ಕರೆದುಕೊಂಡು ಹೋಗಬೇಕು. ಕ್ರೀಡಾಕೂಟಕ್ಕೆ ಪ್ರವೇಶ ಶುಲ್ಕ ಕಟ್ಟಬೇಕು. ಸಮವಸ್ತ್ರ ಖರೀದಿಸಬೇಕು. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಸ್ವಲ್ಪ ಪ್ರಮಾಣದ ಹಣ ಬರುತ್ತದೆ. ಅದರಿಂದಲೇ ಮುಂದಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಆರ್ಥಿಕ ಸಹಾಯ ಸಿಗುವುದಿಲ್ಲ ಎಂದು ಕೃಷ್ಣಪ್ಪ ಬೇಸರ ವ್ಯಕ್ತಪಡಿಸುತ್ತಾರೆ. ಪಂಜ ಕುಸ್ತಿಯಲ್ಲಿ ಯಾವುದೇ ನಗದು ಬಹುಮಾನ ಬರುವುದಿಲ್ಲ. ಪಂಚ ಕುಸ್ತಿಯನ್ನು ಇನ್ನೂ ಪ್ಯಾರ ಒಲಂಪಿಕ್ ಕ್ರೀಡಾಕೂಟದಲ್ಲಿ ಪರಿಗಣಿಸಿಲ್ಲ. ಇದನ್ನು ಕೂಡಲೇ ಪ್ಯಾರ ಒಲಂಪಿಕ್ಸ್‌ಗೆ ಸೇರಿಸಬೇಕು ಎನ್ನುತ್ತಾರೆ ಕೃಷ್ಣಪ್ಪ.
ಈಗ ಮಾಗಡಿ ಪಟ್ಟಣದ ಎನ್‌ಇಎಸ್ ಸರ್ಕಲ್ ನಲ್ಲಿ ಸಣ್ಣ ಪಟ್ಟಿ ಅಂಗಡಿಯನ್ನು ನಡೆಸುತ್ತಿರುವ ಕೃಷ್ಣಪ್ಪ ತಾಯಿ, ಹೆಂಡತಿ ಹಾಗೂ ಇಬ್ಬರು ಮಕ್ಕಳ ಜತೆ ತಿರುಮಲೆಯಲ್ಲಿ ವಾಸವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.