ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ ಕಬಡ್ಡಿ ಲೀಗ್‌: ಕುಸ್ತಿ ನೆಲದಲ್ಲಿ ಅರಳಿದ ‘ಚಂದ್ರ’

ಬೆಂಗಳೂರು ಬುಲ್ಸ್‌ ತಂಡ ಸೇರಿದ ದಾವಣಗೆರೆಯ ಚಂದ್ರನಾಯ್ಕ
Published 15 ಆಗಸ್ಟ್ 2024, 3:20 IST
Last Updated 15 ಆಗಸ್ಟ್ 2024, 3:20 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಉದಯೋನ್ಮುಖ ಆಟಗಾರ ಎಂ.ಚಂದ್ರ ನಾಯ್ಕ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಬೆಂಗಳೂರು ಬುಲ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಲ್‌ರೌಂಡರ್‌ ಆಗಿರುವ ಇವರು ಈ ಬಾರಿಯ ಲೀಗ್‌ನಲ್ಲಿ, ಆಡುವ ಬಳಗದಲ್ಲಿ ಸ್ಥಾನ ಪಡೆದು ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಲೀಗ್‌ಗೆ ಆಯ್ಕೆಯಾದ ದಾವಣಗೆರೆ ಯ ಮೊದಲ ಆಟಗಾರ ಎಂಬ ಹಿರಿಮೆ ಹೊಂದಿರುವ 21 ವರ್ಷದ ಇವರು, ನಗರದ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ, ತಾಯಿಯನ್ನು ಕಳೆದುಕೊಂಡಿರುವ ಅವರಿಗೆ ಸ್ವಂತ ಸೂರಿಲ್ಲ. ಸದ್ಯ ಬಾಡಿಗೆ ಕೊಠಡಿಯೊಂದರಲ್ಲಿ ನೆಲೆಸಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ. 

ಪ್ರ

ದಾವಣಗೆರೆ ಕುಸ್ತಿಗೆ ಪ್ರಸಿದ್ಧಿ. ಹೀಗಿರುವಾಗ ನಿಮಗೆ ಕಬಡ್ಡಿಯಲ್ಲಿ ಆಸಕ್ತಿ ಮೂಡಿದ್ದು ಹೇಗೆ? 


ನಾನು ಹುಟ್ಟಿ ಬೆಳೆದಿದ್ದೆಲ್ಲಾ ದಾವಣಗೆರೆಯ ಕಬ್ಬೂರು ಬಸಪ್ಪನಗರದಲ್ಲಿ. ನಮ್ಮಲ್ಲಿ ಕಬಡ್ಡಿ ಟೂರ್ನಿಗಳು ಹೆಚ್ಚು ನಡೆಯುತ್ತಿದ್ದವು. ಚಿಕ್ಕಂದಿನಿಂದಲೂ ಅವುಗಳನ್ನೆಲ್ಲಾ ನೋಡಿ ಬೆಳೆದಿದ್ದರಿಂದ ಸಹಜವಾಗಿಯೇ ಆಸಕ್ತಿ ಬೆಳೆಯಿತು. 6ನೇ ತರಗತಿ ಓದುತ್ತಿದ್ದಾಗ ಕಬಡ್ಡಿ ಆಡಲು ಶುರು ಮಾಡಿದೆ. ಬಳಿಕ ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆಯಾದೆ. ಅಲ್ಲಿ ಸೇರಿದ ಎರಡೇ ತಿಂಗಳಲ್ಲಿ ರಾಷ್ಟ್ರೀಯ ಸಬ್‌ ಜೂನಿಯರ್‌ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅದು ಇನ್ನಷ್ಟು ಸಾಧನೆಗೆ ಪ್ರೇರಣೆಯಾಯಿತು.


ಪ್ರ

ಬುಲ್ಸ್‌ ತಂಡದ ತರಬೇತಿ ಶಿಬಿರದ ಬಗ್ಗೆ ಹೇಳಿ?


ದೇಶದ ವಿವಿಧ ಭಾಗಗಳ ಒಟ್ಟು 21 ಮಂದಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದೆವು. ಜೂನ್‌ 19ರಿಂದ ಒಟ್ಟು 20 ದಿನಗಳವರೆಗೆ ಚೆನ್ನೈನಲ್ಲಿ ಶಿಬಿರ ನಡೆದಿತ್ತು. 21 ಜನರಲ್ಲಿ ನಾಲ್ಕು ಮಂದಿಯಷ್ಟೇ ತಂಡಕ್ಕೆ ಆಯ್ಕೆಯಾದರು. ಅದರಲ್ಲಿ ನಾನೂ ಒಬ್ಬ. 


ಪ್ರ

ಟಿ.ವಿ.ಯಲ್ಲಿ ಕಾಣಿಸುತ್ತಿದ್ದ (ಖ್ಯಾತನಾಮ) ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿದೆ. ಏನಂತೀರಾ?


ಪ್ರೊ ಕಬಡ್ಡಿಯಲ್ಲಿ ಆಡಬೇಕೆಂಬುದು ಮಹದಾಸೆಯಾಗಿತ್ತು. ಬುಲ್ಸ್‌ ತಂಡ ಸೇರಿರುವುದು ಖುಷಿ ನೀಡಿದೆ. ತಂಡದಲ್ಲಿ ಒಟ್ಟು 20 ಮಂದಿ ಇದ್ದಾರೆ. ಇವರಲ್ಲಿ ಆಡುವ ಬಳಗದಲ್ಲಿ ಸ್ಥಾನ ಸಿಗುವುದು 7 ಮಂದಿಗೆ ಮಾತ್ರ. ಆ 7 ಜನರಲ್ಲಿ ನಾನೊಬ್ಬ ಆಗಿರಬೇಕು. ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.  


ಪ್ರ

ನಿಮ್ಮ ಈವರೆಗಿನ ಪಯಣದ ಬಗ್ಗೆ ಹೇಳಿ?


ಬದುಕಿನಲ್ಲಿ ಎದುರಾಗಿದ್ದ ಕಷ್ಟಗಳನ್ನೆಲ್ಲಾ ಮೆಟ್ಟಿ ನಿಂತು ಈ ಹಂತಕ್ಕೆ ಬಂದಿದ್ದೇನೆ. ಅಪ್ಪ ಮಂಜ ನಾಯ್ಕ. ಅಮ್ಮ ಸರೋಜ ಬಾಯಿ. ನಾನು ಹಸುಗೂಸಾಗಿದ್ದಾಗಲೇ ಅಪ್ಪ ತೀರಿಕೊಂಡರು.

ಅಮ್ಮನ ಆಸರೆಯಲ್ಲಿ ಬೆಳೆದ ನನಗೆ ಅವರೇ ಸರ್ವಸ್ವ ವಾಗಿದ್ದರು. ಕಳೆದ ವರ್ಷ ಅವರೂ ನಿಧನರಾದರು. ಈ ಸಾಧನೆಯನ್ನು ಕಂಡು ಸಂಭ್ರಮಿಸಲು ಅವರಿಲ್ಲ ಎಂಬ ಕೊರಗು ತುಂಬಾ ಕಾಡುತ್ತಿದೆ. ಬಾಗಲಕೋಟೆಯ ಮುತ್ತು ಬಸಪ್ಪ ಧವಳೇಶ್ವರ್‌ ಅವರು ಕಷ್ಟ ಕಾಲದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ಏಕೈಕ ವ್ಯಕ್ತಿ. ಅವರು ಈಗಲೂ ಪ್ರತಿ ತಿಂಗಳು ನಾನಿರುವ ಕೊಠಡಿಯ ಬಾಡಿಗೆ ಕಟ್ಟುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT