ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pro Kabaddi 10: ಸೋಲಿನ ಸರಪಳಿಯಿಂದ ಹೊರಬರದ ಬುಲ್ಸ್‌

Published 9 ಡಿಸೆಂಬರ್ 2023, 18:33 IST
Last Updated 9 ಡಿಸೆಂಬರ್ 2023, 18:33 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ನಾಲ್ಕನೇ ಪಂದ್ಯದಲ್ಲೂ ಸೌರಭ್‌ ನಂದಲ್‌ ಬಳಗ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬುಲ್ಸ್‌ ತಂಡವು 32–38 ಅಂತರದಿಂದ ಹರಿಯಾಣ ಸ್ಟೀಲರ್ಸ್‌ ಎದುರು ಮಂಡಿಯೂರಿತು. ಯುಪಿ ಯೋಧಾಸ್‌ ವಿರುದ್ಧ ಮೊದಲ ಪಂದ್ಯದಲ್ಲಿ 57–27ರಿಂದ ಹೀನಾಯವಾಗಿ ಸೋತಿದ್ದ ಹರಿಯಾಣ, ಇಲ್ಲಿ ಸಾಂಘಿಕ ಪ್ರದರ್ಶನ ನೀಡಿ ಗೆಲುವನ್ನು ದಕ್ಕಿಸಿಕೊಂಡಿತು.

ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ಹಾಗೂ ಬೆಂಗಾಲ್ ವಾರಿಯರ್ಸ್‌ ವಿರುದ್ಧ ಸೋತಿದ್ದ ಬುಲ್ಸ್‌ ತಂಡ, ಶುಕ್ರವಾರ ತವರಿನಲ್ಲಿ ದಬಾಂಗ್​ ಡೆಲ್ಲಿ ಎದುರು 31–38 ರಿಂದ ಪರಾಭವಗೊಂಡಿತ್ತು. ಹ್ಯಾಟ್ರಿಕ್‌ ಸೋಲಿನ ಬಳಿಕ ತವರಿನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಬಹುದೆಂಬ ಬುಲ್ಸ್‌ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಪಂದ್ಯದ ಆರಂಭದಲ್ಲೇ ಭರತ್‌ ಅಮೋಘ ರೈಡಿಂಗ್‌ ಮಾಡಿ ಬುಲ್ಸ್‌ ತಂಡಕ್ಕೆ 5 ಅಂಕ ತಂದುಕೊಟ್ಟರು. ಆದರೆ, ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಪಂದ್ಯದ ಎರಡನೇ ನಿಮಿಷದಲ್ಲೇ ಎದುರಾಳಿ ತಂಡವನ್ನು ಆಲೌಟ್‌ ಮಾಡುವ ಅವಕಾಶವನ್ನು ಕೈಚೆಲ್ಲಿದ ಆತಿಥೇಯ ತಂಡ, ನಂತರ ಹಿನ್ನಡೆಯನ್ನು ಹಿಗ್ಗಿಸುತ್ತಾ ಹೋಯಿತು.‌

ವಿರಾಮದ ವೇಳೆಗೆ 13–27ರಿಂದ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ತಂಡ ಉತ್ತರಾರ್ಧದಲ್ಲಿ ಕೊಂಚ ಪ್ರತಿರೋಧ ತೋರಿತು. ಕೊನೆಯ 10 ನಿಮಿಷದ ವೇಳೆ ಪಂದ್ಯ ರೋಚಕವಾಗಿ ಸಾಗಿದರೂ, ಸ್ಟೀಲರ್ಸ್‌ ಆಟಗಾರರು ಎಲ್ಲ ವಿಭಾಗಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಗಮನ ಸೆಳೆದರು. ಬುಲ್ಸ್‌ ತಂಡವು ಎರಡು ಬಾರಿ ಆಲೌಟ್‌ ಆದರೆ, ಎದುರಾಳಿ ತಂಡದ ಅಂಗಣವನ್ನು ಒಮ್ಮೆ ಖಾಲಿ ಮಾಡಿತು.

ಭರತ್‌ 14 ಪಾಯಿಂಟ್ಸ್‌ಗಳೊಂದಿಗೆ ಮಿಂಚಿದರೂ, ತಂಡವು ರೈಡಿಂಗ್‌ಗೆ ಅವರೊಬ್ಬರನ್ನೇ ಅವಲಂಬಿಸಿದ್ದು ಈ ಪಂದ್ಯದಲ್ಲೂ ಮುಳುವಾಯಿತು. ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಹರಿಯಾಣ ತಂಡದ ವಿನಯ್‌ (8), ಸಿದ್ಧಾರ್ಥ್‌ ದೇಸಾಯಿ (7) ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.

ಯುಪಿ ಯೋಧಾಸ್‌ಗೆ ಗೆಲುವು: ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ ತಂಡವು 48–33 ರಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು. ಸುರೇಂದರ್ ಗಿಲ್‌ (14) ಮತ್ತು ಪ್ರದೀಪ್‌ ನರ್ವಾಲ್‌ (8) ಯೋಧಾಸ್‌ ಪರ ಮಿಂಚಿದರು. ಟೈಟನ್ಸ್‌ ತಂಡದ ನಾಯಕ ಪವನ್‌ ಸೆಹ್ರಾವತ್‌ (11) ಅವರಿಗೆ ಉಳಿದ ಆಟಗಾರರಿಗೆ ಸಾಥ್‌ ದೊರೆಯಲಿಲ್ಲ.

ಇಂದಿನ ಪಂದ್ಯಗಳು

ಬೆಂಗಾಲ್ ವಾರಿಯರ್ಸ್‌– ತಮಿಳು ತಲೈವಾಸ್‌ (ರಾತ್ರಿ 8)

ದಬಾಂಗ್‌ ಡೆಲ್ಲಿ– ಹರಿಯಾಣ ಸ್ಟೀಲರ್ಸ್‌ (ರಾತ್ರಿ 9)

Highlights - null

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT