ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕ್ರೀಡಾಕೂಟ: ಭಾರತ ಪುರುಷರ ರೋಯಿಂಗ್ ತಂಡದ ಚಾರಿತ್ರಿಕ ಸಾಧನೆ

ಜೆಎಸ್‌ಸಿ ಕೆರೆಯಲ್ಲಿ ಭಾರತದ ರೋವರ್‌ಗಳ ಪ್ರಾಬಲ್ಯ
Last Updated 24 ಆಗಸ್ಟ್ 2018, 15:56 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಪುರುಷರ ರೋಯಿಂಗ್ ತಂಡ ಶುಕ್ರವಾರ ಚಾರಿತ್ರಿಕ ಸಾಧನೆ ಮಾಡಿದೆ.

ಸವರ್ಣ ಸಿಂಗ್‌, ದತ್ತು ಬಾಬನ್‌ ಭೋಕನಾಳ್‌, ಓಂ ಪ್ರಕಾಶ್‌ ಮತ್ತು ಸುಖಮೀತ್‌ ಸಿಂಗ್‌ ಅವರಿದ್ದ ತಂಡ ಏಷ್ಯನ್‌ ಕ್ರೀಡಾಕೂಟದ ಕ್ವಾಡ್ರಪಲ್‌ ಸ್ಕಲ್ಸ್‌ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನದ ‍ಪದಕ ಜಯಿಸಿ ದಾಖಲೆ ಬರೆದಿದೆ.

ಕೂಟದಲ್ಲಿ ಭಾರತ ಗೆದ್ದ ಎರಡನೆ ಚಿನ್ನ ಇದಾಗಿದೆ. 2010ರಲ್ಲಿ ನಡೆದಿದ್ದ ಕೂಟದ ಸಿಂಗಲ್‌ ಸ್ಕಲ್ಸ್‌ ವಿಭಾಗದಲ್ಲಿ ಬಜರಂಗ್‌ ಲಾಲ್‌ ಠಾಕರ್‌ ಅವರು ಮೊದಲ ಸ್ಥಾನ ಗಳಿಸಿದ್ದರು.

ಜೆಎಸ್‌ಸಿ ಕೆರೆಯಲ್ಲಿ ನಡೆದ ಫೈನಲ್‌ನಲ್ಲಿ ಭಾರತದ ರೋಯಿಂಗ್‌ಪಟುಗಳು 6 ನಿಮಿಷ 17.13 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸವರ್ಣ, ದತ್ತು, ಸುಖಮೀತ್‌ ಮತ್ತು ಓಂ ಪ್ರಕಾಶ್‌ ಶುರುವಿನಿಂದಲೂ ಅಮೋಘ ಸಾಮರ್ಥ್ಯ ತೋರಿ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿದರು.

ಆತಿಥೇಯ ಇಂಡೊನೇಷ್ಯಾ ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿತು. ಕಾಕನ್‌ ಕುಸಮಾನ, ಎಡ್ವಿನ್‌ ಜಿನಾಂಜರ್‌ ರುಡಿಯಾನ, ಸುಲ್ಪಿಯಾಂಟೊ ಮತ್ತು ಮೆಮೊ ಅವರನ್ನೊಳಗೊಂಡ ತಂಡ 6 ನಿಮಿಷ 20.58 ಸೆಕೆಂಡುಗಳಲ್ಲಿ ಅಂತಿಮ ಗುರಿ ಮುಟ್ಟಿತು.

ಥಾಯ್ಲೆಂಡ್‌ನ ಪಿಯಾಪೊಂಗ್‌ ಅರನುನಾಮ, ಮೆಥಾಸಿಟ್‌ ಫ್ರೊಮ್‌ಫೊಯೆಮ್‌, ಪ್ರೇಮ್‌ ನಂಪ್ರತುಯೆಂಗ್‌ ಮತ್ತು ಜರುವತ್‌ ಸಯೆನ್‌ಸುಕ್‌ ಕಂಚಿನ ಪದಕಗಳಿಗೆ ಕೊರಳೊಡ್ಡಿದರು. ಇವರು 6 ನಿಮಿಷ 22.41 ಸೆಕೆಂಡುಗಳ ಸಾಮರ್ಥ್ಯ ತೋರಿದರು.

ಉಜ್ಬೇಕಿಸ್ತಾನ (6ನಿ,27.06ಸೆ.), ಇರಾನ್‌ (6ನಿ, 28.72ಸೆ.) ಮತ್ತು ದಕ್ಷಿಣ ಕೊರಿಯಾ (6ನಿ, 41.92ಸೆ) ಕ್ರಮವಾಗಿ ನಾಲ್ಕರಿಂದ ಆರನೆ ಸ್ಥಾನ ಪಡೆದವು.

‘ಗುರುವಾರ ನಮ್ಮಿಂದ ಪದಕದ ಸಾಧನೆ ಮೂಡಿಬಂದಿರಲಿಲ್ಲ. ಹೀಗಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದೆವು. ಆ ನೋವು ನಮ್ಮನ್ನು ಕಾಡುತ್ತಿತ್ತು. ಕ್ವಾಡ್ರಪಲ್‌ ಸ್ಕಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲಲೇಬೇಕು ಎಂದು ನಿರ್ಧರಿಸಿದ್ದೆವು. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದೆವು. ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಚಿನ್ನ ಗೆದ್ದಿರುವುದರಿಂದ ಎಲ್ಲರಿಗೂ ಅತೀವ ಖುಷಿಯಾಗಿದೆ’ ಎಂದು ಸವರ್ಣ ಸಿಂಗ್‌ ಭಾವುಕರಾದರು.

ದುಷ್ಯಂತ್‌ಗೆ ಕಂಚು: ಪುರುಷರ ಲೈಟ್‌ವೇಟ್‌ ಸಿಂಗಲ್‌ ಸ್ಕಲ್ಸ್‌ ವಿಭಾಗದಲ್ಲಿ ದುಷ್ಯಂತ್‌ ಚೌಹಾಣ್‌ ಕಂಚಿನ ಪದಕ ಗೆದ್ದರು. 2014ರ ಕೂಟದಲ್ಲೂ ದುಷ್ಯಂತ್‌ ಕಂಚಿನ ಸಾಧನೆ ಮಾಡಿದ್ದರು.

ಶುಕ್ರವಾರ ನಡೆದ ಫೈನಲ್‌ನಲ್ಲಿ ದುಷ್ಯಂತ್‌ 7ನಿಮಿಷ 18.76 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ದಕ್ಷಿಣ ಕೊರಿಯಾದ ಪಾರ್ಕ್‌ ಹುನ್ಸು (7ನಿ,12.86ಸೆ.) ಮತ್ತು ಚೀನಾ ತೈಪೆಯ ಚಿವು ಹಿನ್‌ ಚುನ್‌ (7ನಿ, 14.16ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕಗಳಿಗೆ ಮುತ್ತಿಕ್ಕಿದರು.

ಪುರುಷರ ಲೈಟ್‌ವೇಟ್‌ ಡಬಲ್‌ ಸ್ಕಲ್ಸ್‌ ವಿಭಾಗದಲ್ಲಿ ರೋಹಿತ್‌ ಕುಮಾರ್‌ ಮತ್ತು ಭಗವಾನ್‌ ಸಿಂಗ್‌ ಅವರು ಕಂಚಿಗೆ ಕೊರಳೊಡ್ಡಿದರು.

ಫೈನಲ್‌ನಲ್ಲಿ ಭಾರತದ ಜೋಡಿ 7 ನಿಮಿಷ 04.61 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ಜಪಾನ್‌ನ ಮಸಾಯುಕಿ ಮಿಯಾವುರಾ ಮತ್ತು ಮಶಾಹಿರೊ ತಕೆದಾ ಅವರು (7ನಿ, 01.70ಸೆ.) ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾದ ಕಿಮ್‌ ಬ್ಯುಂಗ್‌ಹೂನ್‌ ಮತ್ತು ಲೀ ಮಿನ್‌ಹ್ಯುಕ್‌ ಅವರು ಬೆಳ್ಳಿಯ ಪದಕ ಜಯಿಸಿದರು. ಇವರು ನಿಗದಿತ ದೂರ ಕ್ರಮಿಸಲು 7ನಿಮಿಷ 03.22 ಸೆಕೆಂಡು ಸಮಯ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT