ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್: ಚಿನ್ನದ ಗುರಿಯಲ್ಲಿ ಭಾರತ ತಂಡ, ಯಶಸ್ಸಿನ ಹಿಂದೆ ತ್ಯಾಗದ ಕಥೆ...

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಹಾಕಿ ತಂಡದ ಆಟಗಾರ್ತಿಯರ ಯಶಸ್ಸಿನ ಹಿಂದೆ ತ್ಯಾಗ ಮತ್ತು ಸ್ಫೂರ್ತಿಯ ಕಥೆಗಳಿವೆ. ಒಬ್ಬ ಆಟಗಾರ್ತಿಯ ಕುಟುಂಬ ಬರೇ ₹800 ಗಳಿಸಲು ತಿಂಗಳಿಡೀ ದುಡಿಯಬೇಕಾಗಿತ್ತು. ಹಾಲಿ ತಂಡದ ಒಬ್ಬ ಆಟಗಾರ್ತಿ ಸುಮಾರು ಹತ್ತು ವರ್ಷ ನಿರುದ್ಯೋಗಿಯಾಗಿದ್ದರು. ಮತ್ತೋರ್ವ ಆಟಗಾರ್ತಿ ಹಾಕಿ ಸ್ಟಿಕ್‌ ಖರೀದಿಸಲಾಗದೇ ಬಿದಿರಿನ ತುಂಡನ್ನೇ ಬಳಸಿ ರಸ್ತೆ ಬದಿ ಆಡಿ ಬೆಳೆದವರು.

ಸವಿತಾ ಪೂನಿಯಾ, ನೇಹಾ ಗೋಯಲ್ ಮತ್ತು ನಿಕಿ ಪ್ರಧಾನ್ ಅವರ ಬದುಕಿನಲ್ಲಿ ಹಾಕಿ ಆಟ ಭರವಸೆಯ ಕಿರಣಗಳನ್ನು ಮೂಡಿಸಿದೆ. ವೈಯಕ್ತಿಕ ನೋವುಗಳು ಆಟದ ಮೇಲೆ ಒಂದಿನಿತೂ ಪರಿಣಾಮ ಬೀರದಂತೆ ಈ ಆಟಗಾರ್ತಿಯರು ನೋಡಿಕೊಂಡಿದ್ದಾರೆ. ಈಗ ತಂಡದ ಯಶಸ್ಸಿಗಾಗಿ ಹಸಿದಿದ್ದಾರೆ.

‌ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ತಂಡಕ್ಕೆ ಕಂಚಿನ ಪದಕ ಸ್ವಲ್ಪದರಲ್ಲೇ ಕೈತಪ್ಪಿತ್ತು. ಈಗ ಏಷ್ಯನ್ ಗೇಮ್ಸ್‌ನಲ್ಲಿ ಪದಕದ ಕನಸನ್ನು ನನಸು ಮಾಡಲು ಹೆಜ್ಜೆಯಿಟ್ಟಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವುದು ಅವರ ಮುಂದಿನ ಹೆಜ್ಜೆಯಾಗಿದೆ. ಇದಕ್ಕಾಗಿ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಮನೋಬಲ ಹೆಚ್ಚಿಸಲು ಬಾಯಿರುಚಿಗೆ ಕಡಿವಾಣ ಹಾಕಿದ್ದಾರೆ.

‘ಟೋಕಿಯೊ ಒಲಿಂಪಿಕ್ಸ್‌ ನಂತರ ನಮ್ಮಿಂದ ಬಹಳಷ್ಟು ನಿರೀಕ್ಷಿಸಲಾಗುತ್ತಿದೆ. ಹಾಂಗ್‌ ಜೌನಲ್ಲಿ ಈ ತಂಡ ಚಿನ್ನದ ಪದಕ ಗೆಲ್ಲುವ ಸಾಮರ್ಥ್ಯ ಮತ್ತು ದೈಹಿಕ ಕ್ಷಮತೆ ಹೊಂದಿದೆ’ ಎನ್ನುತ್ತಾರೆ ತಂಡದ ನಾಯಕಿ ಹಾಗೂ ಗೋಲ್‌ಕೀಪರ್ ಸವಿತಾ.

‘ನಾನು ಏಷ್ಯನ್‌ ಗೇಮ್ಸ್ ಮುಗಿಯುವವರೆಗೆ ಪೀಟ್ಸಾ ಅಥವಾ ಪಾನಿಪುರಿ ತಿನ್ನುವುದಿಲ್ಲ’ ಎಂದು 33 ವರ್ಷದ ಸವಿತಾ ಸುದ್ದಿಸಂಸ್ಥೆಗೆ ಈಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದರು.

ಈಗ ವಿಶ್ವದ ಅತ್ಯುತ್ತಮ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಸವಿತಾ, ತಮ್ಮ ಕ್ರೀಡಾಬದುಕಿನ ಆರಂಭದ ದಿನಗಳನ್ನು ಮರೆತಿಲ್ಲ. ಉದ್ಯೋಗಕ್ಕಾಗಿ ಅವರು ಒಂಬತ್ತು ವರ್ಷ ಅಲೆದಾಡಿದ್ದರು. ನಾನು 2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ, ಮರುವರ್ಷವೇ ಏಷ್ಯಾಕಪ್‌ನಲ್ಲಿ ಬೆಳ್ಳಿಯ ಪದಕ ತಂಡಕ್ಕೆ ಬಂದಿತ್ತು. ಎಲ್ಲರೂ ನನಗೆ ಉದ್ಯೋಗ ಸಿಗುತ್ತದೆ ಎಂದು ಯೋಚಿಸಿದ್ದರು. ತಾಯಿಗೆ ಅನಾರೋಗ್ಯವಿದ್ದರೂ ನನ್ನನ್ನು ಆಡಲು ಕಳಿಸುತ್ತಿದ್ದರು. ನನ್ನ ಕುಟುಂಬ, ನನ್ನ ಬೆನ್ನೆಲುಬಾಗಿ ನಿಂತ ಕಾರಣ ಆಟದ ಮೇಲೆ ಅದರ ಪರಿಣಾಮ ಆಗಲಿಲ್ಲ’ ಎಂದು ಸಿರ್ಸಾದ (ಹರಿಯಾಣ) ಆಟಗಾರ್ತಿ ಹೇಳಿದರು.

‘2018ರಲ್ಲಿ ನನಗೆ ಅರ್ಜುನ ಪ್ರಶಸ್ತಿ ಬಂದಾಗ, ನನ್ನ ತಾಯಿ ಕೇಳಿದ್ದು ‘ಮಗಳೇ ಈಗ ನಿನಗೆ ನೌಕರಿ ಸಿಗುತ್ತಲ್ವಾ?’. ನನಗೆ ಆಗ ಏನು ಹೇಳಬೇಕೆಂದು ತೋಚಲಿಲ್ಲ’ ಎಂದು ಸವಿತಾ ಹೇಳಿದರು.

‘2018ರಲ್ಲಿ ಒಲಿಂಪಿಯನ್‌ಗಳನ್ನು ಭಾರತ ಕ್ರೀಡಾ ಪ್ರಾಧಿಕಾರವು ನೇಮಕಾತಿ ಮಾಡಿಕೊಳ್ಳಲು ತೊಡಗಿದ ಮೇಲೆ ನನಗೂ ಉದ್ಯೋಗ ದೊರಕಿತು. ಈ ಅವಧಿಯನ್ನು ಮರೆಯುವುದು ಕಷ್ಟ. ಆದರೆ ಇದು ನನ್ನಿಂದ ಉತ್ತಮ ಆಟ ಹೊರಬರಲು ಪ್ರೇರೇಪಿಸಿತು. ಆದರೆ ಈಗ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆ’ ಎಂದರು.

ಕಷ್ಟದಲ್ಲಿ ಬೆಂದ ನೇಹಾ: ತಂಡದ ಮಿಡ್‌ಫೀಲ್ಡರ್‌ ಆಗಿರುವ ನೇಹಾ ಗೋಯಲ್ ಅವರೂ ಕಷ್ಟಪಟ್ಟು ಮೇಲೆಬಂದವರು. ಸೋನೆಪತ್‌ನಲ್ಲಿ ಜನಿಸಿದ ನೇಹಾ ತಾಯಿ ಮತ್ತು ಸಹೋದರಿಯರ ಜೊತೆ ಸೈಕಲ್‌ ತಯಾರಿಕೆ ಘಟಕದಲ್ಲಿ ₹ 800ಕ್ಕೆ ದುಡಿಯುತ್ತಿದ್ದರು. ‘ಶೂ ಮತ್ತು ಸಮವಸ್ತ್ರಕ್ಕಾಗಿ ಹಾಕಿ ಆಡುತ್ತಿದ್ದೆ. ಸೈಕಲ್‌ ಚಕ್ರದ ಕಡ್ಡಿಗಳನ್ನು ನೇರಗೊಳಿಸುತ್ತಿದ್ದೆವು. ಹಾಕಿ ತರಬೇತಿ ಪಡೆಯಲು ಆಟೊಕ್ಕೆ ₹ 20 ಕೇಳಲು ನನಗೆ ಮುಜುಗರವಾಗುತಿತ್ತು’ ಎಂದು ಅವರು ಹಳೆಯ ದಿನಗಳನ್ನು ನೆನಪಿಸುತ್ತಾರೆ.

‘ಭೋಪಾಲ್‌ನಲ್ಲಿ ನನಗೆ ಟೂರ್ನಿಯೊಂದರಲ್ಲಿ ಪ್ರಶಸ್ತಿ ಬಂದಾಗ ನನ್ನ ಕುಟುಂಬವನ್ನು ಈ ನರಕದಿಂದ ಪಾರು ಮಾಡಲು ನಿರ್ಧರಿಸಿದೆ. 2015ರಲ್ಲಿ ನನಗೆ ರೈಲ್ವೆಯಲ್ಲಿ ಕೆಲಸ ದೊರೆಯಿತು. ಅಂದಿನಿಂದ ಕುಟುಂಬದ ಹೊಣೆ ಹೊತ್ತಿದ್ದೇನೆ’ ಎನ್ನುತ್ತಾರೆ 26 ವರ್ಷದ ನೇಹಾ.

‘ಹಾಕಿ ನನ್ನ ಬದುಕಿಗೆ ಘನತೆ ಮತ್ತು ವಿಶ್ವಾಸ ಮೂಡಿಸಿದೆ. ನನ್ನ ಏಕೈಕ ಕನಸು ಎಂದರೆ ದೇಶಕ್ಕೆ ಒಲಿಂಪಿಕ್ ಪದಕ ಗೆದ್ದುಕೊಡುವುದು. ನಾನು ಅಲ್ಲಿಯವರೆಗೆ ಬೇಕರಿ ಪದಾರ್ಥ, ಅಚ್ಚುಮೆಚ್ಚಿನ ಪೀಜಾ ತಿನ್ನದೇ ಇರಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದ್ದಾರೆ.

ಜಾರ್ಖಂಡ್‌ನ ನಕ್ಸಲ್‌ ಪೀಡಿತ, ಬುಡಕಟ್ಟು ಜನಾಂಗದವರೇ ಇರುವ ಖುಂತಿ ಜಿಲ್ಲೆಯ ನಿಕ್ಕಿ ಪ್ರಧಾನ್ ಒಲಿಂಪಿಕ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಮೊದಲ ಆಟಗಾರ್ತಿಯಾಗಿದ್ದಾರೆ.

‘ನಾನು ಆಡಲು ಆರಂಭಿಸಿದ ದಿನಗಳಲ್ಲಿ ಹಳ್ಳಿಯಲ್ಲಿ ಒಂದೂ ಮೈದಾನವಿರಲಿಲ್ಲ. ನನ್ನ ತಂದೆ ಪೊಲೀಸ್ ಕಾನ್‌ಸ್ಟೆಬಲ್. ಹಾಕಿ ಸ್ಟಿಕ್‌ ಖರೀದಿಸಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬಿದಿರಿನ ತುಂಡುಗಳನ್ನು ಬಳಸಿ ನಾನು ರಸ್ತೆ ಮತ್ತು ಖಾಲಿಬಿದ್ದ ಹೊಲಗಳಲ್ಲಿ ಆಟ ಅಭ್ಯಾಸ ಮಾಡುತ್ತಿದ್ದೆ’ ಎಂದು ಮೆಲುಕು ಹಾಕಿದರು.

ತಂಡದ ಹಿರಿಯ ರಕ್ಷಣಾ ಆಟಗಾರ್ತಿ ದೀಪ್‌ ಗ್ರೇಸ್‌ ಎಕ್ಕಾ ಅವರು ಭಾರತದ ಹಾಕಿ ನರ್ಸರಿ ಎನಿಸಿದ ಒಡಿಶಾದ ಸುಂದರಗಢ ಜಿಲ್ಲೆಯವರು. ಅವರು ಹಾಂಗ್‌ಜೌ ಕ್ರೀಡೆಗಳು ಮುಗಿಯುವತನಕ ಸಿಹಿತಿನಿಸು ತಿನ್ನದಿರಲು ನಿರ್ಧರಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಹಾಕಿ ಆರಂಭವಾಗಿದ್ದು 1982ರ ದೆಹಲಿ ಕ್ರೀಡೆಗಳಲ್ಲಿ. ಭಾರತ ಚೊಚ್ಚಲ ಯತ್ನದಲ್ಲೇ ಚಿನ್ನದ ಪದಕ ಗೆದ್ದುಕೊಂಡಿತ್ತು. ನಂತರದ ಕ್ರೀಡೆಗಳಲ್ಲಿ ಭಾರತ ಎರಡು ಬೆಳ್ಳಿ (1998, 2018) ಮತ್ತು ಮೂರು ಕಂಚಿನ ಪದಕಗಳನ್ನು (1986, 2006, 2014) ಗೆದ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT