ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೀನ್‌ ನದಿಯಲ್ಲಿ ಒಲಿಂಪಿಕ್ಸ್‌ ಉದ್ಘಾಟನೆ: ಮುಂದುವರಿದ ಹೊಯ್ದಾಟ

ನದಿ ಮಲೀನ, ಮಳೆ, ಉಗ್ರರ ಉಪಟಳ ಭೀತಿ
Published 24 ಜೂನ್ 2024, 15:34 IST
Last Updated 24 ಜೂನ್ 2024, 15:34 IST
ಅಕ್ಷರ ಗಾತ್ರ

ಪ್ಯಾರಿಸ್‌: ಸೀನ್ ನದಿಯಲ್ಲಿ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಈ ಬಾರಿಯ ಕ್ರೀಡಾಮೇಳದ ಆಕರ್ಷಣೆಯಾಗಿದೆ. ಆದರೆ ಒಂದು ತಿಂಗಳು ಇರುವಂತೆ ಜುಲೈ 26ರಂದು ಈ ನದಿಯಲ್ಲಿ ವಿನೂತನ ರೀತಿಯ ಉದ್ಘಾಟನೆ ಸಾಧ್ಯವಾಗುವುದೇ ಎಂಬ ಹೊಯ್ದಾಟ ಮುಂದುವರಿದಿದೆ.

ಮಳೆಯ ಭೀತಿ, ಮಾಲಿನ್ಯ ಮತ್ತು ಉಗ್ರರ ಉಪಟಳದ ಆತಂಕ ವ್ಯವಸ್ಥಾಪಕರಿಗೆ ಈ ವಿನೂತನ ಯೋಜನೆಯ ಬಗ್ಗೆ ಯೋಚಿಸುವಂತೆ ಮಾಡಿದೆ.

ಮೊದಲ ಬಾರಿ ಉದ್ಘಾಟನಾ ಸಮಾರಂಭವನ್ನು ಕೂಟದ ಮುಖ್ಯ ಕ್ರೀಡಾಂಗಣದಿಂದ ಆಚೆ ನದಿಯಲ್ಲಿ ದೋಣಿಗಳನ್ನು ಬಳಸಿ ನಡೆಸಲು ನಿರ್ಧರಿಸಲಾಗಿದೆ. ಇದೇ ನದಿಯಲ್ಲಿ ಮುಕ್ತ ಈಜು ಮತ್ತು ಟ್ರಯಥ್ಲಾನ್‌ನ ಈಜು ಲೆಗ್‌ ನಿಗದಿಯಾಗಿದೆ.

ಸದ್ಯ ನದಿಯ ಹರಿವು ಜೋರಾಗಿದ್ದು, ಪ್ರಸ್ತುತ ರಿಹರ್ಸಲ್‌ ನಡೆಸುವುದು ಕಷ್ಟವಾಗಿದೆ. ನದಿಯ ನೀರೂ ಸ್ವಚ್ಛವಾಗಿಲ್ಲ. 85 ದೋಣಿಗಳನ್ನು ಬಳಸಿ ಸೋಮವಾರ ಮೊದಲ ಸಲ ನಡೆಸಲು ಉದ್ದೇಶಿಸಲಾಗಿದ್ದ ತಾಲೀಮನ್ನು ಹರಿವು ತೀವ್ರವಾದ ಕಾರಣ ರದ್ದುಪಡಿಸಲಾಯಿತು. ಉದ್ಘಾಟನೆ ದಿನ ಆರು ಕಿ.ಮೀ. (ನಾಲ್ಕು ಮೈಲಿ) ಅಥ್ಲೀಟುಗಳು ದೋಣಿಯಲ್ಲಿ ಸಾಗಬೇಕಾಗಿದೆ.

‘ಅಂದು ನದಿಯ ಹರಿವು ಜೋರಾಗಿದ್ದಲ್ಲಿ ಅದು ಉದ್ಘಾಟನಾ ಸಮಾರಂಭಕ್ಕೆ ಗಂಭೀರ ಸಮಸ್ಯೆ ಒಡ್ಡಬಲ್ಲದು’ ಎಂದು ಜಲಶಾಸ್ತ್ರಜ್ಞ ಜೀನ್ ಮೇರಿ ಮೌಷೆಲ್ ‘ಎಎಫ್‌ಪಿ’ಗೆ ತಿಳಿಸಿದರು. ನೀರಿನ ಮಟ್ಟ ಸಾಮಾನ್ಯ ಬೇಸಿಗೆಯಲ್ಲಿ ಇರುವುದಕ್ಕಿಂತ ನಾಲ್ಕರಿಂದ ಐದು ಪಟ್ಟು ಜಾಸ್ತಿಯಿದ್ದು ಹರಿವಿನ ವೇಗದಲ್ಲೂ ಹೆಚ್ಚಳವಾಗಿದೆ.

ಮೇ ಮತ್ತು ಜೂನ್ ತಿಂಗಳಲ್ಲಿ ಆಗಿರುವ ಭಾರಿ ಮಳೆಯಿಂದ ನದಿಯೂ ಮಲೀನಗೊಂಡಿದೆ. ನದಿ ಸ್ವಚ್ಛಗೊಳಿಸಲು ಕಳೆದ ದಶಕದಲ್ಲಿ ಕೋಟಿಗಟ್ಟಲೆ ಯುರೊ ವೆಚ್ಚಮಾಡಲಾಗಿದೆ. ಒಳಚರಂಡಿ ವ್ಯವಸ್ಥೆ ಮತ್ತು ನೀರಿನ ಸಂಸ್ಕರಣೆ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT