ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪಕ್‌ ಟಕ್ರಾ: ಭಾರತದ ಭರವಸೆ

Last Updated 26 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ವಾಲಿಬಾಲ್‌ ಕ್ರೀಡೆ ಎಲ್ಲರಿಗೂ ಆಡಿ ಅಥವಾ ನೋಡಿ ಗೊತ್ತು. ಈ ಆಟದಲ್ಲಿ ಕೈಯಲ್ಲಿ ಹೊಡೆಯುವ ಚೆಂಡನ್ನು ಕಾಲಲ್ಲಿ ಹೊಡೆದರೆ ಹೇಗಿದ್ದೀತು...? ಊಹಿಸುವುದೂ ಕಷ್ಟ. ಆದರೆ ಅಂಥ ಆಟವೂ ಇದೆ. ಅದು ಏಷ್ಯನ್‌ ಕ್ರೀಡಾಕೂಟದಲ್ಲಿ 1990ರಲ್ಲೇ ಸೇರ್ಪಡೆಯಾಗಿದೆ. ಇದರ ಹೆಸರು ಸೆಪಕ್‌ ಟಕ್ರಾ.

ಇಂಡೊನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಸೆಪಕ್ ಟಕ್ರಾದಲ್ಲಿ ಭಾರತ ಮೊದಲ ಬಾರಿ ಪದಕ ಗೆದ್ದಿದೆ. ಹೀಗಾಗಿ ಈ ಕ್ರೀಡೆ ಈಗ ಭಾರಿ ಪ್ರಚಾರ ಪಡೆದುಕೊಂಡಿದೆ.

ವಾಲಿಬಾಲ್‌ನ ಮತ್ತೊಂದು ರೂಪವಾಗಿರುವ ಸೆಪಕ್‌ ಟಕ್ರಾ ಆರಂಭಗೊಂಡದ್ದು ಏಷ್ಯಾದಲ್ಲೇ. ಮಲೇಷ್ಯಾದ ಸೆಪಕ್‌ ಮತ್ತು ಥಾಯ್ಲೆಂಡ್‌ನ ಟಕ್ರಾ ಎಂಬ ಪದಗಳು ಸೇರಿ ಈ ಆಟಕ್ಕೆ ಹೆಸರು ಬಂದಿದೆ. ಮಲಯ ಭಾಷೆಯಲ್ಲಿ ಸೆಪಕ್ ಎಂದರೆ ಒದೆಯುವುದು, ಥಾಯ್‌ ಭಾಷೆಯಲ್ಲಿ ಟಕ್ರಾ ಎಂದರೆ ಚೆಂಡು. ಸೆಪಕ್ ಟಕ್ರಾ ಎಂದರೆ ಚೆಂಡನ್ನು ಒದೆಯುವುದು ಎಂದರ್ಥ.

ಸೆಪಕ್‌ ಟಕ್ರಾವನ್ನು ಏಷ್ಯನ್‌ ಕ್ರೀಡಾಕೂಟದಲ್ಲಿ ಸೇರಿಸಲು ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಈ ಪ್ರಯತ್ನದ ಭಾಗವಾಗಿ ದೆಹಲಿಯಲ್ಲಿ 1982ರಲ್ಲಿ ನಡೆದ ಕೂಟದಲ್ಲಿ ಸೆಪಕ್‌ ಟಕ್ರಾದ ‘ಪ್ರದರ್ಶನ’ ನಡೆದಿತ್ತು. ಇದಾದ ಎಂಟು ವರ್ಷಗಳ ನಂತರ ಕೂಟದಲ್ಲಿ ಇದನ್ನು ಸೇರಿಸಲು ಹಸಿರು ನಿಶಾನೆ ಲಭಿಸಿತ್ತು.

ಬೀಜಿಂಗ್‌ನಲ್ಲಿ 1990ರಲ್ಲಿ ನಡೆದಿದ್ದ ಕೂಟದಲ್ಲಿ ಮಲೇಷ್ಯಾ ಪ್ರಶಸ್ತಿ ಗೆದ್ದು ಬೀಗಿತ್ತು. ಮುಂದಿನ ಬಾರಿಯೂ ಇದೇ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ ನಂತರ ಥಾಯ್ಲೆಂಡ್‌ ಪಾರಮ್ಯ ಮೆರೆಯಿತು. ನಿರಂತರ ಎಂಟು ಬಾರಿ ಚಿನ್ನ ಗೆದ್ದ ಸಾಧನೆ ಮಾಡಿತು. ಈ ಬಾರಿಯೂ ಫೈನಲ್‌ನಲ್ಲಿ ಮಲೇಷ್ಯಾವನ್ನು ಮಣಿಸಿ ಪ್ರಶಸ್ತಿ ಉಳಿಸಿಕೊಂಡಿದೆ.

ಭಾರತ ಸೆಮಿಫೈನಲ್‌ ಒಳಗೊಂಡಂತೆ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದು ಒಂದರಲ್ಲಿ ಜಯ ಗಳಿಸಿದೆ. ಮಹಿಳೆಯರ ತಂಡದವರು ಆಡಿದ ಎರಡೂ ಪಂದ್ಯಗಳನ್ನು ಸೋತು ಪ್ರಾಥಮಿಕ ಹಂತದಿಂದಲೇ ಹೊರಬಿದ್ದಿದ್ದರು.

ಥಾಯ್ಲೆಂಡ್‌ನಲ್ಲಿ ಅಭ್ಯಾಸ
2006ರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಸೆಪಕ್‌ ಟಕ್ರಾ ತಂಡ ಈ ಬಾರಿ ಥಾಯ್ಲೆಂಡ್‌ನಲ್ಲಿ ಎರಡು ತಿಂಗಳು ಕಠಿಣ ಅಭ್ಯಾಸ ನಡೆಸಿತ್ತು. ಈಶಾನ್ಯ ರಾಜ್ಯಗಳ ಆಟಗಾರರೇ ಹೆಚ್ಚು ಇರುವ ತಂಡ ಅಚ್ಚರಿಯ ಫಲಿತಾಂಶದೊಂದಿಗೆ ದೇಶದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಹೊಸ ಆಯಾಮ ಸಿಗುವ ಭರವಸೆ ಮೂಡಿಸಿದ್ದಾರೆ.

ಭಾರತದಲ್ಲಿ ಸೆಪಕ್ ಟಕ್ರಾ
ಈಶಾನ್ಯ ರಾಜ್ಯಗಳಲ್ಲಿ ಹಾಗೇ ಸುಮ್ಮನೆ ಆಡುತ್ತಿದ್ದ ಈ ಕ್ರೀಡೆಗೆ ಸಾಂಸ್ಥಿಕ ಚೌಕಟ್ಟು ಹಾಕಿದ್ದು 1982ರಲ್ಲಿ. ಆ ವರ್ಷ ಏಷ್ಯನ್ ಕ್ರೀಡಾಕೂಟದಲ್ಲಿ ನಡೆದ ಪ್ರದರ್ಶನ ಕಂಡ ಕೆಲವರು ಭಾರತ ಸೆಪಕ್ ಟಕ್ರಾ ಫೆಡರೇಷನ್ ಸ್ಥಾಪಿಸಿದರು. ಇದರ ಕೇಂದ್ರ ಕಚೇರಿ ಮಹಾರಾಷ್ಟ್ರದ ನಾಗಪುರದಲ್ಲಿದೆ. ರಾಷ್ಟ್ರಮಟ್ಟದಲ್ಲಿ 14 ಸೀನಿಯರ್‌, ಏಳು ಜೂನಿಯರ್‌ ಮತ್ತು ಆರು ಸಬ್‌ ಜೂನಿಯರ್ ವಿಭಾಗಗಳ ಚಾಂಪಿಯನ್‌ಷಿಪ್ ಈವರೆಗೆ ನಡೆದಿದ್ದು ವಲಯ ಮಟ್ಟದ ಮತ್ತು ಫೆಡರೇಷನ್‌ ಕಪ್‌ ಟೂರ್ನಿಗಳೂ ಆಗಾಗ ನಡೆಯುತ್ತಿವೆ. 28 ರಾಜ್ಯಗಳು ಮತ್ತು ಗಡಿರಕ್ಷಣಾ ಪಡೆಯ ತಂಡ ಫೆಡರೇಷನ್‌ನಲ್ಲಿ ಇವೆ.

ಕರ್ನಾಟಕದಲ್ಲಿ ಭರವಸೆಯ ಓಟ
ಬಾಗಲಕೋಟೆ ಜಿಲ್ಲೆಯ ಮುಧೋಳದ ಎಚ್‌.ಬಿ.ಹಳ್ಳದ (ದಿವಂಗತ), ಧಾರವಾಡ ಜಿಲ್ಲೆ ಅಣ್ಣಿಗೇರಿಯ ಆರ್‌.ಎ.ದೇಸಾಯಿ ಮತ್ತು ಗದಗ ಜಿಲ್ಲೆ ಲಕ್ಷ್ಮೇಶ್ವರದ ಎನ್‌.ಎಸ್.ಪಾಟೀಲ ಅವರು ಕರ್ನಾಟಕದಲ್ಲಿ ಸೆಪಕ್ ಟಕ್ರಾ ಆರಂಭವಾಗಲು ಪ್ರಮುಖ ಕಾರಣರು.

ಹಳ್ಳದ ಮತ್ತು ಪಾಟೀಲರು ಕ್ರಮವಾಗಿ ಅಟ್ಯಾ ಪಾಟ್ಯ ಮತ್ತು ಮಲ್ಲಕಂಬದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಜೊತೆಗೆ ಸೆಪಕ್‌ ಟಕ್ರಾ ಕೂಡ ಅವರ ಆಸಕ್ತಿಯ ವಿಷಯವಾಗಿತ್ತು. ದೇಸಾಯಿ ಅವರು ಪೂರ್ಣವಾಗಿ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡರು.

1990ರ ಅವಧಿಯಲ್ಲಿ ರಾಜ್ಯದಲ್ಲಿ ಸೆಪಕ್‌ ಟಕ್ರಾ ಸಂಘವನ್ನು ಸ್ಥಾಪಿಸಲಾಯಿತು. ಚಂದರಗಿ ಕ್ರೀಡಾ ಶಾಲೆ, ಭದ್ರಾವತಿ, ಹುಬ್ಬಳ್ಳಿ–ಧಾರವಾಡ, ದಾವಣಗೆರೆ ಮತ್ತು ಅಣ್ಣಿಗೇರಿಯಲ್ಲಿ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡವರು ಧಾರಾಳ ಇದ್ದಾರೆ. ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಇನ್ನೂ ಇದು ಕಾಲಿಟ್ಟಿಲ್ಲ.

*
ಕರ್ನಾಟಕದಲ್ಲಿ ಸೆಪಕ್‌ ಟಾಕ್ರವನ್ನು ಬೆಳೆಸಲು ಭಾರಿ ಶ್ರಮ ನಡೆಯುತ್ತಿದೆ. ರಾಜ್ಯ ಮತ್ತು ನಮ್ಮ ದೇಶದ ಆಟಗಾರರಿಗೆ ಮಲೇಷ್ಯಾ, ಮ್ಯಾನ್ಮಾರ್‌, ಥಾಯ್ಲೆಂಡ್‌ ಮುಂತಾದ ದೇಶಗಳ ಕ್ರೀಡಾಪಟುಗಳಷ್ಟು ಬೇಗ ಈ ಆಟ ಒಗ್ಗುವುದಿಲ್ಲ. ಕರ್ನಾಟಕದ ಆಟಗಾರರು ಇನ್ನೂ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಲಿಲ್ಲ. ಹೀಗಾಗಿ ಈ ಕ್ರೀಡೆಯನ್ನು ಇನ್ನಷ್ಟು ಬೆಳೆಸಬೇಕಾದ ಅಗತ್ಯವಿದೆ.
–ಆರ್‌.ಎ.ದೇಸಾಯಿ, ರಾಜ್ಯ ಸೆಪಕ್ ಟಾಕ್ರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT