ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈವಿಂಗ್‌ನಲ್ಲಿ ಚಿನ್ನ ಗೆದ್ದ ರಮಾನಂದ

ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌: ಸಿದ್ದಾರ್ಥ್‌ಗೆ ಕಂಚು
Last Updated 29 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ರಮಾನಂದ ಶರ್ಮಾ ಅವರು ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಭಾರತದ ಖಾತೆಗೆ ಚಿನ್ನದ ಪದಕ ಸೇರ್ಪಡೆ ಮಾಡಿದರು.

ಭಾರತೀಯ ಕ್ರೀಡಾ ‍ಪ್ರಾಧಿಕಾರದ (ಸಾಯ್‌) ಈಜು ಕೇಂದ್ರದಲ್ಲಿ ನಡೆದ ಪುರುಷರ 1 ಮೀಟರ್ ಸ್ಪ್ರಿಂಗ್‌ ಬೋರ್ಡ್‌ ಸ್ಪರ್ಧೆಯಲ್ಲಿ ರಮಾನಂದ ಚಿನ್ನದ ಸಾಧನೆ ಮಾಡಿದರು.

ಪುಣೆಯ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿರುವ 21ರ ಹರೆಯದ ರಮಾನಂದ ಫೈನಲ್‌ನಲ್ಲಿ ಒಟ್ಟು 300.80 ಪಾಯಿಂಟ್ಸ್‌ ಕಲೆಹಾಕಿದರು.

ಭಾರತದವರೇ ಆದ ಸಿದ್ದಾರ್ಥ್‌ ಪ್ರದೇಶಿ ಅವರು ಕಂಚಿನ ಪದಕ ಪಡೆದರು. ಅವರು ಒಟ್ಟು 272.25 ಪಾಯಿಂಟ್ಸ್‌ ಗಳಿಸಿದರು. ಇರಾನ್‌ನ ವಲಿಪೌರ್‌ ಮೊಜತಾಬಾ ಅವರು ಈ ವಿಭಾಗದ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.

‘ತವರಿನ ಈಜು ಪ್ರಿಯರ ಎದುರು ಶ್ರೇಷ್ಠ ಸಾಮರ್ಥ್ಯ ತೋರಿ ಚಿನ್ನದ ಪದಕ ಗೆದ್ದಿದ್ದರಿಂದ ಅತೀವ ಖುಷಿಯಾಗಿದೆ. ಈ ಸಾಧನೆಯ ಶ್ರೇಯ ಕ್ಯೂಬಾದ ಕೋಚ್‌ ಸಲಜಾರ್‌ ಡೆಸಪೇಯಿಗ್ನೆ ಅವರಿಗೆ ಸಲ್ಲಬೇಕು. ಚಾಂಪಿಯನ್‌ಷಿಪ್‌ಗೂ ಮುನ್ನ ಅವರು ನಮಗೆ ವಿಶೇಷ ತರಬೇತಿ ನೀಡಿದ್ದರು. ಜೊತೆಗೆ ವಿನೂತನ ಕೌಶಲಗಳನ್ನು ಹೇಳಿಕೊಟ್ಟಿದ್ದರು’ ಎಂದು ರಮಾನಂದ ತಿಳಿಸಿದರು.

ಹಿಂದಿನ ಆವೃತ್ತಿಯಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ರಮಾನಂದ ಅವರು ತಲಾ ಒಂದು ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಜಯಿಸಿದ್ದರು.

ಪುರುಷರ 3 ಮೀಟರ್ಸ್‌ ಸಿಂಕ್ರೊನೈಸ್ಡ್‌ ಡೈವಿಂಗ್‌ನಲ್ಲಿ (ಗುಂಪು ‘ಎ’ ಮತ್ತು ‘ಬಿ’ ಸೇರಿ) ಸತೀಶ್‌ ಕುಮಾರ್‌ ಪ್ರಜಾಪತಿ ಮತ್ತು ಎನ್‌.ವಿಲ್ಸನ್‌ ಸಿಂಗ್‌ ಅವರು ಭಾರತಕ್ಕೆ ಬೆಳ್ಳಿಯ ಪದಕ ಗೆದ್ದುಕೊಟ್ಟರು. ಈ ಜೋಡಿ ಒಟ್ಟು 217.26 ಸ್ಕೋರ್‌ ಕಲೆಹಾಕಿತು.

ಚೀನಾದ ಯಾಂಗ್‌ ಲಿಂಗ್‌ ಮತ್ತು ಜು ಯೊಂಗ್‌ಕ್ಸಿನ್‌ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಥಾಯ್ಲೆಂಡ್‌ನ ತಿಟಿಪೂಮ್‌ ಮಸ್ಕಿನ್‌ ಮತ್ತು ಕೊನ್ರಾಡ್‌ ಯೋಸೆಫ್‌ ಅವರು ಕಂಚಿನ ಪದಕ ಜಯಿಸಿದರು.

ಬಾಲಕಿಯರ ‘ಸಿ’ ಗುಂಪಿನ 1 ಮೀಟರ್‌ ಸ್ಪ್ರಿಂಗ್‌ಬೋರ್ಡ್‌ ಸ್ಪರ್ಧೆಯಲ್ಲಿ ಭಾರತದ ಪಲಕ್‌ ಶರ್ಮಾ ಬೆಳ್ಳಿಯ ಪದಕ ಜಯಿಸಿದರು. ಅವರು ಒಟ್ಟು 186.70 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು. ಇಂಡೊನೇಷ್ಯಾದ ಸುದೀರ್‌ಮನ್‌ ನೂರ್‌ ನುಫಿದಾಹ್‌ ಮತ್ತು ಹಾಂಗ್‌ಕಾಂಗ್‌ನ ವಾಯಿ ಕಿ ಚಾನ್‌ ಅವರು ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಪಡೆದರು.

ಬಾಲಕರ ‘ಸಿ’ ಗುಂಪಿನ 1 ಮೀಟರ್‌ ಸ್ಪ್ರಿಂಗ್‌ಬೋರ್ಡ್‌ ಸ್ಪರ್ಧೆಯಲ್ಲಿ ಭಾರತದ ಇನ್ವಿಡರ್‌ ಸಾಯಿರಾಮ್‌, ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಅವರು ಒಟ್ಟು 269.45 ಪಾಯಿಂಟ್ಸ್‌ ಗಳಿಸಿದರು.

ಜಪಾನ್‌ನ ಸುಗಿಮೊಟೊ ರುಯೊನ್‌ (274.65 ಪಾ.) ಮತ್ತು ಇರಾನ್‌ನ ಜೆಮ್‌ಶಿದಿ ಮೊಹಮ್ಮದ್‌ (232.70 ಪಾ.) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT