ಪ್ಯಾರಿಸ್: ಅಮೆರಿಕದ ನೋವಾ ಲೈಲ್ಸ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನ ವೇಗದ ಓಟಗಾರ ಎನಿಸಿದ್ದಾರೆ. ಅವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ ಲೈಲ್ಸ್, 9.784 ಸೆಕೆಂಡುಗಳಲ್ಲಿ ಗುರಿ ತಲುಪಿದರು. 9.789 ಸೆಕೆಂಡ್‌ಗಳಲ್ಲಿ ಕ್ರಮಿಸಿದ ಜೈಮಕಾದ ಕಿಶಾನೆ ಥಾಮ್ಸನ್ ಹಾಗೂ 9.81 ಸೆಕೆಂಡ್ ಗುರಿ ಮುಟ್ಟಿದ ಅಮೆರಿಕದ ಕೆರ್ಲೀ ಫ್ರೆಡ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.
ಕಣದಲ್ಲಿದ್ದ ಎಂಟೂ ಸ್ಪರ್ಧಿಗಳು 10 ಸೆಕೆಂಡ್ ಒಳಗೆ ಗುರಿ ಮುಟ್ಟಿದ್ದು ವಿಶೇಷವಾಗಿತ್ತು.
ಸೆಮಿಫೈನಲ್ ವೇಳೆ ಲೈಲ್ಸ್ 9.83 ಸೆಕೆಂಡುಗಳಲ್ಲಿ ಓಟ ಪೂರೈಸಿದ್ದರು. ಥಾಮ್ಸನ್ 9.80 ಸೆಕೆಂಡುಗಳಲ್ಲೇ ಗುರಿ ಮುಟ್ಟಿದ್ದರು. ಅಷ್ಟಲ್ಲದೆ, ಕೊನೇ 30 ಮೀಟರ್ ಓಟವನ್ನು ನಿರಾಯಾಸವಾಗಿ ಓಡಿದ್ದರು. ಹೀಗಾಗಿ ಅವರೇ ಬಂಗಾರ ಗೆಲ್ಲುವ ಫೇವರಿಟ್ ಆಗಿದ್ದರು.
ಆದರೆ, ಅಂತಿಮ ಸುತ್ತಿನಲ್ಲಿ ಲೈಲ್ಸ್ ಮೇಲುಗೈ ಸಾಧಿಸಿದರು.