ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಆಡಳಿತ ನಿರ್ವಹಿಸಲು ಭಾರತ ಒಲಿಂಪಿಕ್ ಸಂಸ್ಥೆಯ ಅಡ್‌ಹಾಕ್ ಸಮಿತಿಯನ್ನು ಮರುನೇಮಕ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ. ಸದ್ಯ ಅಧಿಕಾರದಲ್ಲಿರುವ ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ಒಲಿಂಪಿಯನ್ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವ್ರತ ಕಡಿಯಾನ್ ಅವರು ಐಒಎ ಅಡ್‌ಹಾಕ್ ಸಮಿತಿಯನ್ನು ಮರುನೇಮಕ ಮಾಡಬೇಕೆಂದು ಸಲ್ಲಿಸಿದ್ದ ಮನವಿಯ ವಿಚಾರಣೆಯ ನಂತರ ಹೈಕೋರ್ಟ್ ಈ ಅದೇಶ ನೀಡಿದೆ.
ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಕುಸ್ತಿ ಫೆಡರೇಷನ್‌ಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಬೇಕೆಂಬ ಅರ್ಜಿದಾರರ ಕೋರಿಕೆಯನ್ನು ನ್ಯಾ.ಸಚಿನ್ ದತ್ತಾ ಅವರು ತಳ್ಳಿಹಾಕಿದರು. ಅಡ್‌ಹಾಕ್ ಸಮಿತಿಯ ಪುನಾರಚನೆಗೆ ಸಂಬಂಧಿಸಿ ತೀರ್ಮಾನ ಕೈಗೊಳ್ಳಲು ಐಒಎ ಮುಕ್ತವಾಗಿದೆ ಎಂದು ಹೇಳಿದರು.
ಆದರೆ ಈ ಆದೇಶದಿಂದ ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ದೇಶದ ಕುಸ್ತಿಪಟುಗಳು ಭಾಗವಹಿಸಲು ತೊಡಕಾಗಲಿದೆ ಎಂದು ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.
‘ನಾವು ಈ ಆದೇಶವನ್ನು ದ್ವಿಸದಸ್ಯ ಪೀಠದಲ್ಲಿ ಪ್ರಶ್ನಿಸಲಿದ್ದೇವೆ. ಐಒಎಯು ಅಡ್‌ಹಾಕ್ ಸಮಿತಿಯನ್ನು ವಿಸರ್ಜಿಸಿದೆ. ನಾವು ಅಂತರರಾಷ್ಟ್ರೀಯ ಕುಸ್ತಿ ಸಂಘಟನೆ (ಯುಡಬ್ಲ್ಯುಡಬ್ಲ್ಯು) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗಳೊಂದಿಗೂ ಮಾತನಾಡುತ್ತೇವೆ. ಡಬ್ಲ್ಯುಎಫ್‌ಐ ಆಡಳಿತದಲ್ಲಿ ಬಾಹ್ಯ ವ್ಯಕ್ತಿ ಅಥವಾ ಸಮಿತಿಯ ಹಸ್ತಕ್ಷೇಪದಿಂದ ನಕಾರಾತ್ಮಕ ಪರಿಣಾಮ ಬೀರುವ ಕುರಿತು ಈ ಹಿಂದೆಯೇ ಯುಡಬ್ಲ್ಯುಡಬ್ಲ್ಯು ಎಚ್ಚರಿಕೆ ನೀಡಿದೆ. ಮುಂಬರಲಿರುವ ಎರಡು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗಳಲ್ಲಿ ನಮ್ಮ ಕುಸ್ತಿಪಟುಗಳಿಗೆ ಭಾಗವಹಿಸಲು ಅವಕಾಶ ಸಿಗದಿರುವ ಸಾಧ್ಯತೆ ಇದೆ’ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಇದೇ ತಿಂಗಳು 19 ರಿಂದ 25ರವರೆಗೆ ಜೋರ್ಡಾನ್‌ನ ಅಮಾನ್‌ನಲ್ಲಿ 17 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್ ಮತ್ತು ಸೆ. 2ರಿಂದ 8ರವರೆಗೆ ಸ್ಪೇನ್‌ನಲ್ಲಿ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್ ನಡೆಯಲಿದೆ.
‘ರಾಷ್ಟ್ರೀಯ ಫೆಡರೇಷನ್‌ನಲ್ಲಿ ಅಡ್ ಹಾಕ್ ಸಮಿತಿಯು ಆಡಳಿತವನ್ನು ತಾವು ಸಮ್ಮತಿಸುವುದಿಲ್ಲ ’ ಎಂದು ಯುಡಬ್ಲ್ಯುಡಬ್ಲ್ಯು ಕಳೆದ ಏಪ್ರಿಲ್ 25ರಂದು ನೀಡಿದ್ದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
‘ನಿಮ್ಮ ಫೆಡರೇಷನ್ ವಿರುದ್ಧ ಯಾವುದೇ ನಿರ್ಣಯ ಅಥವಾ ತೀರ್ಪು ನೀಡಿದರೆ, ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಮೂರನೇ ಪಕ್ಷ ಅಥವಾ ವ್ಯಕ್ತಿಯ ನೇಮಕ ಮಾಡಿದರೆ ಯುಡಬ್ಲ್ಯುಡಬ್ಲ್ಯು ನಿಯಮಕ್ಕೆ ವಿರುದ್ಧವಾಗಲಿದೆ. ಇದರಿಂದಾಗಿ ಫೆಡರೇಷನ್ ಮೇಲೆ ತಾತ್ಕಾಲಿಕ ಅಮಾನತು ಹಾಕುವುದು ಅನಿವಾರ್ಯವಾಗುತ್ತದೆ’ ಎಂದು ಆ ಪತ್ರದಲ್ಲಿ ಯುಡಬ್ಲ್ಯುಡಬ್ಲ್ಯು ಅಧ್ಯಕ್ಷ ಲಾಲೊವಿಕ್ ಉಲ್ಲೇಖಿಸಿದ್ದರು.
ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ದೂರಿ ಹೋದ ವರ್ಷ ಖ್ಯಾತನಾಮ ಕುಸ್ತಿಪಟುಗಳು ದೆಹಲಿಯಲ್ಲಿ ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 2023ರ ಡಿಸೆಂಬರ್ 24ರಂದು ಕೇಂದ್ರ ಸರ್ಕಾರವು ಡಬ್ಲ್ಯುಎಫ್‌ಐ ಸಮಿತಿಯನ್ನು ಅಮಾನತು ಮಾಡಿತ್ತು. ಭಾರತ ಒಲಿಂಪಿಕ್ ಸಮಿತಿ (ಐಒಎ) ಅಡ್‌ಹಾಕ್ ಸಮಿತಿ ನೇಮಕವಾಗಿತ್ತು. ಆಗ ಭೂಪಿಂದರ್ ಸಿಂಗ್ ಬಜ್ವಾ ಅವರು ಈ ಸಮಿತಿಯ ಮುಖ್ಯಸ್ಥರಾಗಿದ್ದರು.
ಆಗ ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್ (ಯುಡಬ್ಲ್ಯುಡಬ್ಲ್ಯು) ಡಬ್ಲ್ಯುಎಫ್‌ಐ ಮೇಲೆ ಅಮಾನತು ಹೇರಿತ್ತು. ಇದೇ ವರ್ಷ ಡಬ್ಲ್ಯುಎಫ್‌ಐ ಚುನಾವಣೆಗಳನ್ನು ನಡೆಸಿ ಸಮಿತಿ ರಚಿಸಲಾಗಿತ್ತು. ಫೆಬ್ರುವರಿ 13ರಂದು ಯುಡಬ್ಲ್ಯುಡಬ್ಲ್ಯು ತನ್ನ ಅಮಾನತು ಆದೇಶವನ್ನು ಹಿಂಪಡೆದಿತ್ತು. ಏಪ್ರಿಲ್ 4ರಂದು ಐಒಎಯು ತನ್ನ ಅಡ್‌ಹಾಕ್ ಸಮಿತಿಯನ್ನು ವಿಸರ್ಜಿಸಿತ್ತು.
ಆದರೆ ಚುನಾಯಿತ ಸಮಿತಿಯ ವಿರುದ್ಧ ಕುಸ್ತಿಪಟುಗಳು ಮನವಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.