ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜೂನಿಯರ್ ಮಹಿಳಾ ಹಾಕಿ: ಭಾರತಕ್ಕೆ ವಿಶ್ವಕಪ್ ಟೂರ್ನಿ ರಹದಾರಿ

ಜೂನಿಯರ್ ಏಷ್ಯಾ ಕಪ್ ಮಹಿಳೆಯರ ಹಾಕಿ: ಸುನಿಲಿತಾ ಗೋಲು ನೆರವಿನಿಂದ ಫೈನಲ್‌ಗೆ ಲಗ್ಗೆ
Published 10 ಜೂನ್ 2023, 12:43 IST
Last Updated 10 ಜೂನ್ 2023, 12:43 IST
ಅಕ್ಷರ ಗಾತ್ರ

ಕಾಕಾಮಿಗಾರಾ, ಜಪಾನ್ (ಪಿಟಿಐ): ಭಾರತದ ಜೂನಿಯರ್ ಮಹಿಳಾ ಹಾಕಿ ತಂಡವು ಇದೇ ವರ್ಷ ನಡೆಯಲಿರುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಗೆ ಅರ್ಹತೆ ಗಳಿಸಿತು.

ಶನಿವಾರ ಇಲ್ಲಿ ನಡೆದ ಜೂನಿಯರ್ ಏಷ್ಯಾ ಕ‍ಪ್ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಸುನಿಲಿತಾ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಜಪಾನ್ ತಂಡವನ್ನು  1–0ಯಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಅದರೊಂದಿಗೆ ವಿಶ್ವಕಪ್ ಟೂರ್ನಿಗೂ ರಹದಾರಿ ಪಡೆಯಿತು. ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಪಡೆದ ತಂಡಗಳಿಗೆ ವಿಶ್ವಕಪ್ ಪ್ರವೇಶಾವಕಾಶ ನಿಗದಿ ಮಾಡಲಾಗಿತ್ತು.

ಇದೇ ವರ್ಷದ ನವೆಂಬರ್ 29 ರಿಂದ ಡಿಸೆಂಬರ್ 10ರವರೆಗೆ ಸ್ಯಾಂಟಿಯಾಗೊದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. 

ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಯ ಸುಲಭವಾಗಿ ಒಲಿಯಲಿಲ್ಲ. ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳೂ ಗೋಲು ಗಳಿಸಲಿಲ್ಲ. 47ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದ ಸುನಿಲಿತಾ ಭಾರತಕ್ಕೆ ಗೆಲುವಿನ ಹಾದಿ ತೋರಿಸಿದರು. ಭಾರತ ತಂಡವು ಆರಂಭದಿಂದಲೇ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತು. ಆಕ್ರಮಣಕಾರಿ ಶೈಲಿಯಲ್ಲಿ ಆಡಿತು. ಆದರೂ ಜಪಾನ್ ತಂಡದ ರಕ್ಷಣಾಪಡೆಯು ದಿಟ್ಟತನ ತೋರಿತು.

ಉಭಯ ತಂಡಗಳಿಗೂ ತಲಾ 12 ಪೆನಾಲ್ಟಿ ಕಾರ್ನರ್‌ಗಳನ್ನು ಗಿಟ್ಟಿಸಿದ್ದವು. ಆದರೆ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.  ಮೊದಲ ಕ್ವಾರ್ಟರ್‌ನ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿಯಿದ್ದಾಗ ಜಪಾನ್ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಭಾರತದ ಮಾಧುರಿ ಕಿಂಡೊ ಎದುರಾಳಿ ಪಡೆಯ ಡ್ರ್ಯಾಗ್‌ಫ್ಲಿಕ್ ತಡೆಯುವಲ್ಲಿ ಯಶಸ್ವಿಯಾದರು. ಎರಡನೇ ಕ್ವಾರ್ಟರ್‌ನಲ್ಲಿಯೂ ಮಾಧುರಿ ಕಿಂಡೊ ಚಾಕಚಕ್ಯತೆ ತೋರಿ, ಜಪಾನ್‌ ತಂಡದ ಪೆನಾಲ್ಟಿ ಕಾರ್ನರ್‌ ದಾಳಿಯನ್ನು ತಡೆದರು.

ಭಾರತಕ್ಕೆ ಲಭಿಸಿದ್ದ ಪೆನಾಲ್ಟಿ ಅವಕಾಶದಲ್ಲಿ ವೈಷ್ಣವಿ ಫಾಲ್ಕೆ ಅವರ ಡ್ರ್ಯಾಗ್‌ಫ್ಲಿಕ್ ಅನ್ನು ಜಪಾನ್ ಗೋಲ್‌ಕೀಪರ್ ಮಿಸಾಕಿ ಸೈಟೊ ತಡೆಯುವಲ್ಲಿ ಯಶಸ್ವಿಯಾದರು.

ಪ್ರತಿ ಹಂತದಲ್ಲಿಯೂ ಉಭಯ ತಂಡಗಳು ಜಿದ್ದಾಜಿದ್ದಿನಿಂದ ಹೋರಾಟ ನಡೆಸಿದವು. 46 ನಿಮಿಷಗಳ ಈ ತುರುಸಿನ ಹಣಾಹಣಿಯಲ್ಲಿ ಮೇಲುಗೈ ಸಾಧಿಸಲು ಮಹಿಮಾ ಟೆಟೆ ಹಾಗೂ ಜ್ಯೋತಿ ಛಾತ್ರಿ  ನೆರವಾದರು. ಅವರ ಮೂಲಕ ಪಾಸ್‌ ಪಡೆದ ಸುನಿಲಿತಾ ಗೋಲು ಗಳಿಸಿದರು. ಇದರಿಂದಾಗಿ ಭಾರತದ ಪಾಳೆಯದಲ್ಲಿ ಆತ್ಮವಿಶ್ವಾಸ ಇಮ್ಮಡಿಸಿತು. ರಕ್ಷಣೆ ಮತ್ತು ದಾಳಿ ಎರಡರಲ್ಲೂ ಚುರುಕುತನ ತೋರಿದರು. ಜಪಾನ್ ತಂಡಕ್ಕೆ ಯಾವುದೇ ಹಂತದಲ್ಲಿಯೂ ಗೋಲು ಗಳಿಸಲು ಅವಕಾಶ ನೀಡದೇ ಮುನ್ನಡೆ ಕಾಪಾಡಿಕೊಂಡರು.

ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT