ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಗೇಮ್ಸ್‌ | ವಿನೇಶಾಗೆ ಮಂಡಿ ಗಾಯ: ಹಿಂದೆ ಸರಿದ ಕುಸ್ತಿಪಟು

Published 15 ಆಗಸ್ಟ್ 2023, 10:53 IST
Last Updated 15 ಆಗಸ್ಟ್ 2023, 10:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕುಸ್ತಿಪಟು ವಿನೇಶಾ ಫೋಗಟ್ ಅವರು ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

‘ಮೊಣಕಾಲಿಗೆ ಗಾಯವಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಿಲ್ಲ‘ ಎಂದು ವಿನೇಶಾ ಮಂಗಳವಾರ ಹೇಳಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿನೇಶಾ ಮತ್ತು ಬಜರಂಗ್ ಪೂನಿಯಾ ಅವರಿಗೆ ನೇರಪ್ರವೇಶ ನೀಡಲಾಗಿತ್ತು. ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಡ್‌ಹಾಕ್ ಸಮಿತಿಯ ತೀರ್ಮಾನವು ಟೀಕೆಗೊಳಗಾಗಿತ್ತು. ಈ ನಿರ್ಧಾರಕ್ಕೆ ಆಕ್ಷೇಪಿಸಿದ್ದ ಯುವ ಕುಸ್ತಿಪಟು ಅಂತಿಮ ಪಂಘಾಲ್ ಅವರು ದೂರು ಕೂಡ ನೀಡಿದ್ದರು. ಇದೀಗ ವಿನೇಶಾ ಅವರು ಹಿಂದೆ ಸರಿದಿರುವುದರಿಂದ ಅಂತಿಮ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

‘ದುಃಖಕರ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಆಗಸ್ಟ್ 13ರಂದು ತಾಲೀಮು ನಡೆಸಿದ ಸಂದರ್ಭದಲ್ಲಿ ನನ್ನ ಎಡ ಮೊಣಕಾಲಿಗೆ ಗಾಯವಾಯಿತು. ಸ್ಕ್ಯಾನಿಂಗ್ ಆದ ನಂತರ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಾಯದಿಂದ ಗುಣಮುಖವಾಗಲು ಶಸ್ತ್ರಚಿಕಿತ್ಸೆಯೊಂದೇ ನನ್ನ ಮುಂದಿರುವ ದಾರಿ. ಇದು ದುರದೃಷ್ಟಕರ‘ ಎಂದು ವಿನೇಶಾ  ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಬರೆದಿದ್ದಾರೆ.

‘ಇದೇ 17ರಂದು ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದೆ. ಅದನ್ನು ಈ ಕ್ರೀಡಾಕೂಟದಲ್ಲಿಯೂ ಉಳಿಸಿಕೊಳ್ಳುವ ಛಲವಿತ್ತು. ಆದರೆ ಗಾಯದಿಂದಾಗಿ ಆ ಕನಸು ಕೈಗೂಡುವುದಿಲ್ಲ‘ ಎಂದೂ ವಿನೇಶಾ ಬೇಸರವ್ಯಕ್ತಪಡಿಸಿದ್ದಾರೆ.

 ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ತಿಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಅಂತಿಮ ಪಂಘಾಲ್ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ ಆಗಿದ್ದಾರೆ. ಹೋದ ಶನಿವಾರ ನಡೆದ ಟ್ರಯಲ್ಸ್‌ನಲ್ಲಯೂ ಅವರು ಗೆದ್ದಿದ್ದಾರೆ. ಆದ್ದರಿಂದ ತಂಡದಲ್ಲಿ ಅವರನ್ನು ಮೀಸಲು ಆಟಗಾರ್ತಿಯಾಗಿ ನೇಮಕ ಮಾಡಲಾಗಿತ್ತು.

‘ನನ್ನ ಎಲ್ಲ ಅಭಿಮಾನಿಗಳು ಮತ್ತು ಹಿತಚಿಂತಕರು ತಮ್ಮ ಬೆಂಬಲವನ್ನು ಹೀಗೆಯೇ ಮುಂದುವರಿಸಬೇಕು ಎಂದು ಕೋರುತ್ತೇನೆ. ನಾನು ಮತ್ತೆ ಸದೃಢಳಾಗಿ ಕಣಕ್ಕೆ ಮರಳುವೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವೆ‘ ಎಂದೂ ವಿನೇಶಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT