ಶನಿವಾರ, ಜೂನ್ 6, 2020
27 °C
ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾರೊಂದಿಗೆ ಮಾತುಕತೆ

ಲಾಕ್‌ಡೌನ್‌ನಲ್ಲಿ ಲೆಗ್‌ಸ್ಪಿನ್ ಧ್ಯಾನ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

‘ನನ್ನ ಜೀವನದಲ್ಲಿ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ಸಂಘರ್ಷಮಯ ಜೀವನ ನನ್ನದು. ಈ 20 ವರ್ಷಗಳ ವೃತ್ತಿಜೀವನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿಲ್ಲ. ಸಾಧಿಸಬೇಕಿರುವುದು ಇನ್ನೂ ಬಹಳಷ್ಟಿದೆ. ಯಾವುದೇ ಸಂದರ್ಭದಲ್ಲಿ ಭಾರತ ತಂಡದ ಬುಲಾವ್ ಬಂದರೂ ನಾನು ಸಿದ್ಧನಾಗಿದ್ದೇನೆ. ಗಾಯದ ಸಮಸ್ಯೆಯನ್ನು ಗೆದ್ದಿದ್ದೇನೆ.  ಭವಿಷ್ಯದ ಪೈಪೋಟಿಗೂ ಸಿದ್ಧವಾಗಿದ್ದೇನೆ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ’

ಭಾರತ ತಂಡದಲ್ಲಿ ಅನಿಲ್ ಕುಂಬ್ಳೆಯವರ ನಿವೃತ್ತಿಯ ನಂತರ ಲೆಗ್‌ಸ್ಪಿನ್ನರ್ ಕೊರಗನ್ನು ಬಹುಮಟ್ಟಿಗೆ ನೀಗಿಸಿದ್ದ ಹರಿಯಾಣದ ಅಮಿತ್ ಮಿಶ್ರಾ ಅವರ ಆತ್ಮವಿಶ್ವಾಸದ  ನುಡಿಗಳಿವು. 2000ನೇ ಇಸವಿಯಲ್ಲಿ ಹರಿಯಾಣ ತಂಡದಲ್ಲಿ ರಣಜಿ ಕ್ರಿಕೆಟ್‌ಗೆ ಅಮಿತ್ ಪದಾರ್ಪಣೆ ಮಾಡಿದ್ದರು. 2003ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮತ್ತು 2008ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.  ವಿಶ್ವಶ್ರೇಷ್ಠ ಸ್ಪಿನ್ನರ್‌ ಅನಿಲ್ ಕುಂಬ್ಳೆ ಅವರ  ‘ಉತ್ತರಾಧಿಕಾರಿ’ಯಾಗಿ ಭರವಸೆ ಮೂಡಿಸಿದವರು. ಗಾಯದ ಸಮಸ್ಯೆಯಿಂದಾಗಿ ವೃತ್ತಿಜೀವನದಲ್ಲಿ ಅಸ್ಥಿರತೆ ಅನುಭವಿಸಿದ್ದಾರೆ. ಸದ್ಯ ಹರಿಯಾಣದಲ್ಲಿ ಲಾಕ್‌ಡೌನ್‌ ನಲ್ಲಿ ಬಡವರು, ದಿನಗೂಲಿ ಕಾರ್ಮಿಕರಿಗೆ ಊಟೋಪಚಾರದ ವ್ಯವಸ್ಥೆಯಲ್ಲಿ ನಿರತರಾಗಿದ್ದಾರೆ.  ವೈದ್ಯರಿಗೆ ಪಿಪಿಇ ಕಿಟ್ ಮತ್ತು ಪೊಲೀಸರಿಗೆ ಕೈಗವಸು ಸ್ಯಾನಿಟೈಸರ್‌ಗಳನ್ನು ಒದಗಿಸಿದ್ದಾರೆ.  ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಈ ನಡುವೆ ಒಂದಿಷ್ಟು ಹೊತ್ತು ಒಂದಷ್ಟು ವಿಷಯಗಳ ಕುರಿತು  37 ವರ್ಷದ ಅಮಿತ್ ‘ಪ್ರಜಾವಾಣಿ’ಯೊಂದಿಗೆ ಫೋನ್‌ನಲ್ಲಿ ಮಾತುಕತೆ ನಡೆಸಿದರು.

* ಲಾಕ್‌ಡೌನ್‌ನಲ್ಲಿ ಸಮಯ ಹೇಗೆ ಕಳೆಯುತ್ತಿದ್ದೀರಿ?

ಎರಡು ದಶಕಗಳ ನಂತರ  ಕುಟುಂಬದೊಂದಿಗೆ ಸಮಯ ಕಳೆಯಲು ಸಿಕ್ಕಿರುವ  ಅವಕಾಶ ಇದು. ಮನೆಯಲ್ಲಿಯೇ ಸಣ್ಣದೊಂದು ಜಿಮ್ಇದೆ. ಟ್ರೆಡ್‌ ಮಿಲ್, ಡಂಬೆಲ್ಸ್ ಮತ್ತು ಓಪನ್ ವ್ಹೇಟ್ಸ್‌ ಇವೆ. ಅದರಲ್ಲಿಯೇ ಕಸರತ್ತು ಮಾಡುತ್ತೇನೆ.

* ಲೆಗ್‌ಸ್ಪಿನ್ ಬೌಲರ್‌ ಮಹತ್ವ ಏನು? ಭಾರತದಲ್ಲಿ ಈ  ಇದರ ಭವಿಷ್ಯವೇನು?

ಕ್ರಿಕೆಟ್‌ನಲ್ಲಿ ಲೆಗ್‌ಸ್ಪಿನ್ನರ್ ಎಂದರೆ ವಿಕೆಟ್‌ ಗಳಿಸುವ ಬೌಲರ್ ಎಂದೇ ಹೇಳಲಾಗುತ್ತದೆ. ಪಂದ್ಯದ ಮಹತ್ವದ ಘಟ್ಟದಲ್ಲಿ ಜೊತೆಯಾಟಗಳನ್ನು ಮುರಿಯಲು ಲೆಗ್‌ಸ್ಪಿನ್ನರ್ ಎಲ್ಲ ಮಾದರಿಗಳಲ್ಲಿಯೂ ಬೇಕು.  ಸದ್ಯ ಇರುವ ಯುವ ಕ್ರಿಕೆಟ್‌ ಸಮೂಹದಲ್ಲಿ ಬಹಳಷ್ಟು ಪ್ರತಿಭಾವಂತ ಲೆಗ್‌ಸ್ಪಿನ್ನರ್‌ಗಳಿದ್ದಾರೆ. ಅವರನ್ನು ಗುರುತಿಸಿ ತರಬೇತಿ ನೀಡುವ ಕೆಲಸ ಆಗಬೇಕು.

* ಟಿ20 ಮಾದರಿಯಲ್ಲಿ ಲೆಗ್‌ಸ್ಪಿನ್ ಗೆ ಇರುವ ಸವಾಲುಗಳೇನು?

 ಏಕದಿನ, ಟೆಸ್ಟ್‌ನಲ್ಲಿ ಬೌಲರ್‌ಗೆ ಚೇತರಿಸಿಕೊಳ್ಳಲು ಅವಕಾಶ ಇರುತ್ತದೆ. ಆದರೆ ಈ ಮಾದರಿಯಲ್ಲಿ ನಾಲ್ಕು ಓವರ್‌ಗಳಲ್ಲಿ ಮಾಡುವುದನ್ನು ಮಾಡಿಬಿಡಬೇಕು. ಒಂದು ಓವರ್ ದುಬಾರಿಯಾದರೆ ಅದನ್ನು ನಂತರ ಸರಿದೂಗಿಸಿಕೊಳ್ಳುವ ಅವಕಾಶವೇ ಇಲ್ಲ. ಬ್ಯಾಟ್ಸ್‌ಮನ್ ಯಾವ ಎಸೆತಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆಂಬುದನ್ನು ಅಂದಾಜಿಸಿ ಆಡಬೇಕು.

* ಯುವರಾಜ್ ಸಿಂಗ್ ಈಚೆಗೆ ಹೇಳಿದಂತೆ ಭಾರತದಲ್ಲಿ ರೋಲ್‌ ಮಾಡೆಲ್‌ಗಳ ಕೊರತೆ ಇದೆಯೇ?

ಅವರು (ಯುವಿ) ಬಹಳ ವರ್ಷ ಭಾರತ ತಂಡದಲ್ಲಿ ಆಡಿದ್ದಾರೆ. ಅವರ ಅನುಭವಕ್ಕೆ ಬಂದಿರುವುದನ್ನು ಹೇಳಿದ್ದಾರೆ. ಈಗಿನ ತಂಡದಲ್ಲಿರುವ ಹಿರಿಯರು ಮತ್ತು ಆಡಳಿತ ವಿಭಾಗವು ಜೂನಿಯರ್ ಕ್ರಿಕೆಟಿಗರನ್ನು ರೋಲ್‌ ಮಾಡೆಲ್ ಆಗುವಂತೆ ಮಾರ್ಗದರ್ಶನ ಮಾಡುತ್ತಾರೆ ಎನ್ನುವ ಭರವಸೆ ಇದೆ.

* ಕೊರೊನಾ ನಂತರದ ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪಿಗೆ ಎಂಜಲು ಬಳಕೆ ಬೇಕೆ?

ಹಲವಾರು ವರ್ಷಗಳಿಂದ ಎಲ್ಲ ದೇಶಗಳ ಬೌಲರ್‌ಗಳು ಸಲೈವಾ ಬಳಸುತ್ತಿದ್ದಾರೆ. ಇನ್ನು ಮುಂದಿನದ್ದು ಹೇಗೆಂದು ತಿಳಿಯದು ಐಸಿಸಿಯು ರೂಪಿಸುವ ನಿಯಮವನ್ನು ಎಲ್ಲರೂ ಪಾಲಿಸಬೇಕು. ನೋಡೋಣ.

ಅನಿಲ್ ಪ್ರೇರಣೆ..ಹುಬ್ಬಳ್ಳಿ ದ್ವಿಶತಕ

‘ನಮ್ಮ ಅಣ್ಣ ಕ್ರಿಕೆಟಿಗನಾಗಿದ್ದರು. ಮನೆಯ ಸುತ್ತಮುತ್ತ ಕ್ರಿಕೆಟ್ ವಾತಾವರಣವೂ ಇತ್ತು. ಆದ್ದರಿಂದ ಆಟದತ್ತ ಒಲವು ಹೆಚ್ಚಿತು.  ಕಪಿಲ್ ದೇವ್, ಸಚಿನ್ ಮತ್ತು ಸೌರವ್ ಗಂಗೂಲಿ ಅವರ ಆಟ ನೋಡುತ್ತ ಬೆಳೆದೆ. ತುಸು ಕಠಿಣವಾದರೂ ಲೆಗ್‌ಸ್ಪಿನ್ನರ್ ಆಗಲು ಸಂಕಲ್ಪ ಮಾಡಿದೆ. ಅನಿಲ್ ಕುಂಬ್ಳೆ ಮತ್ತು ಶೇನ್ ವಾರ್ನ್ ಅವರ  ಆಟವೇ ಸ್ಫೂರ್ತಿ. ಅದರಲ್ಲೂ ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನ ದೊಡ್ಡದು. 2008ರ ಟೆಸ್ಟ್‌ನಲ್ಲಿ ಅವರು ಗಾಯಗೊಂಡಿದ್ದರು. ಅವರ ಬದಲಿಗೆ ನಾನು ಕಣಕ್ಕಿಳಿದೆ. ಐದು ವಿಕೆಟ್ ಗಳಿಸಿದೆ. ಪಂದ್ಯಶ್ರೇಷ್ಟನೂ ಆದೆ. ಆಗ ಅವರು ನನ್ನನ್ನು ಬೆಂಬಲಿಸಿ, ಮಾರ್ಗದರ್ಶನ ನೀಡಿದ ರೀತಿ ಅನನ್ಯ’ ಎಂದು ಅಮಿತ್ ಮಿಶ್ರಾ ಸ್ಮರಿಸುತ್ತಾರೆ.

ಈ  ಸಂದರ್ಭದಲ್ಲಿ 2012–13ರ ರಣಜಿ  ಋತುವಿನ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಹೊಡೆದ ದ್ವಿಶತಕವನ್ನೂ ಅಮಿತ್ ನೆನಪಿಸಿಕೊಂಡರು.

‘ಅದೊಂದು ಅವಿಸ್ಮರಣೀಯ ಇನಿಂಗ್ಸ್‌. ನಾನು ದ್ವಿಶತಕ ಹೊಡೆದಿದ್ದು, ಹುಬ್ಬಳ್ಳಿಯಲ್ಲಿ ಆ ಪಂದ್ಯ ನಡೆದಿತ್ತು. ಜಯಂತ್ ಯಾದವ್ ಜೊತೆಗೆ ದೊಡ್ಡ ಇನಿಂಗ್ಸ್ ಆಡಿದ್ದು ಮರೆಯಲು ಸಾಧ್ಯವೇ ಇಲ್ಲ’ ಎಂದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು