ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ವಯಸ್ಸು: ಸಿಕ್ಕಿಹಾಕಿಕೊಂಡ 51 ಮಂದಿ

Last Updated 20 ಡಿಸೆಂಬರ್ 2019, 19:43 IST
ಅಕ್ಷರ ಗಾತ್ರ

ನವದೆಹಲಿ : ಅಥ್ಲೆಟಿಕ್ಸ್‌ನಲ್ಲಿ ವಯಸ್ಸನ್ನು ಮರೆಮಾಚುವ ಚಾಳಿ ಎಗ್ಗಿಲ್ಲದೇ ಮುಂದುವರಿದಿದೆ. ಕಳೆದ ತಿಂಗಳು ತಿರುಪತಿಯಲ್ಲಿ ನಡೆದ ರಾಷ್ಟ್ರೀಯ ಅಂತರ ಜಿಲ್ಲಾ ಜೂನಿಯರ್‌ ಅಥ್ಲೆಟಿಕ್‌ ಕೂಟದಲ್ಲಿ 51 ಮಂದಿ ವಯಸ್ಸಿನ ಪರೀಕ್ಷೆ ವೇಳೆ ಸಿಕ್ಕಿಬಿದ್ದಿದ್ದಾರೆ. ಇನ್ನು, 124 ಮಂದಿ ಪರೀಕ್ಷೆಗೆ ಮೊದಲೇ ಕಾಲ್ಕಿತ್ತಿದ್ದಾರೆ!

ಅತಿ ದೊಡ್ಡ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ಎಂಬ ಹಿರಿಮೆಗೆ ಪಾತ್ರವಾಗಿದ್ದ ಈ ಕೂಟದಲ್ಲಿ ದೇಶದ 494 ಜಿಲ್ಲೆಗಳಿಂದ 4,500 ಮಂದಿ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ನವೆಂಬರ್‌ 24 ರಿಂದ 26ರವರೆಗೆ ಈ ಕೂಟ ನಡೆದಿತ್ತು.

ದಂತ ಪರೀಕ್ಷೆ ಮತ್ತು ‘ಟ್ಯಾನರ್‌ ವೈಟ್‌ಹೌಸ್‌ 3’ (ಟಿಡಬ್ಲ್ಯು 3, ಮೂಳೆಯ ಬೆಳವಣಿಗೆ ಮೂಲಕ) ವಯಸ್ಸನ್ನು ಪತ್ತೆ ಹಚ್ಚುವ ಪರೀಕ್ಷೆಯಲ್ಲಿ 51 ಮಂದಿ ವಯಸ್ಸು ಮೀರಿದ್ದು ಪತ್ತೆಯಾಗಿದೆ ಎಂದು ಅಥ್ಲೆಟಿಕ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಎಫ್‌ಐ) ಪ್ರಕಟಿಸಿದೆ. ಈ ಕೂಟದಲ್ಲಿ ಭಾಗವಹಿಸುವುದಾಗಿ ಪ್ರವೇಶ ಸಲ್ಲಿಸಿದ್ದ 124 ಮಂದಿ ಎಎಫ್‌ಐ ವೈದ್ಯಕೀಯ ಪರೀಕ್ಷೆ ಕೌಂಟರ್‌ ಕಡೆ ಸುಳಿಯಲೇ ಇಲ್ಲ.

ಇನ್ನು, ದಂತಪರೀಕ್ಷೆಗೆ ಹಾಜರಾಗಿದ್ದ 65 ಮಂದಿ ಅಥ್ಲೀಟುಗಳು ವಯಸ್ಸನ್ನು ದೃಢಪಡಿಸುವ ಮೂಳೆ ಪರೀಕ್ಷೆಯನ್ನು ತಪ್ಪಿಸಿಕೊಂಡರು.

‘ಮೊದಲು ನಾವು ದಂತ ಪರೀಕ್ಷೆಗೆ ಅಥ್ಲೀಟುಗಳನ್ನು ಆಹ್ವಾನಿಸಿದ್ದೆವು. ಅಲ್ಲಿ ಹಲ್ಲುಗಳ ಎಣಿಕೆ ಮಾಡಿ ವಯಸ್ಸು ಲೆಕ್ಕ ಹಾಕಲಾಗುತ್ತದೆ. ಸರಿಯಾದ ಫಲಿತಾಂಶ ಸಿಗದ ಕಾರಣ ನಿಖರವಾದ ವಯಸ್ಸು ತಿಳಿಯಲು ‘ಟಿಡಬ್ಲ್ಯು 3’ ಪರೀಕ್ಷೆ ನಡೆಸಲಾಯಿತು. (ಈ ವಿಧಾನದಲ್ಲಿ ವಯಸ್ಸು ತಿಳಿಯಲು ಎಡ ಅಂಗೈ, ಮಣಿಕಟ್ಟು, ಮೊಣಕೈ ಹಿಂಭಾಗದ ಎಕ್ಸ್‌ರೇ ಪಡೆಯಲಾಗುತ್ತದೆ)’ ಎಂದು ಅಥ್ಲೀಟುಗಳ ವಯಸ್ಸಿನ ದೃಢೀಕರಣ ವಿಭಾಗದ ಮೇಲ್ವಿಚಾರಕ ರಾಜೀವ್‌ ಖತ್ರಿ ಹೇಳಿದರು.

‘ಓವರ್ ಏಜ್‌’ ಅಥ್ಲೀಟುಗಳಲ್ಲಿ ಹೆಚ್ಚಿನವರು (15 ಮಂದಿ) ರಾಜಸ್ಥಾನದವರು. ಉತ್ತರ ಪ್ರದೇಶ (10 ಮಂದಿ) ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಕೂಟಗಳಲ್ಲಿ ಒಂದೇ ರಾಜ್ಯದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಥ್ಲೀಟುಗಳು ವಯಸ್ಸನ್ನು ಮರೆಮಾಚುವ ದೃಢೀಕರಣ ಪತ್ರ ನೀಡಿದರೆ, ಆ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಕಾರ್ಯದರ್ಶಿಯನ್ನು ಅಮಾನತು ಮಾಡಲು ಅವಕಾಶವಿದೆ. ಈ ವರ್ಷದ ಆರಂಭದಲ್ಲಿ ಆಗ್ರಾದಲ್ಲಿ ನಡೆದ ವಾರ್ಷಿಕ ಮಹಾಸಭೆ ಇಂಥ ಕ್ರಮಕ್ಕೆ ಶಿಫಾರಸು ಮಾಡಿತ್ತು.

ಈ ಪರೀಕ್ಷೆಗೆ ಒಳಪಟ್ಟು ಸಿಕ್ಕಿಹಾಕಿಕೊಳ್ಳುವ ಭಯದಿಂದಾಗಿ 124 ಅಥ್ಲೀಟುಗಳು ತಪಾಸಣೆಗೆ ವರದಿ ಮಾಡಿಕೊಳ್ಳಲಿಲ್ಲ.

ಈಗ ಎಎಫ್‌ಐ, 240 ಅಥ್ಲೀಟುಗಳನ್ನು ಎಎಫ್‌ಐ ಅನರ್ಹಗೊಳಿಸಲಿದೆ. ಫಲಿತಾಂಶಗಳನ್ನು ಅದಕ್ಕೆ ತಕ್ಕಂತೆ ಸೂಕ್ತವಾಗಿ ಬದಲಾಯಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT