ಭಾನುವಾರ, ಮೇ 16, 2021
26 °C
ಆರ್ಚರಿ ವಿಶ್ವಕಪ್‌ ಮೊದಲ ಹಂತದ ಟೂರ್ನಿ: ಹಿಂದೆ ಸರಿದ ಭಾರತದ ಕಾಂಪೌಂಡ್ ತಂಡ

ಅತನು–ದೀಪಿಕಾ ದಂಪತಿ ಮೇಲೆ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗ್ವಾಟೆಮಾಲಾ ಸಿಟಿ: ವಿಶ್ವಕಪ್ ಮೊದಲ ಹಂತದ ಆರ್ಚರಿ ಟೂರ್ನಿಯು ಮಂಗಳವಾರ ಇಲ್ಲಿ ಆರಂಭವಾಗಲಿದ್ದು, ಭಾರತದ ‘ಆರ್ಚರಿ ದಂಪತಿ‘ಯಾದ ಅತನು ದಾಸ್‌–ದೀಪಿಕಾ ಕುಮಾರಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

18 ತಿಂಗಳ ಬಳಿಕ ವಿಶ್ವಕಪ್ ಆರ್ಚರಿ ಟೂರ್ನಿಯೊಂದು ನಡೆಯುತ್ತಿದೆ. 2019 ಸೆಪ್ಟೆಂಬರ್‌ನಲ್ಲಿ ಮಾಸ್ಕೊದಲ್ಲಿ ವಿಶ್ವಕಪ್‌ನ ಫೈನಲ್ ನಡೆದಿತ್ತು.  ಕೋವಿಡ್ ಕಾರಣದಿಂದ 2020ರ ಆರ್ಚರಿ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿತ್ತು.

ಏಷ್ಯಾದ ಪ್ರಮುಖ ದೇಶಗಳಾದ ಕೊರಿಯಾ, ಚೀನಾ, ಚೀನಾ ತೈಪೇ ಹಾಗೂ ಟರ್ಕಿ ತಮ್ಮ ಸ್ಪರ್ಧಿಗಳನ್ನು ಟೂರ್ನಿಗೆ ಕಳುಹಿಸಿಲ್ಲ. ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳುತ್ತಿರುವ ಅತನು ಹಾಗೂ ದೀಪಿಕಾ ಈ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಪ್ರವಾಸ ನಿರ್ಬಂಧಗಳ ಕಾರಣ 2021ರ ವಿಶ್ವಕಪ್‌ನ ಮೂರು ಹಂತದ ಟೂರ್ನಿಗಳಲ್ಲೂ ತಾನು ಪಾಲ್ಗೊಳ್ಳುವುದಿಲ್ಲ ಎಂದು ಕೊರಿಯಾ ತಿಳಿಸಿದೆ.

ಏಷ್ಯದ ಪ್ರಮುಖ ರಾಷ್ಟ್ರಗಳು ಹಿಂದೆ ಸರಿದಿರುವುದರಿಂದ ಅಮೆರಿಕ ಹಾಗೂ ಯೂರೋಪ್ ದೇಶದ ಸ್ಪರ್ಧಿಗಳು ಟೂರ್ನಿಯಲ್ಲಿ ಪ್ರಾಬಲ್ಯ ಮೆರೆಯುವ ಸಾಧ್ಯತೆಯಿದೆ. ಮಿಶ್ರ ಮತ್ತು ತಂಡ ವಿಭಾಗಗಳಲ್ಲಿ ಭಾರತ, ಪದಕಗಳ ನಿರೀಕ್ಷೆಯಲ್ಲಿದೆ. ಈಗಾಗಲೇ ಒಲಿಂಪಿಕ್‌ ಟಿಕೆಟ್ ಗಿಟ್ಟಿಸಿರುವ ಅತನು, ಪ್ರವೀಣ್ ಜಾಧವ್ ಹಾಗೂ ತರುಣದೀಪ್ ರಾಯ್ ಅವರಿಗೆ ಇದು ಸತ್ವಪರೀಕ್ಷೆಯಾಗಿದೆ.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತವು ದೀಪಿಕಾ ಕುಮಾರಿ ಅವರ ಮೂಲಕ ಏಕೈಕ ಒಲಿಂಪಿಕ್ ಸ್ಥಾನ ಗಳಿಸಿದೆ. ಈ ಟೂರ್ನಿಗೆ ಮಹಿಳಾ ತಂಡದಲ್ಲಿ ದೀಪಿಕಾ ಅವರೊಂದಿಗೆ ಅಂಕಿತಾ ಭಕತ್‌ ಹಾಗೂ ಕೋಮಲಿಕಾ ಬಾರಿ ಇದ್ದಾರೆ.

ಏಷ್ಯನ್ ಚಾಂಪಿಯನ್‌ ಜೋಡಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ಅವರಿದ್ದ ಕಾಂಪೌಂಡ್‌ ತಂಡ ಟೂರ್ನಿಯಿಂದ ಹಿಂದೆ ಸರಿದಿದೆ. ತಂಡದ ಕೋಚ್‌ ಗೌರವ್ ಶರ್ಮಾ ಅವರಿಗೆ ಕೋವಿಡ್ ಖಚಿತಪಟ್ಟಿದ್ದರಿಂದ ರಾಷ್ಟ್ರೀಯ ಫೆಡರೇಷನ್ ಈ ತಂಡವನ್ನು ಹಿಂದೆ ಸರಿಸುವ ನಿರ್ಧಾರ ತಳೆದಿದೆ.

ವಿಶ್ವದಾದ್ಯಂತ 150ಕ್ಕೂ ಹೆಚ್ಚು ಆರ್ಚರ್‌ಗಳು ಈ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು