ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ ಆಸ್ಟ್ರೇಲಿಯಾಗೆ ಫೈನಲ್‌ ಕನಸು

ಮೊದಲ ಬಾರಿ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸುವ ಭರವಸೆಯಲ್ಲಿ ಬೆಲ್ಜಿಯಂ ತಂಡ
Last Updated 14 ಡಿಸೆಂಬರ್ 2018, 19:38 IST
ಅಕ್ಷರ ಗಾತ್ರ

ಭುವನೇಶ್ವರ: ಹ್ಯಾಟ್ರಿಕ್ ಪ್ರಶಸ್ತಿಯ ಕನಸು ಹೊತ್ತು ಇಲ್ಲಿಗೆ ಬಂದಿರುವ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಶನಿವಾರ ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಬೆಲ್ಜಿಯಂ ಅನ್ನು ಎದುರಿಸಲಿದೆ.

ಆಸ್ಟ್ರೇಲಿಯಾಗೆ ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿದೆ. ಭಾರತವನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿರುವ ನೆದರ್ಲೆಂಡ್ಸ್‌ ಬಲಿಷ್ಠವಾಗಿದೆ. ಮೂರು ಬಾರಿ ಪ್ರಶಸ್ತಿ ಗೆದ್ದಿರುವ ಡಚ್ಚರು 20 ವರ್ಷಗಳ ನಂತರ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಆಕ್ರಮಣಕಾರಿ ಆಟ ಆಸ್ಟ್ರೇಲಿಯಾ ತಂಡದ ಶಕ್ತಿ. ರಕ್ಷಣಾತ್ಮಕ ಆಟ ಮತ್ತು ಎದುರಾಳಿಗಳ ಆಟವನ್ನು ಗಮನಿಸುತ್ತಾ ಸಂದರ್ಭಕ್ಕೆ ಸರಿಯಾಗಿ ತಂತ್ರಗಳನ್ನು ಹೂಡುವುದು ನೆದರ್ಲೆಂಡ್ಸ್ ತಂಡದ ಆಟದ ಶೈಲಿ. ಆದ್ದರಿಂದ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು. 2013ರ ನಂತರ ವಿಶ್ವಕಪ್ ಹೊರತುಪಡಿಸಿ ಉಭಯ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ ಐದು ಪಂದ್ಯಗಳಲ್ಲಿ ಮತ್ತು ನೆದರ್ಲೆಂಡ್ಸ್ ನಾಲ್ಕು ಪಂದ್ಯಗಳಲ್ಲಿ ಗೆದ್ದಿದೆ. ಎರಡು ಪಂದ್ಯಗಳು ಡ್ರಾ ಆಗಿವೆ.

ನೀರಸ ಆರಂಭ; ನಂತರ ಪಾರಮ್ಯ: ಈ ಬಾರಿಯ ಟೂರ್ನಿಯಲ್ಲಿ ನೀರಸ ಆರಂಭ ಕಂಡಿದ್ದ ಚಾಂಪಿಯನ್ನರು ನಂತರ ಸುಧಾರಿಸಿಕೊಂಡಿದ್ದರು. ಮೊದಲ ‍ಪಂದಯದಲ್ಲಿ ಐರ್ಲೆಂಡ್‌ ವಿರುದ್ಧ 2–1ರಿಂದ ಗೆದ್ದಿದ್ದ ತಂಡ ನಂತರ ಇಂಗ್ಲೆಂಡ್ ಎದುರು 3–0ಯಿಂದ ಜಯಿಸಿತ್ತು. ಆದರೆ ಚೀನಾ ವಿರುದ್ಧ ತಂಡದ ನಿಜವಾದ ಸಾಮರ್ಥ್ಯ ಪ್ರಕಟಗೊಂಡಿತ್ತು. ಆ ಪಂದ್ಯದಲ್ಲಿ 11–0ಯಿಂದ ಗೆದ್ದಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ಗೆ ಒಂದು ಗೋಲೂ ಬಿಟ್ಟುಕೊಡದೆ ಏಕಪಕ್ಷೀಯವಾದ ಮೂರು ಗೋಲುಗಳಿಂದ ಜಯ ಸಾಧಿಸಿತ್ತು.

ಜರ್ಮನಿ ವಿರುದ್ಧ 1–4ರಿಂದ ಸೋತ ನಂತರ ಚೇತರಿಸಿಕೊಂಡ ನೆದರ್ಲೆಂಡ್ಸ್‌ 7–0ಯಿಂದ ಮಲೇಷ್ಯಾವನ್ನು ಹಾಗೂ 5–1ಯಿಂದ ಪಾಕಿಸ್ತಾನವನ್ನು ಮಣಿಸಿತ್ತು. ಕ್ರಾಸ್‌ ಓವರ್ ಪಂದ್ಯದಲ್ಲಿ 5–0ಯಿಂದ ಕೆನಡಾವನ್ನು ಸೋಲಿಸಿದ ತಂಡ ಭಾರತವನ್ನು ಕ್ವಾರ್ಟರ್‌ ಫೈನಲ್‌ನಲ್ಲಿ 2–1ರಿಂದ ಮಣಿಸಿತ್ತು.

ಕಳೆದ ಬಾರಿ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ 1–6ರಿಂದ ಆಸ್ಟ್ರೇಲಿಯಾಗೆ ಮಣಿದಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವುದಕ್ಕೆ ಕಾದಿರುವ ತಂಡ ಶನಿವಾರ ಭಾರಿ ಪೈಪೋಟಿ ನೀಡುವ ಸಾಧ್ಯತೆ ಇದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬೆಲ್ಜಿಯಂ ಮೊದಲ ಬಾರಿ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಗುಂಪು ಹಂತದಲ್ಲಿ ಗಮನಾರ್ಹ ಸಾಧನೆ ಮಾಡಲಾಗದ ಇಂಗ್ಲೆಂಡ್‌ ತಂಡ ಬೆಲ್ಜಿಯಂಗೆ ಸುಲಭ ತುತ್ತಾಗುವ ಸಾಧ್ಯತೆಗಳು ಇವೆ.

***

ಇಂದಿನ ಪಂದ್ಯಗಳು

(ಸೆಮಿಫೈನಲ್‌)

ಇಂಗ್ಲೆಂಡ್‌ – ಬೆಲ್ಜಿಯಂ

ಆರಂಭ: ಸಂಜೆ 4.00

ಆಸ್ಟ್ರೇಲಿಯಾ – ನೆದರ್ಲೆಂಡ್ಸ್‌

ಆರಂಭ: ಸಂಜೆ 6.30

ಸ್ಥಳ: ಕಳಿಂಗ ಕ್ರೀಡಾಂಗಣ

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌/ದೂರದರ್ಶನ

***

ವಿಶ್ವಕಪ್‌ನಲ್ಲಿ ತಂಡಗಳ ಮುಖಾಮುಖಿ

ಇಂಗ್ಲೆಂಡ್‌ –ಬೆಲ್ಜಿಯಂ

ಪಂದ್ಯಗಳು 3

ಇಂಗ್ಲೆಂಡ್‌ ಜಯ 2

ಬೆಲ್ಜಿಯಂ ಜಯ 1

ಗೋಲುಗಳು

ಇಂಗ್ಲೆಂಡ್‌ 8

ಬೆಲ್ಜಿಯಂ 5

ಆಸ್ಟ್ರೇಲಿಯಾ – ನೆದರ್ಲೆಂಡ್ಸ್‌

ಪಂದ್ಯಗಳು 10

ಆಸ್ಟ್ರೇಲಿಯಾ ಜಯ 6

ನೆದರ್ಲೆಂಡ್ಸ್ ಜಯ 4

ಗೋಲುಗಳು

ಆಸ್ಟ್ರೇಲಿಯಾ 25

ನೆದರ್ಲೆಂಡ್ಸ್ 20

***

ಎಫ್‌ಐಎಚ್ ರ‍್ಯಾಂಕಿಂಗ್‌

ಇಂಗ್ಲೆಂಡ್‌ 7

ಬೆಲ್ಜಿಯಂ 3

ಆಸ್ಟ್ರೇಲಿಯಾ 1

ನೆದರ್ಲೆಂಡ್ಸ್‌ 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT