ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುವ ಹುಡುಗರ ಕೃಷಿ ಖುಷಿ | ಕೃಷಿಯತ್ತ ಮುಖ ಮಾಡಿರುವ ಬಜರಂಗ್ ಪುನಿಯಾ

Last Updated 2 ಆಗಸ್ಟ್ 2020, 13:14 IST
ಅಕ್ಷರ ಗಾತ್ರ

‘ಭಗವಂತ ನಿನ್ನಲ್ಲಿ ನಾನು ಬೇಡುವುದಿಷ್ಟೇ. ನಾನು ಆಗಸದೆತ್ತರದ ಸಾಧನೆ ಮಾಡುವ ಶಕ್ತಿ ಕೊಡು. ಆದರೆ ಸದಾ ಭೂಮಿಯೊಂದಿಗೆ ನನ್ನ ಕಾಲುಗಳು ಮತ್ತು ಮನಸ್ಸಿನ ನಂಟು ಸದಾ ಇರುವಂತೆ ನೋಡಿಕೊ’

ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪುನಿಯಾ ಅವರ ಮನದ ಮಾತಿದು. ಕೊರೊನಾ ವೈರಸ್‌ ಸೋಂಕಿನ ಕಾರಣ ಕುಸ್ತಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ನಾಲ್ಕು ತಿಂಗಳುಗಳಿಂದ ಮನೆಯಲ್ಲಿಯೇ ಇರುವ ಬಜರಂಗ್ ಈಗ ಕೃಷಿಯತ್ತ ಮುಖ ಮಾಡಿದ್ದಾರೆ. ತಮ್ಮ ಹೊಲದಲ್ಲಿ ಮಣ್ಣು ಎಳೆಯುವ ಕೆಲಸ ಮಾಡುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಾಕಿರುವ ಬಜರಂಗ್ ಈ ಒಕ್ಕಣೆಯನ್ನು ಬರೆದಿದ್ದಾರೆ.

‘ಕೃಷಿಯೆಂದರೆ ಬರೀ ರೈತರಷ್ಟೇ ಮಾಡಬೇಕೆಂದೇನೂ ಇಲ್ಲ. ಎಲ್ಲರಿಗೂ ಬದುಕಿರಲು ಅನ್ನಾಹಾರ ಬೇಕು. ಎಲ್ಲರೂ ಕೃಷಿಕರಾದರೆ ತಪ್ಪಲ್ಲ. ವ್ಯವಸಾಯವೆಂದರೆ ಬರೀ ಆಹಾರ ಧಾನ್ಯ ಬೆಳೆಯುವ ಕಾರ್ಯವಲ್ಲ. ಅದರಿಂದ ಮಾನಸಿಕ ಮತ್ತು ದೈಹಿಕ ಸದೃಢತೆ ಸಾಧ್ಯವಿದೆ’ ಎಂದು ಹರಿಯಾಣದ ಖುದಾನ್ ಗ್ರಾಮದ ಬಜರಂಗ್ ಹೇಳುತ್ತಾರೆ.

‌ಜಗತ್ತಿಗೆ ಕೊರೊನಾ ವೈರಸ್‌ ಬಾಧಿಸದೇ ಹೋಗಿದ್ದರೆ ಸದ್ಯ ಟೋಕಿಯೊದಲ್ಲಿ ಒಲಿಂಪಿಕ್ಸ್‌ ನಡೆಯಬೇಕಿತ್ತು. ಅದರಲ್ಲಿ ಬಜರಂಗ್ ತೊಡೆ ತಟ್ಟಬೇಕಿತ್ತು. ಆದರೆ ಒಲಿಂಪಿಕ್ ಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಇನ್ನೊಂದೆಡೆ ಯುವ ಫುಟ್‌ಬಾಲ್ ಆಟಗಾರ ಅಮರ್‌ಜೀತ್ ಸಿಂಗ್ ಕಿಯಾಮ್ ಕೂಡ ಸಲಿಕೆ, ಗುದ್ದಲಿ ಹಿಡಿದು ತಮ್ಮ ಗದ್ದೆಯತ್ತ ಮುಖ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ನಡೆದಿದ್ದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಅಮರ್‌ಜೀತ್ ಸಿಂಗ್ ಮಣಿಪುರದ ತೌಬಾಲ್ ಗ್ರಾಮದವರು. ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಜೆಮ್ಶೆಡ್‌ಪುರ ಎಫ್‌ಸಿ ಪರ ಆಡುತ್ತಿದ್ದಾರೆ. ಊರಲ್ಲೇ ವ್ಯಾಯಾಮ ಮಾಡಿಕೊಂಡು ಫಿಟ್‌ನೆಸ್ ಉಳಿಸಿಕೊಳ್ಳುತ್ತಿರುವ ಅವರು ಗದ್ದೆಯಲ್ಲಿ ಪಾಲಕರಿಗೆ ನೆರವಾಗುತ್ತಿದ್ದಾರೆ.

19 ವರ್ಷ ವಯಸ್ಸಿನ, ಮಿಡ್‌ಫೀಲ್ಡರ್ ಈಗಾಗಲೇ ಭಾರತ ತಂಡಕ್ಕೆ ‘ಅರ್ಹತೆ’ ಪಡೆದಿದ್ದಾರೆ. ಮಳೆಯಿಂದಾಗಿ ಕೆಸರಾಗಿರುವ ಗದ್ದೆಗಳಲ್ಲಿ ತಂದೆಯ ಜೊತೆ ‘ಕಣಕ್ಕೆ’ ಇಳಿಯುವ ಅಮರ್‌ಜೀತ್ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇಲ್ಲಿರುವ ವಿಶಾಲ ಜಾಗದಲ್ಲಿ ನಮ್ಮದೂ ಸಣ್ಣ ಹೊಲವೊಂದು ಇದೆ. ಕೃಷಿ ಚಟುವಟಿಕೆಯಲ್ಲಿ ತಂದೆಗೆ ನೆರವಾಗಲು ಖುಷಿಯಾಗುತ್ತಿದೆ. ನಮ್ಮ ಮೂಲಕ್ಕೆ ಮರಳುವುದಕ್ಕೂ ಪಾಲಕರಿಗೆ ಸಹಾಯ ಮಾಡುವುದಕ್ಕೂ ಹಿಂಜರಿಕೆ ಇರಬಾರದು. ಇಂಥ ಕೆಲಸದಲ್ಲಿ ಮುಜುಗರಪಡುವಂಥಾದ್ದು ಏನೂ ಇಲ್ಲ’ ಎಂದು ಅವರು ಹೇಳಿರುವುದಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ತಿಳಿಸಿದೆ.

‘ತಲೆಮಾರುಗಳಿಂದ ನನ್ನ ಕುಟುಂಬದವರು ಕೃಷಿ ಮಾಡುತ್ತಾ ಬಂದಿದ್ದಾರೆ. ಫುಟ್‌ಬಾಲ್‌ನಲ್ಲೇ ಹೆಚ್ಚು ಕಾಲ ಕಳೆದ ಕಾರಣ ಸಣ್ಣ ವಯಸ್ಸಿನಿಂದಲೇ ನನಗೆ ಕೃಷಿ ಕಡೆಗೆ ಹೆಚ್ಚು ಗಮನಕೊಡಲು ಆಗಿರಲಿಲ್ಲ. ಅಭ್ಯಾಸ ಮತ್ತು ಪಂದ್ಯಗಳಿಗಾಗಿ ಹೆಚ್ಚಿನ ಕಾಲ ರಾಜ್ಯದಿಂದ ಹೊರಗಡೆಯೇ ಇರುತ್ತಿದ್ದೆ. ಆದ್ದರಿಂದ ಗದ್ದೆಯ ಕಡೆಗೆ ಹೋಗಲು ಸಮಯ ಸಿಗುತ್ತಿರಲಿಲ್ಲ. ಈಗ ಮಣ್ಣಿನಲ್ಲಿ ಕೆಲಸ ಮಾಡಲು ಮತ್ತೆ ಅವಕಾಶ ಲಭಿಸಿದಂತಾಗಿದೆ’ ಎಂದಿದ್ದಾರೆ.

ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಹೇಂದ್ರಸಿಂಗ್ ಧೋನಿ ಕೂಡ ಸಾವಯವ ಕೃಷಿ ಆರಂಭಿಸಿರುವ ಸುದ್ದಿ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT