ಶನಿವಾರ, ಮಾರ್ಚ್ 6, 2021
28 °C

ಬ್ಯಾಡ್ಮಿಂಟನ್ | ಲೀ ಕ್ಸೂರಿ ಎದುರಿನ ಗೆಲುವು ಭರವಸೆ ಮೂಡಿಸಿತು: ಸಿಂಧು

‌ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಆರಂಭದಲ್ಲಿ ಸೋಲುಗಳಿಂದ ಎದೆಗುಂದಿದ್ದು ನಿಜ. ಆದರೆ 2012ರ ಚೀನಾ ಮಾಸ್ಟರ್ಸ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಲೀ ಕ್ಸೂರಿ ಎದುರು ಗಳಿಸಿದ ಗೆಲುವು ಭರವಸೆ ತುಂಬಿತು. ಸಾಧನೆಯ ಹಾದಿಯಲ್ಲಿ ಸಾಗಲು ಆ ಜಯ ಬಲ ತುಂಬಿತು...‘

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಡಿದು ಮಾತು ಇದು. ಟೇಬಲ್ ಟೆನಿಸ್ ಪಟು ಮುದಿತ್ ದಾನಿ ಅವರ ಆನ್‌ಲೈನ್ ಕಾರ್ಯಕ್ರಮ ‘ಸ್ಪೋರ್ಟ್‌ಲೈಟ್‌’ನಲ್ಲಿ ಸಿಂಧು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪ್ರವೇಶಿಸಿದ ಆರಂಭದಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದೆ. ಆದರೆ ಅವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಸಾಲುತ್ತಿರಲಿಲ್ಲ. ಅರ್ಹತಾ ಸುತ್ತು ಮತ್ತು ಮೊದಲ ಸುತ್ತಿನಲ್ಲೇ ಟೂರ್ನಿಗಳಿಂದ ಹೊರಬೀಳುತ್ತಿದ್ದುದು ಬೇಸರ ಉಂಟುಮಾಡುತ್ತಿತ್ತು. ಆಟದ ನೈಪುಣ್ಯಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂದೆನಿಸಿತು. ಆದ್ದರಿಂದ ಕಠಿಣ ಅಭ್ಯಾಸ ಮಾಡಲು ನಿರ್ಧರಿಸಿದೆ. ಈಗಿನ ಬೆಳವಣಿಗೆಗೆ ಅಂದಿನ ಆ ತೀರ್ಮಾನವೇ ಕಾರಣ’ ಎಂದು ಅವರು ಹೇಳಿದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಲೀ ಅವರನ್ನು 16 ವರ್ಷದ ಸಿಂಧು ಚೀನಾ ಮಾಸ್ಟರ್ಸ್‌ನಲ್ಲಿ ಮಣಿಸಿ ಅಚ್ಚರಿ ಉಂಟುಮಾಡಿದ್ದರು. ಮುಂದಿನ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿ ತಮ್ಮ ಹೆಸರನ್ನು ಮತ್ತಷ್ಟ ಎತ್ತರಕ್ಕೆ ಏರಿಸಿದರು. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ಸಿಂಧು ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದು ಚಿನ್ನ, ತಲಾ ಎರಡು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.   

‘ಸೋಲು ಕಾಡಿದಾಗ ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂದು ಯೋಚಿಸುತ್ತಿದ್ದೆ. ಮರುದಿನದಿಂದ ಅಭ್ಯಾಸ ಕಣದಲ್ಲಿ ಹೆಚ್ಚು ಬೆವರು ಸುರಿಸುತ್ತಿದ್ದೆ. 2004ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ತೌಫಿಕ್ ಹಿದಾಯತ್ ಅವರ ಬ್ಯಾಕ್‌ಹ್ಯಾಂಡ್ ಹೊಡೆತಗಳು, ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡ್ಯಾನ್ ಅವರ ಆಟದ ಶೈಲಿ ನನಗೆ ತುಂಬ ಇಷ್ಟ’ ಎಂದು ಹೇಳಿದ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅಭಿಮಾನಿಯೊಬ್ಬರು ಒಂದು ತಿಂಗಳ ವೇತನವನ್ನು ಕೊಡುಗೆಯಾಗಿ ನೀಡಿದ ಪ್ರಸಂಗವನ್ನು ನೆನಪಿಸಿಕೊಂಡು ಭಾವುಕರಾದರು.

‘ಅಂದು ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಆ ವ್ಯಕ್ತಿ ತೋರಿಸಿದ ಅಭಿಮಾನಕ್ಕೆ ನಾನು ಬೆರಗಾಗಿದ್ದೆ. ಕೆಲವು ದಿನಗಳ ಹಿಂದೆ ಅವರಿಗೆ ಪತ್ರವೊಂದನ್ನು ಬರೆದು ಸ್ವಲ್ಪ ಹಣವನ್ನೂ ಕಳುಹಿಸಿಕೊಟ್ಟಿದ್ದೆ’ ಎಂದು ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು ವಿವರಿಸಿದರು.

ಕೋವಿಡ್–19 ಸೃಷ್ಟಿಸಿರುವ ಆತಂಕದ ನಡುವೆ ಮನೆಯವರ ಜೊತೆಯಲ್ಲೇ ಕಾಲ ಕಳೆಯುತ್ತಿರುವ ಸಿಂಧು ಅಲ್ಲೇ ಅಭ್ಯಾಸವನ್ನೂ ಮುಂದುವರಿಸಿದ್ದಾರೆ. ಕೆಲವು ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಂಡಿರುವುದಾಗಿ ಅವರು ತಿಳಿಸಿದರು. ‘ಚಿತ್ರ ಬರೆಯುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ಅಡುಗೆ ಮನೆಯಲ್ಲೂ ಒಂದಷ್ಟು ಹೊತ್ತು ಕಳೆಯುತ್ತಿದ್ದೇನೆ. ಈ ವರೆಗೆ ಜೀವನದಲ್ಲಿ ಬರೀ ಬ್ಯಾಡ್ಮಿಂಟನ್ ಮಾತ್ರ ಇತ್ತು. ಈಗ ಇತರ ಕ್ಷೇತ್ರದ ಕಡೆಗೂ ಗಮನ ಕೊಡಲು ಆಗುತ್ತಿದೆ. ಇದು ಕೊರೊನಾ ಕಾಲದಲ್ಲಿ ಲಭಿಸಿದ ಹೊಸ ಅನುಭವ’ ಎಂದರು.

ಸಿಂಧು ಸೇರಿದಂತೆ ಪ್ರಮುಖ ಬ್ಯಾಡ್ಮಿಂಟನ್ ಪಟುಗಳು ಕ್ರೀಡಾಂಗಣಗಳಲ್ಲಿ ಅಭ್ಯಾಸ ಆರಂಭಿಸಲು ತೆಲಂಗಾಣ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಜುಲೈ ಒಂದರಿಂದ ತರಬೇತಿ ಆರಂಭಿಸಲು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಯೋಜನೆ ಹಾಕಿಕೊಂಡಿತ್ತು. ಆದರೆ ರಾಜ್ಯದಲ್ಲಿ ಕೋವಿಡ್–19 ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸರ್ಕಾರ ಅನುಮತಿ ನಿರಾಕರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು