ಗುರುವಾರ , ಜುಲೈ 7, 2022
25 °C
ಜಮಖಂಡಿಯಲ್ಲಿ ಮೈಲ್‌ ಕೂಲಿಯಿಂದ ಅಂತರರಾಷ್ಟ್ರೀಯ ಸೈಕ್ಲಿಸ್ಟ್‌, ಕೋಚ್ ಆದ ಕಥೆ

ಸೈಕ್ಲಿಂಗ್ ಕ್ರೀಡೆಯ ‘ಮೈಲುಗಲ್ಲು’ ಚಂದ್ರು ಕುರಣಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಲ್ ಕೂಲಿಯಾಗಿ ಕೆಲಸ ಮಾಡುತ್ತ ತಾವೇ ಡಾಂಬರು ಹಾಕಿದ್ದ ರಸ್ತೆಗಳಿಗೇ ಚಿನ್ನದ ಹೊಳಪು ತುಂಬಿದವರು ಚಂದ್ರಪ್ಪ ಮಲ್ಲಪ್ಪ ಕುರಣಿ.

ತಮ್ಮ 18–20ನೇ ವಯಸ್ಸಿನಲ್ಲಿ ವಿಜಯಪುರ, ಜಮಖಂಡಿ ರಸ್ತೆಗಳಿಗೆ ಡಾಂಬರು ಹಾಕುವ ಕಾಮಗಾರಿಗಳಲ್ಲಿ ಮೈಲ್ ಕೂಲಿಯಾಗಿ ದುಡಿದ ಚಂದ್ರಪ್ಪ, ಅಂತರರಾಷ್ಟ್ರೀಯ ಸೈಕ್ಲಿಸ್ಟ್ ಆಗಿ ಬೆಳೆದರು.  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸೈಕ್ಲಿಂಗ್ ಕೋಚ್ ಆಗಿ ನೂರಾರು ಸೈಕ್ಲಿಸ್ಟ್‌ಗಳನ್ನು ಸಿದ್ಧಗೊ ಳಿಸಿದರು. ಅವರ ತರಬೇತಿಯಲ್ಲಿ ಸಿದ್ಧರಾ ದವರು  ಪದಕಗಳನ್ನು ಗೆದ್ದು ಕರ್ನಾಟಕದ ಹೊಳಪು ಹೆಚ್ಚಿಸಿದರು.  ಎಲ್ಲಕ್ಕಿಂತ ಹೆಚ್ಚಾಗಿ; ವಿಜಯಪುರವೆಂದರೆ ಸೈಕ್ಲಿಂಗ್ ಕಣಜವೆಂಬ ಖ್ಯಾತಿ ಬರಲು ಚಂದ್ರು ಕುರಣಿ ಶ್ರಮವೇ ಪ್ರಮು ಖವಾಗಿತ್ತು. ಯಾವ ಸೌಲಭ್ಯಗಳೂ ಇಲ್ಲದ ಕಾಲದಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಚಂದ್ರು ಅವರದ್ದು ಸ್ಪೂರ್ತಿಯ ಕಥೆ.

‘ಜಮಖಂಡಿ ತಾಲ್ಲೂಕಿನ ಕುಂಬಾರ ಹಳ್ಳ  ನಮ್ಮ ಊರು. ತಂದೆ ಮಲ್ಲಪ್ಪ ನವರು ಕೃಷಿ ಕೂಲಿಯಾಗಿದ್ದರು. ನಾವು ಆರು ಜನ ಗಂಡುಮಕ್ಕಳು. ದೊಡ್ಡ ಸಂಸಾರ. ಚಂದ್ರಣ್ಣ ಮೂರನೇಯವರು.  ದೈಹಿಕವಾಗಿ ಬಲಭೀಮನಂತಿದ್ದರು. ನೀರಾವರಿ ಇಲ್ಲದ ಜಮೀನಿನಲ್ಲಿ ಕೃಷಿಯಿಂದ ಸಿಗುತ್ತಿದ್ದ ಆದಾಯ ಕುಟುಂಬಕ್ಕೆ ಸಾಲುತ್ತಿರಲಿಲ್ಲ. ಅದಕ್ಕಾಗಿ ಅಪ್ಪ, ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗಳಲ್ಲಿ ದುಡಿಯಲು ಹೋಗುತ್ತಿದ್ದರು. ಅಪ್ಪ, ಚಂದ್ರಣ್ಣ ಮತ್ತು ನನ್ನ ಇನ್ನೊಬ್ಬ ಸಹೋದರ  ರಸ್ತೆಗೆ ಡಾಂಬರು ಹಾಕುವ ಮೈಲ್ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಕುಂಬಾರಹಳ್ಳದಿಂದ   ರಸ್ತೆ ಕಾಮಗಾರಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದರು. ಚಂದ್ರಣ್ಣ ಸೈಕಲ್ ತುಳಿಯುವ ವೇಗವನ್ನು ಕಾಮಗಾರಿ ಉಸ್ತುವಾರಿ ವಹಿಸಿದ್ದ ಮೇಸ್ತ್ರಿಯೊಬ್ಬರು ಗಮನಿಸಿದ್ದರು. ಆದ್ದರಿಂದ ಚಂದ್ರಣ್ಣನಿಗೆ ಡಾಂಬರ್ ಹಾಕುವ ಕೆಲಸ ಬಿಡಿಸಿ, ರಸ್ತೆ ಪರಿವೀಕ್ಷಣೆಗೆ ತೆರಳಲು ತಮ್ಮ ಸೈಕಲ್ ಸಾರಥಿಯನ್ನಾಗಿ  ನೇಮಿಸಿಕೊಂಡರು. 20 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಮೇಸ್ತ್ರಿಯನ್ನು ತಮ್ಮ ಹಿಂದೆ ಕೂರಿಸಿಕೊಂಡು ಸೈಕಲ್ ತುಳಿಯುತ್ತಿದ್ದರು. ಮಿತಭಾಷಿ ಚಂದ್ರಣ್ಣ, ಇಡೀ ದಿನ ಬಿರುಬಿಸಿಲಿನಲ್ಲಿ ಸೈಕಲ್ ಹೊಡೆದು ಸುಸ್ತಾಗುತ್ತಿರಲಿಲ್ಲ. ಸಂಜೆ ಊರಿಗೆ ಮರಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು‘ ಎಂದು ಶ್ರೀಶೈಲ ಗದ್ಗದಿ ತರಾಗುತ್ತಾರೆ.

ದಣಿವರಿಯದ ಚಂದ್ರು ಸೈಕ್ಲಿಂಗ್‌ ಕ್ರೀಡೆಗೆ ಬಂದಿದ್ದು ಕುಂಬಾರಹಳ್ಳ ದಲ್ಲಿ ಸೈಕಲ್ ರಿಪೇರಿ ಅಂಗಡಿ ಇಟ್ಟಿದ್ದ ನಬೀಸಾಬ್ ನದಾಫ್‌ ಅವರಿಂದಾಗಿ. ಊರಿನಲ್ಲಿ ಪ್ರತಿವರ್ಷ ಯುಗಾದಿಗೆ ನಡೆಯುವ ಜಾತ್ರೆಯಲ್ಲಿ ಸೈಕ್ಷಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಮೊಟ್ಟ ಮೊದಲಿಗೆ ಸೈಕಲ್ ಮರುವಿನ್ಯಾಸ ಮಾಡಿಕೊಟ್ಟಿದ್ದ ನದಾಫ್‌, ಚಂದ್ರಣ್ಣ ನನ್ನು ಹುರಿದುಂಬಿಸಿದ್ದರು. ಬೇರೆ ಬೇರೆ ಊರು, ರಾಜ್ಯಗಳಿಂದಲೂ ಯುಗಾದಿ ಜಾತ್ರೆ ಸೈಕ್ಲಿಂಗ್‌ನಲ್ಲಿ ಸ್ಪರ್ಧಿಸಲು ಸೈಕ್ಲಿಸ್ಟ್‌ಗಳು ಬರುತ್ತಿದ್ದರು. 1977ರಲ್ಲಿ ನಡೆದಿದ್ದ ಈ ರೇಸ್‌ನಲ್ಲಿ ಅಗ್ರಸ್ಥಾನ ಗಳಿಸಿದ ಚಂದ್ರು ಜೀವನದ ದಿಕ್ಕು ಬದಲಾಯಿತು. ಕೆಲವರು ನೀಡಿದ ಸಲಹೆಯಿಂದ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಗೆಲುವಿನ ಸಿಹಿಯುಂಡರು. ಪಂಜಾಬ್, ಹರಿಯಾಣದವರ ಪ್ರಾಬ ಲ್ಯವಿದ್ದ ಕಾಲದಲ್ಲಿ ಕನ್ನಡನಾಡಿನ ಹೆಜ್ಜೆಗುರುತು ಮೂಡಿಸಿದರು.

ಟ್ರ್ಯಾಕ್‌ ಸೈಕ್ಲಿಂಗ್ ಸೌಲಭ್ಯ ರಾಜ್ಯದಲ್ಲಿ ಇಲ್ಲದ ಕಾರಣ (ಈಗಲೂ ಇಲ್ಲ) ರಸ್ತೆ ಸೈಕ್ಲಿಂಗ್‌ನಲ್ಲಿಯೇ ಅವರು ಹೆಚ್ಚು ಭಾಗವಹಿಸಿದರು. ಭಾರತ ತಂಡಕ್ಕೂ ಆಯ್ಕೆಯಾದರು. 1982ರಲ್ಲಿದೆಹಲಿ ಯಲ್ಲಿ ನಡೆದ ಏಷ್ಯನ್ ಗೇಮ್ಸ್‌ಗೆ 5ನೇ ಸ್ಥಾನ ಗಳಿಸಿ ಮರಳಿದರು. 1983 ರಲ್ಲಿ ಇಟಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ ಭಾಗವಹಿಸಿದರು. ವಿಜಯಪುರ ಭಾಗದಲ್ಲಿ ಯುವಕ–ಯುವತಿಯರಲ್ಲಿ ಸೈಕ್ಲಿಂಗ್ ಆಕರ್ಷಣೆ ಹೆಚ್ಚಿಸಿತು. ಅದು ವಿಜಯಪುರ ದಲ್ಲಿ ಸೈಕ್ಲಿಂಗ್ ಕ್ರೀಡಾ ವಸತಿ ನಿಲಯ ಆರಂಭವಾಗಲು ಕಾರಣವಾಯಿತು ಎನ್ನುತ್ತಾರೆ ಅವರ ಶಿಷ್ಯಬಳಗದ ಹಲವರು. ಇದೇ ವಸತಿ ನಿಲಯದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಚಂದ್ರು ಕಾರ್ಯನಿರ್ವಹಿಸಿದರು.

ಇವರ ಮಾರ್ಗದರ್ಶನದಲ್ಲಿ ಬೆಳೆದ ಸೈಕ್ಲಿಸ್ಟ್‌ಗಳಲ್ಲಿ ಹಲವರು ಏಷ್ಯನ್ ಚಾಂಪಿ ಯನ್‌ಷಿಪ್, ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿಯೂ ಕೀರ್ತಿ ಪತಾಕೆ ಹಾರಿಸಿದರು. ಇನ್ನೂ ಕೆಲವು ಸೈಕ್ಲಿಸ್ಟ್‌ಗಳು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ನಮ್ಮ ಗೇಮ್ (ಸೈಕ್ಲಿಂಗ್‌) ಬಡವರದ್ದು. ನಿಮ್ಮ ಕ್ರಿಕೆಟ್‌ನಂತೆ ಅಲ್ಲ. ಇಲ್ಲಿ ರೊಕ್ಕಾ ಇಲ್ಲ. ಆದರ ಸಾಧಿಸಬೇಕು ಎನ್ನೋ ಛಲ, ವಿಶ್ವಾಶ ಹೆಚ್ಚು. ಗೌಂಡಿ (ಗಾರೆ) ಕೆಲಸ ಮಾಡು ವವರು, ಹೂ ಮಾರುವವರು, ಕೂಲಿ ಕಾರರ ಮಕ್ಕಳು ನಮ್ಮ ಕಡೆ ಸಾದಾ ಸೈಕಲ್‌ನ್ಯಾಗ್ ಬರ್ತಾರ. ಹಗಲು, ರಾತ್ರಿ ದುಡಿತಾರ. ನ್ಯಾಷನಲ್‌ ಪದಕ ಗೆದ್ದು, ಒಂದು ಸರ್ಕಾರಿ ನೌಕರಿ ಹಿಡದು ತಮ್ಮ ಕುಟುಂಬಕ್ಕ ಆಸರಾ ಆಗ್ತಾರ. ಇನ್ನೂಕೆಲವರು ಒಂದ್ ಹೆಜ್ಜಿ ಮುಂದೋಗಿ ಇಂಟರ್‌ನ್ಯಾಷನಲ್ ಸಾಧನೆನೂ ಮಾಡ್ತಾರ. ನನಗ ಅದ್ರಿಂದ್ ಸಿಗೋ ಖುಷಿಗೆ ಬೆಲೆ ಕಟ್ಟಾಕ್ ಆಗಲ್ಲ ಬಿಡ್ರಿ‘ ಎಂದು ಪ್ರತಿಬಾರಿ ಭೇಟಿಯಾದಾಗಲೂ ಚಂದ್ರು ಹೇಳುತ್ತಿದ್ದ ಮಾತುಗಳಿವು.

ಜೀವನದುದ್ದಕ್ಕೂ ಆರ್ಥಿಕ ದುರ್ಬಲ ವರ್ಗದ ಮಕ್ಕಳ ಕಾಲುಗಳಿಗೆ ಸೈಕಲ್ ಹೊಡೆಯುವ ಶಕ್ತಿ ತುಂಬಿ, ಎದೆಯುಬ್ಬಿಸಿ ಜೀವನ ಮಾಡುವಂತೆ ಮಾಡಿದ ‘ದ್ರೋಣಾ ಚಾರ್ಯ‘ ಚಂದ್ರು. ಆದರೂ ಅವರ ಕಾರ್ಯಕ್ಕೆ ಸಿಗಬೇಕಿದ್ದ ದೊಡ್ಡಮಟ್ಟದ ಗೌರವಾದರಗಳು ಸಿಗದ ಬೇಸರ ಕುಂಬಾರಹಳ್ಳದ ಜನರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು