ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಒಲಿಂಪಿಯಾಡ್: ಭಾರತ ‘ಎ’ ತಂಡಕ್ಕೆ ಮಣಿದ ಗ್ರೀಸ್

Last Updated 31 ಜುಲೈ 2022, 20:30 IST
ಅಕ್ಷರ ಗಾತ್ರ

ಮಹಾಬಲಿಪುರಂ : ಚೆಸ್‌ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಭಾರತದ ಮೂರೂ ತಂಡಗಳು ಗೆಲುವಿನ ಓಟ ಮುಂದುವರಿಸಿವೆ.

ಭಾನುವಾರ ನಡೆದ ಮೂರನೇ ಸುತ್ತಿನಲ್ಲಿ ಭಾರತ ‘ಎ’ ತಂಡ 3–1 ರಲ್ಲಿ ಗ್ರೀಸ್‌ ವಿರುದ್ಧ ಜಯಿಸಿತು.
ಭಾರತ ‘ಬಿ’ 4–0 ರಲ್ಲಿ ಸ್ವಿಟ್ಜರ್‌ಲೆಂಡ್‌ ವಿರುದ್ಧ, ಭಾರತ ‘ಸಿ’ ತಂಡ 3–1 ರಲ್ಲಿ ಐಸ್‌ಲ್ಯಾಂಡ್‌ ಎದುರು ಗೆದ್ದಿತು.

ಟಾಪ್‌ಬೋರ್ಡ್‌ನಲ್ಲಿ ಆಡಿದ ಭಾರತ ‘ಎ’ ತಂಡದ ಪಿ.ಹರಿಕೃಷ್ಣ, ಗ್ರೀಸ್‌ನ ದಿಮಿತ್ರೊಸ್‌ ಮಾಸ್ಟ್ರೊವಸಿಲಿಸ್‌ ಎದುರು 30 ನಡೆಗಳಲ್ಲಿ ಗೆದ್ದು ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು.

ಅರ್ಜುನ್‌ ಎರಿಗೈಸಿ ಅವರು 51 ನಡೆಗಳಲ್ಲಿ ಅಥನಾಸಿಯೊಸ್ ಮಾಸ್ಟ್ರೊವಸಿಲಿಸ್‌ ಅವರನ್ನು ಸೋಲಿಸಿದರು. ಆದರೆ ವಿದಿತ್‌ ಸಂತೋಷ್‌ ಗುಜರಾತಿ ಮತ್ತು ಕೆ.ಶಶಿಕಿರಣ್‌ ಪೂರ್ಣ ಪಾಯಿಂಟ್ಸ್‌ ಸಂಗ್ರಹಿಸಲು ವಿಫಲರಾದರು. ಇವರು ಕ್ರಮವಾಗಿ ಥಿಯೊಡರೊ ನಿಕೊಲಸ್ ಹಾಗೂ ಇಯೊನಿಡಿಸ್‌ ಎವ್ಗೆನಿಯೊಸ್ ಜತೆ
ಡ್ರಾ ಮಾಡಿಕೊಂಡರು.

ಯುವ ಆಟಗಾರರನ್ನು ಒಳಗೊಂಡಿರುವ ಭಾರತ ‘ಬಿ’ ತಂಡದ ಅಮೋಘ ಓಟ ಮುಂದುವರಿದಿದ್ದು, ಸತತ ಮೂರನೇ ಪಂದ್ಯವನ್ನು 4–0 ಅಂತರಿಂದ ಗೆದ್ದುಕೊಂಡಿತು.

ಡಿ.ಗುಕೇಶ್‌ ಸ್ವಿಟ್ಜರ್‌ಲೆಂಡ್‌ನ ಜಾರ್ಜಿಯಾಡಿಸ್‌ ನಿಕೊ ಎದುರು, ನಿಹಾಲ್‌ ಸರಿನ್ ಅವರು ಬಾಗ್ನೆರ್‌ ಸೆಬಾಸ್ಟಿಯನ್‌ ಎದುರು, ಆರ್‌.ಪ್ರಜ್ಞಾನಂದ ಅವರು ಪೆಲೆಟಿಯರ್‌ ಯಾನ್ನಿಕ್‌ ಎದುರು ಹಾಗೂ ರೌನಕ್‌ ಸಾಧ್ವಾನಿ ಅವರು ಬೆನೆಜಿಗೆರ್‌ ಫ್ಯಾನಿಯಾನ್‌ ಎದುರು ಗೆದ್ದರು.

ಕಪ್ಪು ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ ಅವರು ಗೆಲುವಿಗೆ 67 ನಡೆಗಳನ್ನು ತೆಗೆದುಕೊಂಡರು.

ಐಸ್‌ಲ್ಯಾಂಡ್‌ ಎದುರು ಆಡಿದ ಭಾರತ ‘ಸಿ’ ತಂಡದಲ್ಲಿ ಎಸ್‌.ಪಿ.ಸೇತುರಾಮನ್‌ ಮತ್ತು ಅಭಿಜಿತ್‌ ಗುಪ್ತಾ ಅವರು ಗೆಲುವು ಪಡೆದರೆ, ಸೂರ್ಯಶೇಖರ್‌ ಗಂಗೂಲಿ ಹಾಗೂ ಅಭಿಮನ್ಯು ಪುರಾಣಿಕ್‌ ಅವರು ತಮ್ಮ ಎದುರಾಳಿಗಳ ಜತೆ ಪಾಯಿಂಟ್‌ ಹಂಚಿಕೊಂಡರು.

ಮಹಿಳಾ ತಂಡಗಳಿಗೆ ಜಯ: ಮಹಿಳಾ ವಿಭಾಗದಲ್ಲಿ ಕಣದಲ್ಲಿರುವ ಭಾರತದ ತಂಡಗಳು ಮೂರನೇ ಸುತ್ತಿನಲ್ಲಿ ಗೆಲುವು ಸಾಧಿಸಿದವು.

ಭಾರತ ‘ಎ’ ತಂಡ ಇಂಗ್ಲೆಂಡ್‌ ತಂಡವನ್ನು 3–1 ರಿಂದ ಪರಾಭವಗೊಳಿಸಿತು. ಆರ್‌.ವೈಶಾಲಿ ಅವರು ಟೊಮಾ ಕ್ಯಾಥರಿನಾ ಎದುರು, ಭಕ್ತಿ ಕುಲಕರ್ಣಿ ಅವರು ಕಲೈಯಲಹನ್‌ ಅಕ್ಷಯ ಎದುರು ಗೆದ್ದರು. ಡಿ.ಹರಿಕಾ–ಹೌಸ್ಕಾ ಯೊಹಾಂಕ ಹಾಗೂ ತಾನಿಯಾ ಸಚ್‌ದೇವ್– ಯಾವೊ ಲಾನ್‌ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT