ಮಂಗಳವಾರ, ಜೂನ್ 28, 2022
24 °C
ಕೊಡೈಕನಾಲ್, ಕುದುರೆಮುಖ, ಸಾವನದುರ್ಗ, ಉತ್ತರಹಳ್ಳಿಯಲ್ಲಿ ತರಬೇತಿಗೆ ಆದ್ಯತೆ

ಲಡಾಖ್‌ ರನ್‌ಗೆ ಗುಡ್ಡ–ಬೆಟ್ಟಗಳಲ್ಲಿ ಅಭ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವದ ಅತ್ಯಂತ ಕಠಿಣ ಓಟದ ಸ್ಪರ್ಧೆ ಎಂದೇ ಹೇಳಲಾಗುವ ಲಡಾಖ್ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಬೆಂಗಳೂರಿನ ಅಥ್ಲೀಟ್‌ಗಳು ಈಗ ರಾಜ್ಯ ಮತ್ತು ನೆರೆರಾಜ್ಯಗಳ ಗುಡ್ಡ–ಬೆಟ್ಟಗಳಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

2012ರಲ್ಲಿ ಆರಂಭಗೊಂಡ ಮ್ಯಾರಥಾನ್‌ನ 9ನೇ ಆವೃತ್ತಿ ಸೆಪ್ಟೆಂಬರ್ 7ರಿಂದ 11ರ ವರೆಗೆ ನಡೆಯಲಿದೆ. ಅಂತರರಾಷ್ಟ್ರೀಯ ಮ್ಯಾರಥಾನ್ ಮತ್ತು ದೂರ ಅಂತರದ ಓಟದ ಸಂಸ್ಥೆಯಿಂದ (ಎಐಎಂಎಸ್‌) ಮಾನ್ಯತೆ ಪಡೆದಿರುವ ರೇಸ್‌ನಲ್ಲಿ ವಾತಾವರಣವೇ ಪ್ರಮುಖ ಸವಾಲು. ಹೀಗಾಗಿ ಇದರಲ್ಲಿ ಭಾಗವಹಿಸಬೇಕಾದರೆ ವಿಶೇಷ ತಯಾರಿ ಅಗತ್ಯ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

‘ಕೋವಿಡ್‌–19ರಿಂದಾಗಿ ಎರಡು ವರ್ಷ ಸ್ಪರ್ಧೆ ನಡೆದಿರಲಿಲ್ಲ. ಈಗ ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಲಡಾಖ್ ರೇಸ್‌ ಬಗ್ಗೆ ಎರಡು ವರ್ಷಗಳಲ್ಲಿ ಹೆಚ್ಚು ಮಂದಿ ಆಸಕ್ತಿ ವಹಿಸಿದ್ದಾರೆ. ಆದ್ದರಿಂದ ಈ ಬಾರಿ ಬೆಂಗಳೂರಿನಿಂದ 50ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ದೂರ ಅಂತರದ ಓಟದ ಮಾರ್ಗದರ್ಶಕ, ‘ಓಡು ಬಾ ರನ್’ ಸಂಸ್ಥೆಯ ಸಹ ಸಂಸ್ಥಾಪಕ ದರ್ಶನ್ ಜೈನ್ ಅಭಿಪ್ರಾಯಪಡುತ್ತಾರೆ.

‘ಲಡಾಖ್ ಮ್ಯಾರಥಾನ್‌ ಮತ್ತು ಅದರಲ್ಲಿ ಪಾಲ್ಗೊಳ್ಳುವವರ ಅಭ್ಯಾಸ ವಿಶಿಷ್ಟ ರೀತಿಯಲ್ಲಿ ಇರುತ್ತದೆ. ಮ್ಯಾರಥಾನ್ ನಡೆಯುವ ನಾಲ್ಕೈದು ತಿಂಗಳ ಮೊದಲೇ ತಯಾರಿ ಮಾಡಬೇಕು. ಆಮ್ಲಜನಕದ ಕೊರತೆ ಇರುವಲ್ಲಿ ಉಸಿರಾಟವನ್ನು ಹೊಂದಿಸಿಕೊಳ್ಳುವುದು ಪ್ರಮುಖ ಸವಾಲು. ಗುಡ್ಡಬೆಟ್ಟಗಳ ಏರಿಳಿತಗಳು, ಕಠಿಣ ತಿರುವುಗಳಲ್ಲಿ ಓಡುವುದಕ್ಕೂ ಅಭ್ಯಾಸ ಮಾಡಬೇಕು. ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಕೂಡ ಮುಖ್ಯ. ಈ ಎಲ್ಲ ಕಾರಣಗಳಿಂದ ಬೆಂಗಳೂರು ಸುತ್ತಮುತ್ತ ಸಾವನದುರ್ಗ, ಉತ್ತರಹಳ್ಳಿ, ಕುದುರೆಮುಖ, ತಮಿಳುನಾಡಿನ ಕೊಡೈಕನಾಲ್‌ ಮುಂತಾದ ಕಡೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಸತಾರಾ ಹಿಲ್‌ ರನ್‌ಗೂ ಕರೆದುಕೊಂಡು ಹೋಗಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಹಾಫ್‌, ಫುಲ್ ಮತ್ತು ಚಾಲೆಂಜ್‌...

ಕೋವಿಡ್ ಪೂರ್ವದಲ್ಲಿ ಎರಡು ವರ್ಷ ಲಡಾಖ್ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿರುವ ರಮೇಶ್ ರಾವ್ ಈ ಬಾರಿ ಮತ್ತೆ ಸಜ್ಜಾಗಿದ್ದಾರೆ. ಮೊದಲ ಬಾರಿ ಹಾಫ್‌ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಿದ್ದ ಅವರು ನಂತರ ಫುಲ್‌ ಮ್ಯಾರಥಾನ್‌ಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಅತ್ಯಂತ ಕಠಿಣ ಖರ್ದುಂಗ್ ಲಾ ಚಾಲೆಂಜ್‌ಗಾಗಿ ಸಜ್ಜಾಗುತ್ತಿದ್ದಾರೆ.

‘ಕನಿಷ್ಠ 10–15 ದಿನ ಮೊದಲೇ ಅಲ್ಲಿಗೆ ಹೋಗಬೇಕಾಗುತ್ತದೆ. ಮೊದಲ ದಿನ ಕೊಠಡಿಯಲ್ಲೇ ಕುಳಿತಿರಬೇಕು. ಎರಡನೇ ದಿನದಿಂದ ಬೆಟ್ಟದಲ್ಲಿ ನಡೆಯುವ ಅಭ್ಯಾಸ ಮಾಡಬೇಕು. ನೀರಡಿಕೆ ಆಗದೆ ಇದ್ದರೂ ನೀರು ಕುಡಿಯಲೇಬೇಕು. 3 ಮತ್ತು 4ನೇ ದಿನ 3 ಕಿಮೀನಿಂದ 5 ಕಿಮೀ ವರೆಗೆ ಓಡುವ ಅಭ್ಯಾಸ ಮಾಡಬೇಕು. ಸ್ಪರ್ಧೆಗೆ ಎರಡು ದಿನ ಉಳಿದಿರುವಾಗ ವಿಶ್ರಾಂತಿ ಪಡೆದುಕೊಂಡು ಪೌಷ್ಠಿಕ ಆಹಾರ ಹೆಚ್ಚು ಸೇವಿಸಬೇಕು’ ಎಂದು ರಮೇಶ್ ರಾವ್ ಹೇಳಿದರು. 

‘ಆಮ್ಲಜನಕ ಕಡಿಮೆ ಇರುವ, ಅತ್ಯಂತ ಶೀತಲ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವುದೇ ದೊಡ್ಡ ಸವಾಲು. ಲಡಾಖ್‌ಗೆ ಸಮಾನವಾದ ವಾತಾವರಣ ದಕ್ಷಿಣ ಭಾರತದಲ್ಲಿ ಸಿಗಲಾರದು. ಇರುವುದರಲ್ಲಿ ಅತ್ಯಂತ ಸೂಕ್ತವಾದದ್ದನ್ನು ಆರಿಸಿಕೊಳ್ಳುತ್ತೇವೆ’ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಶಿಲಾಂಗ್‌ನ ಆಸಿಫ್‌ ಅಹಮ್ಮದ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.