ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆರ್ಚರಿಪಟುಗಳ ವಿಶ್ವದಾಖಲೆ

Last Updated 10 ಆಗಸ್ಟ್ 2021, 16:31 IST
ಅಕ್ಷರ ಗಾತ್ರ

ವ್ರೊಕ್ಲಾ : ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಭಾರತದ 18 ವರ್ಷದೊಳಗಿನವರ ಆರ್ಚರಿಪಟುಗಳು ಮಂಗಳವಾರ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕಾಂಪೌಂಡ್‌ ಬಾಲಕಿಯರು ಮತ್ತು ಮಿಶ್ರ ತಂಡ ವಿಭಾಗಗಳಲ್ಲಿ ಈ ದಾಖಲೆಗಳು ಅರಳಿವೆ.

ಪ್ರಿಯಾ ಗುರ್ಜರ್‌, ಪರ್ಣೀತ್‌ ಕೌರ್‌ ಮತ್ತು ರಿಧು ಸೆಂಥಿಲ್‌ಕುಮಾರ್‌ ಅವರಿದ್ದ ಬಾಲಕಿಯರ ತಂಡ ರ‍್ಯಾಂಕಿಂಗ್‌ ಸುತ್ತಿನಲ್ಲಿ ಒಟ್ಟು 2,067 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿತು. ಅಮೆರಿಕದ ಕೀನೆ ಸ್ಯಾಂಚಿಕೊ, ಬ್ರಿಯೆನ್ನಾ ಟೆವೊಡೊರ್‌ ಮತ್ತು ಸವನ್ಹಾ ವ್ಯಾಂಡರ್‌ವಿಯರ್‌ ಅವರಿದ್ದ ತಂಡ 2017ರಲ್ಲಿ ರೊಸಾರಿಯೊದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಒಟ್ಟು 2,045 ಪಾಯಿಂಟ್ಸ್‌ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು.

ರ‍್ಯಾಂಕಿಂಗ್‌ ಸುತ್ತಿನಲ್ಲಿ ಪ್ರಿಯಾ 696 ಸ್ಕೋರ್‌ ಗಳಿಸಿ ಗಮನ ಸೆಳೆದರು.

ಮಿಶ್ರ ತಂಡ ವಿಭಾಗದಲ್ಲಿ ಕುಶಾಲ್‌ ದಲಾಲ್‌ ಜೊತೆಗೂಡಿ ಆಡಿದ ಪ್ರಿಯಾ ಮೋಡಿ ಮಾಡಿದರು. ಪ್ರಿಯಾ ಮತ್ತು ಕುಶಾಲ್‌ 1,401 ಪಾಯಿಂಟ್ಸ್‌ ಗಳಿಸಿ ಡೆನ್ಮಾರ್ಕ್‌ನ ನತಾಶ ಸ್ಟುಟ್ಜ್‌ ಮತ್ತು ಮಥಿಯಸ್‌ ಫುಲ್ಲೆರ್ಟನ್‌ (1,387) ಹೆಸರಿನಲ್ಲಿದ್ದ ವಿಶ್ವದಾಖಲೆ ಅಳಿಸಿಹಾಕಿದರು.

‘ವಿಶ್ವದಾಖಲೆ ಬರೆದಿದ್ದು ಖುಷಿ ನೀಡಿದೆ. ನಾನು ಇನ್ನಷ್ಟು ಉತ್ತಮ ಸಾಮರ್ಥ್ಯ ತೋರಬಹುದಿತ್ತು. ವಿಶ್ವ ಚಾಂಪಿಯನ್‌ ಆಗುವುದು ನನ್ನ ಗುರಿ. ಅದನ್ನು ಮುಟ್ಟಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ’ ಎಂದು 17 ವರ್ಷದ ಪ್ರಿಯಾ ತಿಳಿಸಿದ್ದಾರೆ.

ಕಾಂಪೌಂಡ್‌ ತಂಡವು ಇಲ್ಲಿ ಎರಡನೇ ಸ್ಥಾನ ಪಡೆಯಿತು. ದಲಾಲ್‌ ಅವರು ವೈಯಕ್ತಿಕ ರ‍್ಯಾಂಕಿಂಗ್‌ ಸುತ್ತಿನಲ್ಲಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ರಿಕರ್ವ್‌ ವಿಭಾಗದ ಹಾಲಿ ವಿಶ್ವ ಚಾಂಪಿಯನ್‌ ಕೋಮಲಿಕಾ ಬಾರಿ, 21 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ. ಅವರು ಒಟ್ಟು 656 ಪಾಯಿಂಟ್ಸ್‌ ಕಲೆಹಾಕಿದರು. ಈ ವಿಭಾಗದಲ್ಲಿ ಭಾರತದ ಮಹಿಳಾ ತಂಡವು 1,905 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನ ಪಡೆಯಿತು.

21 ವರ್ಷದೊಳಗಿನವರ ರಿಕರ್ವ್‌ ವಿಭಾಗದಲ್ಲಿ ಭಾರತದ ಪುರುಷರ ತಂಡ 1,977 ಪಾಯಿಂಟ್ಸ್‌ ಗಳಿಸಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು. ಪಾರ್ಥ ಸಾಳಂಕೆ 663 ಪಾಯಿಂಟ್ಸ್‌ ಗಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT