ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಶಿಬಿರದ ಮೇಲೆ ಕೋವಿಡ್‌ ಕಾರ್ಮೋಡ

ಆರು ಆಟಗಾರರಿಗೆ ಕೊರೊನಾ: ಮಹಿಳಾ ತಂಡದ ತರಬೇತಿ ಅಬಾಧಿತ?
Last Updated 11 ಆಗಸ್ಟ್ 2020, 17:39 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಕಿ ತಂಡದ ಆರು ಆಟಗಾರರಲ್ಲಿ ಕೊರೊನಾ ದೃಢಪಟ್ಟ ಬಳಿಕ ತಂಡದ ತರಬೇತಿ ಶಿಬಿರದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಮಹಿಳಾ ತಂಡದ ಯಾರಲ್ಲಿಯೂ ಕೋವಿಡ್‌ ಸೋಂಕು ಪತ್ತೆಯಾಗದ ಕಾರಣ ಅವರ ಶಿಬಿರ ಮುಂದುವರಿಯುವ ಸಾಧ್ಯತೆ ಇದೆ.

ಪುರುಷರ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ಮನ್‌ದೀಪ್‌ ಸಿಂಗ್‌, ಡಿಫೆಂಡರ್‌ ಇ. ಸುರೇಂದರ್‌ ಕುಮಾರ್‌, ಜಸ್ಕರನ್‌ ಸಿಂಗ್‌, ಡ್ರ್ಯಾಗ್‌ಫ್ಲಿಕರ್‌ ವರುಣ್‌ ಕುಮಾರ್‌ ಹಾಗೂ ಗೋಲ್‌ಕೀಪರ್‌ ಕೃಷ್ಣಬಹಾದ್ದೂರ್‌ ಪಾಠಕ್‌ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಆಗಸ್ಟ್ 20ರಿಂದ ನಿಗದಿಯಾಗಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಆಟಗಾರರು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರಕ್ಕೆ ಬಂದಿದ್ದಾರೆ.

‘ಆರು ಮಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪುರುಷರ ತಂಡದ ಶಿಬಿರ ನಡೆಯುವುದು ಅನುಮಾನವಾಗಿದೆ. ರಾಜ್ಯ ಸರ್ಕಾರದಿಂದ ಇನ್ನಷ್ಟು ಆಟಗಾರರ ಪರೀಕ್ಷಾ ವರದಿಗಳು ಬರಬೇಕಿದೆ‘ ಎಂದು ಸಾಯ್‌ನ ಮೂಲಗಳು ಹೇಳಿವೆ.

‘ಮಹಿಳಾ ತಂಡದ ಎಲ್ಲ ಆಟಗಾರ್ತಿಯರ ಕೋವಿಡ್‌ ತಪಾಸಣಾ ವರದಿ ‘ನೆಗೆಟಿವ್‌’ ಬಂದಿದೆ. ಪ್ರಸ್ತುತ ಅವರು 14 ದಿನಗಳ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

ಶಿಬಿರಕ್ಕಾಗಿ ಸದ್ಯ 33 ಆಟಗಾರರು ಹಾಗೂ 24 ಆಟಗಾರ್ತಿಯರು ಬೆಂಗಳೂರಿನಲ್ಲಿದ್ದಾರೆ.

‘ಸದ್ಯ ಸೋಂಕಿತರಾಗಿರುವ ಆರು ಮಂದಿಯಲ್ಲಿ ಬಹುತೇಕರು ಪಂಜಾಬ್‌ದವರು. ದೆಹಲಿಯಿಂದ ಬಂದ 10 ಮಂದಿಯ ತಂಡದಲ್ಲಿ ಈ ಆಟಗಾರರು ಇದ್ದರು. ಎಲ್ಲ ಆಟಗಾರರ ವರದಿ ಬಂದ ಬಳಿಕ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು’ ಎಂದು ಮೂಲಗಳು ಹೇಳಿವೆ.

‘ರಾಷ್ಟ್ರೀಯ ಶಿಬಿರ ಪುನರಾರಂಭಿಸುವುದು ಕೇವಲ ಸಾಯ್‌ನ ನಿರ್ಧಾರವಾಗಿರಲಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಾವು ಪ್ರತಿ ರಾಷ್ಟ್ರೀಯ ಫೆಡರೇಷನ್‌ನಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆಯುತ್ತೇವೆ. ಶಿಬಿರವನ್ನು ಆರಂಭಿಸುವ ಕುರಿತು ಹಾಕಿ ಇಂಡಿಯಾ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ‘ ಎಂದು ಸಾಯ್‌ನ ಮೂಲಗಳು ವಿವರಿಸಿವೆ.

ಆಟಗಾರರುಬಿಡುವಿನ ವೇಳೆಯಲ್ಲಿ ಆರೋಗ್ಯ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಭಾರತದ ಏಕೈಕ ವಿಶ್ವಕಪ್ ವಿಜೇತ ಹಾಕಿ ತಂಡದ ನಾಯಕ ಅಜಿತ್ ಪಾಲ್ ಸಿಂಗ್ ಅವರು, ಪಂಜಾಬ್ ಮೂಲದ ಆಟಗಾರರು ಒಟ್ಟಿಗೆ ಪ್ರಯಾಣಿಸಿದ್ದನ್ನು ಟೀಕಿಸಿದ್ದಾರೆ. ‘ಇದರಲ್ಲಿ ಹಾಕಿ ಇಂಡಿಯಾದ ತಪ್ಪೂ ಇದೆ. ಆಟಗಾರರು ತಮ್ಮ ಮನೆಗಳಲ್ಲಿದ್ದ ವೇಳೆ ಅವರ ಮೇಲೆ ನಿಗಾ ಇಟ್ಟಿರಬೇಕಿತ್ತು‘ ಎಂದಿದ್ದಾರೆ.

‘ಹಾಕಿ ಆಟಗಾರರು ಹೆಚ್ಚು ಜವಾಬ್ದಾರಿ ಉಳ್ಳವರಾಗಿರಬೇಕು. ಅವರು ಮುಂದಿನ ಪೀಳಿಗೆಗೆ ಆದರ್ಶವಾಗಿರಬೇಕು. ಕ್ವಾರಂಟೈನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು’ ಎಂದು ಅಜಿತ್‌ ಪಾಲ್‌ ಹೇಳಿದ್ದಾರೆ.

ಮನ್‌ದೀಪ್‌ಗೆ ಉಸಿರಾಟದ ಸಮಸ್ಯೆ
ಬೆಂಗಳೂರು:
ಕೊರೊನಾ ಸೋಂಕಿತ ಹಾಕಿಆಟಗಾರಮನ್‌ದೀಪ್ಸಿಂಗ್ಅವರ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದ ಕಾರಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಮಂಗಳವಾರ ತಿಳಿಸಿದೆ.

ಸಿಂಗ್ಅವರಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿತ್ತು. ಭಾರತೀಯ ಹಾಕಿ ತಂಡದಲ್ಲಿ ಕೊರೊನಾ ಸೋಂಕು ತಗುಲಿದ ಆರನೇ ಆಟಗಾರರಾಗಿದ್ದಾರೆಸಿಂಗ್.

ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿರುವ ಸೋಂಕಿತ ಆಟಗಾರರನ್ನು ದಿನಕ್ಕೆ ನಾಲ್ಕು ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಮವಾರ ರಾತ್ರಿ ತಪಾಸಣೆ ವೇಳೆಮನ್‌ದೀಪ್ಸಿಂಗ್ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆಯಾಗುತ್ತಿರುವುದು ಕಂಡುಬಂದಿತ್ತು. ಇದು ಅವರಲ್ಲಿ ಕೊರೊನಾ ಲಕ್ಷಣಗಳು ತೀವ್ರಗೊಳ್ಳುತ್ತಿರುವ ಸೂಚನೆಯಾಗಿತ್ತು. ಹಾಗಾಗಿ ತಕ್ಷಣವೇ ಅವರನ್ನು ಎಸ್ಎಸ್‌ ಸ್ಪರ್ಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಾಧಿಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT