ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆಯ ನಡುವೆಯೂಸಾಧನೆಯ ಸಂಭ್ರಮ

Last Updated 3 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಟೂರ್ನಿ 71 ವರ್ಷ, ಕರ್ನಾಟಕ ಭಾಗಿಯಾಗಿದ್ದು 40 ವರ್ಷ. ಪ್ರಶಸ್ತಿ ಲಭಿಸಿದ್ದು00!

ರಾಷ್ಟ್ರಮಟ್ಟದ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ಸಾಧನೆಯಿದು.

ಏಳು ದಶಕಗಳಿಂದ ರಾಷ್ಟ್ರೀಯ ಮಟ್ಟದ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಇದರಲ್ಲಿ ಕರ್ನಾಟಕ ತಂಡ ನಾಲ್ಕು ದಶಕಗಳಿಂದ ಪಾಲ್ಗೊಳ್ಳುತ್ತಿದೆ. ಒಂದು ದಿನದ ಹಿಂದೆಯಷ್ಟೇ ರಾಜಸ್ಥಾನದ ಜೈಪುರದಲ್ಲಿ ಚಾಂಪಿಯನ್‌ಷಿಪ್‌ ಮುಕ್ತಾಯವಾಯಿತು. ಆದರೆ, ಒಮ್ಮೆಯೂ ಸಮಗ್ರ ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ.

ಏಕೆಂದರೆ ಟ್ರ್ಯಾಕ್‌ ಸೈಕ್ಲಿಂಗ್‌ನಂಥ ಸವಾಲಿನ ಸ್ಪರ್ಧೆಗೆ ಸಜ್ಜಾಗಲು ವೆಲೊಡ್ರೊಮ್‌ನಲ್ಲಿ ಕಠಿಣ ಅಭ್ಯಾಸ ಮಾಡಬೇಕು. ರಾಜ್ಯದಲ್ಲಿ ಸುಸಜ್ಜಿತವಾಗಿ ವೆಲೊಡ್ರೊಮ್ ಸೌಲಭ್ಯವಿಲ್ಲ. ವಿಜಯಪುರದಲ್ಲಿರುವ ವೆಲೊಡ್ರೊಮ್‌ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿಗೆ ಅಗತ್ಯವಿರುವಷ್ಟು ವೈಜ್ಞಾನಿಕವಾಗಿಲ್ಲ. ಆದ್ದರಿಂದ ರಾಜ್ಯದ ಸೈಕ್ಲಿಸ್ಟ್‌ಗಳು ವೆಲೊಡ್ರೊಮ್‌ನಲ್ಲಿ ಅಭ್ಯಾಸಕ್ಕಾಗಿ ಹೊರ ರಾಜ್ಯಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕೊರತೆಯ ನಡುವೆಯೂ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಸೈಕ್ಲಿಸ್ಟ್‌ಗಳು ಸಾಧನೆಯ ಗರಿ ಮೂಡಿಸಿದ್ದಾರೆ.

ಈ ಬಾರಿಯ ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ಕರ್ನಾಟಕ ಒಟ್ಟು 13 (ಶುಕ್ರವಾರದ ಅಂತ್ಯಕ್ಕೆ) ಪದಕಗಳನ್ನು ಜಯಿಸಿದ್ದಾರೆ.
11 ಬಾಲಕರು ಹಾಗೂ 13 ಬಾಲಕಿಯರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದಭಾಗ್ಯಶ್ರೀ ಮಠಪತಿ, ಸಚಿನ್‌ ರಂಜಣಗಿ, ನಾಗರಾಜ ಸೋಮಗೊಂಡ ಅವರು ಗುವಾಹಟಿಯಲ್ಲಿ ಖೇಲೊ ಇಂಡಿಯಾದಲ್ಲಿ ವೆಲೊಡ್ರಮ್‌ನಲ್ಲಿ ಅಭ್ಯಾಸ ಮಾಡಿ ರಾಷ್ಟ್ರೀಯ ಟೂರ್ನಿಗೆ ಸಜ್ಜಾಗಿದ್ದರು.

ದೆಹಲಿಯ ಭಾರತ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಸೈಕ್ಲಿಂಗ್‌ ತರಬೇತಿ ಅಕಾಡೆಮಿಯಲ್ಲಿ ಜಮಖಂಡಿ ತಾಲ್ಲೂಕಿನದಾನಮ್ಮ ಚಿಚಖಂಡಿ, ಮಧು ಕಾಡಾಪುರ, ಬೆಂಗಳೂರಿನಕೀರ್ತಿ ರಂಗಸ್ವಾಮಿ, ವಿಜಯಪುರದಅಂಕಿತಾ ರಾಠೋಡ, ಬಾಗಲಕೋಟೆ ಜಿಲ್ಲೆಯವೆಂಕಪ್ಪ ಕೆಂಗಲಗುತ್ತಿ, ವಿಜಯಪುರದಗಣೇಶ ಕುಡಿಗಾನೂರ ವೆಲೊಡ್ರೊಮ್‌ನಲ್ಲಿ ಅಭ್ಯಾಸ ಮಾಡಿದ್ದರು.‌

ಕರ್ನಾಟಕ ತಂಡ ರೋಡ್‌ ಸೈಕ್ಲಿಂಗ್‌ ವಿಭಾಗದಲ್ಲಿ ಸುಮಾರು 20 ಬಾರಿ ಚಾಂಪಿಯನ್‌ ಆಗಿದೆ. ಮೌಂಟೇನ್‌ ಬೈಕ್‌ ಚಾಂಪಿಯನ್‌ಷಿಪ್‌ ಇದುವರೆಗೂ 15 ಬಾರಿ ನಡೆದಿದ್ದು, ಎಂಟು ಸಲ ಕರ್ನಾಟಕವೇ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ವಿಭಾಗದಲ್ಲಿ ಮಾಡಿದ ಸಾಧನೆಯನ್ನು ಟ್ರ್ಯಾಕ್‌ನಲ್ಲಿ ಮಾಡಲು ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ ಸಾಧ್ಯವಾಗುತ್ತಿಲ್ಲ.

‘ನಮ್ಮಲ್ಲಿ ವೈಜ್ಞಾನಿಕವಾದ ವೆಲೊಡ್ರೊಮ್‌ ಇಲ್ಲದ ಕಾರಣ ಅಭ್ಯಾಸ ಮಾಡಲು ಸೈಕ್ಲಿಸ್ಟ್‌ಗಳಿಗೆ ಅವಕಾಶವಿಲ್ಲ. ಖೇಲೊ ಇಂಡಿಯಾ, ಭಾರತ ಕ್ರೀಡಾ ಪ್ರಾಧಿಕಾರ ಹೀಗೆ ವಿವಿಧೆಡೆ ತರಬೇತಿ ಪಡೆಯುತ್ತಿರುವ ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಮಾತ್ರ ವೆಲೊಡ್ರೊಮ್‌ನಲ್ಲಿ ಅಭ್ಯಾಸಕ್ಕೆ ಅವಕಾಶ ಸಿಗುತ್ತಿದೆ. ಕರ್ನಾಟಕದಲ್ಲಿಯೂ ಈ ಸೌಲಭ್ಯ ಸಿಕ್ಕರೆ ಟ್ರ್ಯಾಕ್‌ನಲ್ಲಿ ಚಾಂಪಿಯನ್‌ ಆಗುವುದು ನಮ್ಮ ಸೈಕ್ಲಿಸ್ಟ್‌ಗಳಿಗೆ ಕಷ್ಟವೇನಲ್ಲ’ ಎಂದು ಕರ್ನಾಟಕ ಅಮೆಚೂರ್ ಸೈಕ್ಲಿಂಗ್‌ ಸಂಸ್ಥೆ ಕಾರ್ಯದರ್ಶಿ ಶ್ರೀಶೈಲ ಕುರಣಿ ಹೇಳುತ್ತಾರೆ.

ಈ ಬಾರಿ ಉತ್ತಮ ಸಾಧನೆ:ಸೌಲಭ್ಯದ ಕೊರತೆಯ ನಡುವೆಯೂ ರಾಜ್ಯದ ಸೈಕ್ಲಿಸ್ಟ್‌ಗಳು ಟ್ರ್ಯಾಕ್‌ ಸೈಕ್ಲಿಂಗ್‌ನಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಾರೆ.

2006ರಲ್ಲಿ ವಿಜಯಪುರದಲ್ಲಿ ಟ್ರ್ಯಾಕ್‌ ಸೈಕ್ಲಿಂಗ್‌ ರಾಷ್ಟ್ರೀಯ ಟೂರ್ನಿ ನಡೆದಿತ್ತು. ಆಗ ಕರ್ನಾಟಕ ತಂಡಕ್ಕೆ 16 ಪದಕ ಬಂದಿದ್ದವು. ಇದುವರೆಗಿನ ಟೂರ್ನಿಯಲ್ಲಿ ರಾಜ್ಯದ ಸೈಕ್ಲಿಸ್ಟ್‌ಗಳ ಶ್ರೇಷ್ಠ ಸಾಧನೆಯಿದು. ಹೋದ ವರ್ಷದ ಟೂರ್ನಿಯಲ್ಲಿ ಒಂಬತ್ತು ಪದಕಗಳನ್ನು ಜಯಿಸಿದ್ದರು. ಕರ್ನಾಟಕ, ಪುಣೆ, ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಒಟ್ಟಿಗೆ ವೆಲೊಡ್ರೊಮ್‌ ನಿರ್ಮಾಣ ಕಾರ್ಯ ಆರಂಭವಾಯಿತು. ಅಧಿಕೃತವಾಗಿ ಇನ್ನೂ ಉದ್ಘಾಟನೆಯಾಗಿಲ್ಲ. ಚಂದರಗಿ ಕ್ರೀಡಾಶಾಲೆಯಲ್ಲಿ ವೆಲೊಡ್ರೊಮ್‌ ನಿರ್ಮಾಣ ಹಂತದಲ್ಲಿದೆ.

ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ 14 ವರ್ಷದ ಒಳಗಿನವರ ಬಾಲಕರ 200 ಮೀಟರ್‌ ಫ್ಲೈಯಿಂಗ್‌ ಸ್ಟ್ರಿಂಟ್‌ನಲ್ಲಿ 12.8 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಮಲ್ಲಿಕಾರ್ಜುನ ವಿಜಯಪುರದಲ್ಲಿರುವ ವೆಲೊಡ್ರೊಮ್‌ನಲ್ಲಿ ಅಭ್ಯಾಸ ಮಾಡಿ ಪದಕ ಜಯಿಸಿದ್ದು ವಿಶೇಷ.

ಸೀಮಿತವೇಕೆ?: ಸೈಕ್ಲಿಂಗ್‌ ಎಂದಾಕ್ಷಣ ನೆನಪಾಗುವುದೇ ಉತ್ತರ ಕರ್ನಾಟಕ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಮತ್ತು ಹಾವೇರಿ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಕ್ರೀಡೆಗೆ ಪ್ರಾಮುಖ್ಯತೆ ಲಭಿಸುತ್ತದೆ.

ಆದರೆ, ಉಳಿದ ಜಿಲ್ಲೆಗಳಲ್ಲಿ ಸೈಕ್ಲಿಂಗ್‌ ಎಂದರೆ, ಇದು ಯಾವ ಕ್ರೀಡೆ? ಎಂದು ಪ್ರಶ್ನಿಸುವವರೂ ಇದ್ದಾರೆ. ಆದ್ದರಿಂದ ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೈಕ್ಲಿಂಗ್‌ ಅಭ್ಯಾಸಕ್ಕೆ ಸೌಲಭ್ಯ ಒದಗಿಸಿಕೊಡಬೇಕು ಮತ್ತು ಜಿಲ್ಲೆಗೆ ಒಬ್ಬ ಕೋಚ್‌ ನೇಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

‘ಬಹುತೇಕ ಜಿಲ್ಲೆಗಳಲ್ಲಿ ಸೈಕ್ಲಿಂಗ್‌ಗೆ ವೃತ್ತಿಪರ ತರಬೇತಿ ಸಿಗುತ್ತಿಲ್ಲ. ಬಹುತೇಕರು ಹವ್ಯಾಸಕ್ಕಾಗಿ ಮಾತ್ರ ಸೈಕಲ್‌ ಓಡಿಸುತ್ತಾರೆ. ಆದ್ದರಿಂದ ಈ ಕ್ರೀಡೆಗೆ ವೃತ್ತಿಪರ ತರಬೇತಿ ಅಗತ್ಯವಿದೆ’ ಎಂದು ಕುರಣಿ ಹೇಳುತ್ತಾರೆ.

ಕಡಿಮೆಯಾದ ನೌಕರಿ ಅವಕಾಶ; ಕುಸಿದ ಆಸಕ್ತಿ

ಸೈಕ್ಲಿಂಗ್‌ನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಜಯಿಸಿದವರಿಗೆ ವಿವಿಧ ಕಂಪನಿಗಳಲ್ಲಿ, ಬ್ಯಾಂಕ್‌ಗಳಲ್ಲಿ ನೌಕರಿ ಲಭಿಸುತ್ತಿದ್ದವು. ಆದರೆ, ಹತ್ತು ವರ್ಷಗಳ ಹಿಂದೆ ಬ್ಯಾಂಕ್‌ಗಳು ಕ್ರೀಡಾಪಟುಗಳ ನೇಮಕಾತಿ ರದ್ದು ಮಾಡಿವೆ. ಈಗ ನೌಕರಿ ಅವಕಾಶ ಇರುವುದು ರೈಲ್ವೆ ಇಲಾಖೆಯಲ್ಲಿ ಮಾತ್ರ. ಆದ್ದರಿಂದ ಕಠಿಣ ಸವಾಲಿನ ಈ ಕ್ರೀಡೆಯತ್ತ ಆಸಕ್ತಿ ತೋರುವವರ ಸಂಖ್ಯೆ ಕಡಿಮೆಯಾಗಿದೆ.

ಪ್ರಾಥಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುವಾಗ ಸೈಕ್ಲಿಂಗ್‌ ತರಬೇತಿ ಆರಂಭಿಸುವ ಮಕ್ಕಳು, ನಂತರ ಪಿಯುಸಿ ಅಥವಾ ಪದವಿ ಓದುವ ತನಕ ಈ ಕ್ರೀಡೆಯಲ್ಲಿ ಮುಂದುವರಿಯುತ್ತಾರೆ. ಕ್ರೀಡೆಯ ಜೊತೆಗೆ ಓದಿಗೂ ಗಮನ ಕೊಡಬೇಕಾಗುತ್ತದೆ. ಆಗ ನೌಕರಿಯ ಅವಕಾಶಗಳು ಸಿಗುವುದಿಲ್ಲ. ಅತ್ತ ನೌಕರಿಯೂ ಇಲ್ಲ, ಇತ್ತ ವಿದ್ಯಾಭ್ಯಾಸವೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಬಹುತೇಕ ಸೈಕ್ಲಿಸ್ಟ್‌ಗಳು ‘ನಮಗೆಲ್ಲ ಯಾಕೆ ಈ ಕ್ರೀಡೆ’ ಎಂದು ದೂ ಉಳಿದು ಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT