ಭಾನುವಾರ, ಮೇ 16, 2021
22 °C

PV Web Exclusive: ತನುವೊಂದು, ಮನವೊಂದು; ಗುರಿಯೂ ಒಂದೇ...

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವಾರ ಭಾರತದ ಆರ್ಚರಿ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಯಿತು. ವಿಶ್ವಕಪ್ ಒಂದರಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದು ದೇಶದ ಆರ್ಚರಿ ಪಟುಗಳ ಸಂಭ್ರಮಿಸಿದರು. ಮಧ್ಯ ಅಮೆರಿಕದ ದೇಶ  ಗ್ವಾಟೆಮಾಲಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತದ ಪಾಲಿಗೆ ಈ ವಿಶ್ವಕಪ್‌ ಮತ್ತೊಂದು ರೀತಿಯಲ್ಲೂ ವಿಶೇಷವಾಗಿತ್ತು. ಆರ್ಚರಿ ದಂಪತಿ ಅತನು ದಾಸ್ ಮತ್ತು ದೀಪಿಕಾ ಕುಮಾರಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ಗಮನ ಸೆಳೆದಿದ್ದರು.

ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಶ್ವ ಆರ್ಚರಿಯಲ್ಲಿ ನಿರಂತರವಾಗಿ ಕೇಳಿಬರುತ್ತಿರುವ ಹೆಸರು ಅತನು ದಾಸ್ ಮತ್ತು ದೀಪಿಕಾ ಅವರದು. ಮಹಿಳೆಯರ ವಿಭಾಗದಲ್ಲಿ ವಿಶ್ವದ ಒಂದನೇ ಕ್ರಮಾಂಕದವರೆಗೂ ಏರಿದವರು ದೀಪಿಕಾ. ಈ ಹಿಂದೆ ಎರಡು ಬಾರಿ ವಿಶ್ವಕಪ್‌ನಲ್ಲಿ ಚಿನ್ನ ಗಳಿಸಿ ಗಮನ ಸೆಳೆದಿದ್ದರು. ಅತನು ದಾಸ್ ಅವರಿಗೆ ವಿಶ್ವಕಪ್‌ನಲ್ಲಿ ಇದು ಮೊದಲನೇ ವೈಯಕ್ತಿಕ ಚಿನ್ನ.

ಈ ಜೋಡಿ ಹೆಚ್ಚು ಗಮನ ಸೆಳೆದದ್ದು ಕಳೆದ ವರ್ಷದ ಮೇ ತಿಂಗಳಲ್ಲಿ. ಕೊರೊನಾ ಸಂಕಷ್ಟ ಕಾಲದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೇವಲ 50 ಆಹ್ವಾನ ಪತ್ರಿಕೆಗಳನ್ನು ಅಚ್ಚು ಮಾಡಿದ್ದರು. ಮದುವೆಗೆ 100 ಮಂದಿ ಸೇರಿದ್ದರು. ಆದರೆ ಅವರನ್ನು ಎರಡು ತಂಡಗಳಾಗಿ ವಿಭಜಿಸಿ ಒಳಗೆ ಪ್ರವೇಶಿಸುವಂತೆ ವ್ಯವಸ್ಥೆ ಮಾಡಿ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು.

ಬದುಕಿನಲ್ಲೂ ಇಂಥ ಶಿಸ್ತು ಅವರ ಕೈ ಹಿಡಿದಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಅಭ್ಯಾಸ ಮತ್ತು ಕಠಿಣ ಪರಿಶ್ರಮವನ್ನು ಮಂದುವರಿಸಿದ್ದರಿಂದಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಿದೆ. ಈ ಮೂಲಕ ಒಲಿಂಪಿಕ್‌ ಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಅಪರೂಪದ ಜೋಡಿ ಎನಿಸಿಕೊಂಡಿದ್ದಾರೆ.

‘ನನ್ನ ಒಲವು–ನಿಲುವುಗಳನ್ನು ಆಕೆ ಚೆನ್ನಾಗಿ ಬಲ್ಲಳು, ಆಕೆಯ ಆಸೆ–ಆಕಾಂಕ್ಷೆಗಳು ಏನೆಂದು ನನಗೆ ಚೆನ್ನಾಗಿ ಗೊತ್ತು. ಜೊತೆಯಾಗಿ ಪ್ರಯಾಣಿಸುತ್ತೇವೆ, ಒಟ್ಟಿಗೆ ತರಬೇತಿ ಪಡೆಯುತ್ತೇವೆ; ಸ್ಪರ್ಧೆಗಿಳಿಯುವುದೂ ಜೊತೆಗೆ, ಗೆಲ್ಲುವುದೂ ಜೊತೆಗೆ’ ಎನ್ನುತ್ತಾರೆ ಅತನು.

ಕೋಲ್ಕತ್ತದ ಅತನು ದಾಸ್ ಮತ್ತು ರಾಂಚಿಯ ದೀಪಿಕಾ ಅವರ ನಡುವೆ ಪ್ರೇಮ ಉದಯಿಸಿದ್ದು ಆರ್ಚರಿ ಅಂಗಣದಲ್ಲೇ. ಜಮ್ಶೆಡ್‌ಪುರದಲ್ಲಿರುವ ಟಾಟಾ ಆರ್ಚರಿ ಅಕಾಡೆಮಿಯಲ್ಲಿ ಅಪ್ರೆಂಟಿಸ್‌ ಆಗಿದ್ದ ವೇಳೆ ಪರಿಚಯವಾದ ಇವರಿಬ್ಬರು 2013ರಲ್ಲಿ ಚೀನಾದಲ್ಲಿ ನಡೆದ ವಿಶ್ವಕಪ್‌ನ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು. ನಂತರ ಪ್ರೀತಿ ಮೂಡಿತು.

ಆರ್ಚರಿಯಲ್ಲಿ ದೀಪಿಕಾ ಈಗಾಗಲೇ ಅತನು ಅವರಿಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ. 2012ರ ಲಂಡನ್‌ ಮತ್ತು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ಅತನು 2016ರಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಇದ್ಯಾವುದೂ ಪ್ರೇಮ ಮತ್ತು ಮದುವೆಗೆ ಅಡ್ಡಿಯಾಗಲಿಲ್ಲ. ರಕರ್ವ್ ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.

14ನೇ ವಯಸ್ಸಿನಲ್ಲೇ ಆರ್ಚರಿ ಕಣಕ್ಕೆ ಇಳಿದ ಅತನು 2008ರಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಪದಾರ್ಪಣೆ ಮಾಡಿದ್ದರು. ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ತಲಾ ಒಂದು ಬೆಳ್ಳಿ ಮತ್ತು ಕಂಚು, ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಜಾಗತಿಕ ವಿಶ್ವವಿದ್ಯಾಲಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ, ವಿಶ್ವಕಪ್‌ನಲ್ಲಿ ಈ ಬಾರಿಯ ಚಿನ್ನ, ಈ ಹಿಂದೆ ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕ, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಂಚಿನ ಪದಕ ಗಳಿಸಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿದ್ದಾರೆ.

ದೀಪಿಕಾ ಸದ್ಯ ವಿಶ್ವದಲ್ಲಿ ಒಂಬತ್ತನೇ ರ‍್ಯಾಂಕಿಂಗ್ ಹೊಂದಿರುವ ಕ್ರೀಡಾಪಟು. ವಿಶ್ವಕಪ್‌ನಲ್ಲಿ ಒಟ್ಟಾರೆ ಏಳು ಚಿನ್ನ, 13 ಬೆಳ್ಳಿ ಮತ್ತು ಐದು ಕಂಚಿನ ಪದಕ ಗಳಿಸಿರುವ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಎರಡು ಚಿನ್ನ, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಸೇರಿದಂತೆ ಒಟ್ಟು ಆರು ಪದಕ, ಏಷ್ಯನ್ ಗೇಮ್ಸ್‌ನಲ್ಲಿ ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು