ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paralympics: ದೇವೇಂದ್ರ ಝಝಾರಿಯಾ, ಯೋಗೇಶ್‌ಗೆ ಬೆಳ್ಳಿ, ಸುಂದರ್‌ ಸಿಂಗ್‌ಗೆ ಕಂಚು

Last Updated 30 ಆಗಸ್ಟ್ 2021, 4:44 IST
ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ ಭಾರತಕ್ಕೆ ಶುಭ ದಿನ. ಜಾವೆಲಿನ್ ಥ್ರೋದಲ್ಲಿ ಎರಡು ಬಾರಿ ಚಿನ್ನದ ಪದಕ ವಿಜೇತ ದೇವೇಂದ್ರ ಝಝಾರಿಯಾ ಅವರು ಈ ಬಾರಿ ಬೆಳ್ಳಿ ಪದಕ ಜಯಿಸಿದ್ದಾರೆ. ಪುರುಷರ ‘ಎಫ್‌ 56’ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥೂನಿಯಾಗೆ ಬೆಳ್ಳಿ ಪದಕ ದೊರೆತಿದೆ.

ಪುರುಷರ ಜಾವೆಲಿನ್‌ ಥ್ರೋ ‘ಎಫ್‌46’ರಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ಗೆದ್ದಿದ್ದಾರೆ.

ಇದಕ್ಕೂ ಮುನ್ನ ಮಹಿಳೆಯರ 10 ಮೀಟರ್ ಏರ್‌ ರೈಫಲ್‌ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಅವನಿ ಲೇಖರಾ ಚಿನ್ನದ ಪದಕ ಗೆದ್ದುಕೊಂಡಿದ್ದರು.

ಇದರೊಂದಿಗೆ ಇಂದು (ಸೋಮವಾರ) ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ದೊರೆತಿದೆ.

40 ವರ್ಷ ವಯಸ್ಸಿನ ಝಝಾರಿಯಾ 2004 ಮತ್ತು 2016ರಲ್ಲಿ ಚಿನ್ನದ ಪದಕ ಜಯಿಸಿದ್ದರು.

ಝಝಾರಿಯಾ ಅವರು ತಮ್ಮ 8ನೇ ವಯಸ್ಸಿನಲ್ಲಿ ಮರ ಏರುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಎಡಗೈ ಕಳೆದುಕೊಂಡಿದ್ದರು. ಇವರು ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮದೇ ಹಳೆಯ ದಾಖಲೆಯನ್ನು (63.97 ಮೀ) ಮತ್ತಷ್ಟು ಉತ್ತಮಪಡಿಸಿಕೊಂಡರು. ಆದರೆ, ಶ್ರೀಲಂಕಾದ ದಿನೇಶ್ ಪ್ರಿಯನ್ ಹೆರಾತ್‌ (67.79 ಮೀ) ದೂರ ಎಸೆಯುವ ಮೂಲಕ ಹೊಸ ದಾಖಲೆ ಬರೆದರು.

25 ವರ್ಷ ವಯಸ್ಸಿನ ಗುರ್ಜರ್ ಅವರು 2015ರಲ್ಲಿ ತಮ್ಮ ಸ್ನೇಹಿತನ ಮನೆಗೆ ತೆರಳಿದ್ದಾಗ ಲೋಹದ ಹಲಗೆ ಬಿದ್ದು ಎಡಗೈ ಕಳೆದುಕೊಂಡಿದ್ದರು. 64.01 ಮೀ ದೂರ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದರು.

ಜೈಪುರ ಮೂಲದ ಗುರ್ಜರ್ 2017ರಲ್ಲಿ ಮತ್ತು 2019ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. 2018ರಲ್ಲಿ ನಡೆದ ಜಕಾರ್ತ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.

ಡಿಸ್ಕಸ್ ಥ್ರೋದಲ್ಲಿ ಬೆಳ್ಳಿ ವಿಜೇತ ಯೋಗೇಶ್ ಕಥೂನಿಯಾ ತಮ್ಮ ಕೊನೆಯ ಮತ್ತು ಆರನೇ ಯತ್ನದಲ್ಲಿ 44.38 ಮೀ ದೂರ ಎಸೆದರು.

2016ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ನಾಲ್ಕು ಪದಗಳನ್ನು ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT