ಸೋಮವಾರ, ಡಿಸೆಂಬರ್ 6, 2021
27 °C

PV Web Exclusive | ಆಗ ‘ಅರ್ಜುನ’ಈಗ ‘ದ್ರೋಣಾಚಾರ್ಯ’...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ದಶಕದ ಕಾಲ ಭಾರತದ ಹಾಕಿಯಲ್ಲಿ ಮಿನುಗಿದ್ದ ದಿಗ್ಗಜ ಆಟಗಾರ, ಈಗ ‘ದ್ರೋಣಾಚಾರ್ಯ’ನಾಗಿ ಎಳೆಯರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಅನಾಥ ಮಕ್ಕಳಿಗೆ ಉಚಿತವಾಗಿ ಹಾಕಿಯ ಪಾಠಗಳನ್ನು ಹೇಳಿಕೊಟ್ಟು ಅವರ ಬದುಕಲ್ಲೂ ಹೊಸ ಬೆಳಕು ಮೂಡುವಂತೆ ಮಾಡಿರುವ ಆ ಸಾಧಕ ಕರ್ನಾಟಕದ ಜೂಡ್‌ ಫೆಲಿಕ್ಸ್.

ಬೆಂಗಳೂರಿನಲ್ಲಿ ನೆಲೆಸಿರುವ ಫೆಲಿಕ್ಸ್‌, ಒಂಬತ್ತನೇ ವಯಸ್ಸಿನಲ್ಲೇ ಸ್ಟಿಕ್‌ ಹಿಡಿದು ಹಾಕಿ ಅಂಗಳಕ್ಕಿಳಿದಿದ್ದರು. 1983ರಿಂದ 1995ರ ಅವಧಿಯಲ್ಲಿ ಭಾರತದ ಪರ 250ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ಹಿರಿಮೆ ಹೊಂದಿದ್ದಾರೆ. 1988ರ ಸೋಲ್‌ ಹಾಗೂ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಚ್ಚುಗಾರಿಕೆ ಅವರದ್ದು.

ಪಾಕಿಸ್ತಾನದ ಲಾಹೋರ್‌ (1990) ಮತ್ತು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ (1994) ಆಯೋಜನೆಯಾಗಿದ್ದ ಹಾಕಿ ವಿಶ್ವಕಪ್‌ಗಳಲ್ಲೂ ಫೆಲಿಕ್ಸ್‌ ಕೈಚಳಕ ತೋರಿದ್ದರು. ಇದೇ ಅವಧಿಗಳಲ್ಲಿ ಕ್ರಮವಾಗಿ ಬೀಜಿಂಗ್‌ ಹಾಗೂ ಹಿರೋಶಿಮಾಗಳಲ್ಲಿ ನಿಗದಿಯಾಗಿದ್ದ ಏಷ್ಯನ್‌ ಕ್ರೀಡಾಕೂಟಗಳು ಮತ್ತು ಪರ್ತ್‌ (1985), ಪಾಕಿಸ್ತಾನ (1987), ಬರ್ಲಿನ್‌ನಲ್ಲಿ (1989) ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಗಳಲ್ಲೂ ಮಿಂಚಿದ್ದ ಅವರು ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದೆತ್ತರಕ್ಕೆ ಹಾರಿಸಿದ್ದರು.

ಅಪ್ರತಿಮ ಆಟಗಾರನಾಗಿಯಷ್ಟೇ ಅಲ್ಲ, ಚಾಣಾಕ್ಷ ನಾಯಕನಾಗಿಯೂ ಫೆಲಿಕ್ಸ್ ಹೆಜ್ಜೆಗುರುತು ಮೂಡಿಸಿದ್ದಾರೆ. ಅವರು 1993ರಿಂದ 1995ರವರೆಗೂ ಭಾರತ ತಂಡದ ಸಾರಥ್ಯ ವಹಿಸಿದ್ದರು. 1994ರ ವಿಶ್ವಕಪ್‌ ಹಾಗೂ ಏಷ್ಯನ್‌ ಕ್ರೀಡಾಕೂಟದಲ್ಲೂ ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದರು. ಬೆಂಗಳೂರಿನ ಈ ಹಾಕಿ ‘ಹೀರೊ’ಗೆ 1994ರಲ್ಲಿ ‍ಪ್ರತಿಷ್ಠಿತ ‘ಅರ್ಜುನ’ ಪುರಸ್ಕಾರ ಅರಸಿ ಬಂದಿತ್ತು.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) 1995ರಲ್ಲಿ ಪ್ರಕಟಿಸಿದ್ದ ಏಳು ಮಂದಿ ವಿಶ್ವಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಫೆಲಿಕ್ಸ್‌, ಎಫ್‌ಐಎಚ್‌ ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿಯೂ (2000–2004) ಕೆಲಸ ಮಾಡಿದ್ದರು.

ಕೋಚಿಂಗ್ ಪಯಣದ ಹಾದಿ..

ಹಾಕಿ ಬದುಕಿಗೆ ವಿದಾಯ ಹೇಳಿದ ನಂತರ ಫೆಲಿಕ್ಸ್‌ ಸುಮ್ಮನೆ ಕೂರಲಿಲ್ಲ. ತಮ್ಮಲ್ಲಿನ ಅಗಾಧ ಅನುಭವವನ್ನು ಎಳೆಯರಿಗೆ ಧಾರೆ ಎರೆಯಲು ನಿರ್ಧರಿಸಿದರು. ಇದಕ್ಕಾಗಿ ಅವರು ಆಯ್ದುಕೊಂಡಿದ್ದು ಕೋಚಿಂಗ್‌ ವೃತ್ತಿ. 1996ರಲ್ಲಿ ಮಲೇಷ್ಯನ್‌ ಲೆವಲ್‌–1 ಕೋಚಿಂಗ್‌ ಕೋರ್ಸ್‌, 1997ರಲ್ಲಿ ಎಫ್‌ಐಎಚ್‌ ಫೈನಲ್‌ ಕೋಚಿಂಗ್‌ ಕೋರ್ಸ್‌ (ಇಂಗ್ಲೆಂಡ್‌ನಲ್ಲಿ), ಅದೇ ವರ್ಷ ಎಫ್‌ಐಎಚ್‌ ಪ್ರಿಲಿಮಿನರಿ ಕೋರ್ಸ್‌ (ಕ್ವಾಲಾಲಂಪುರದಲ್ಲಿ), 2003ರಲ್ಲಿ ಎನ್‌ಸಿಎಪಿ ಸಿಂಗಪುರ ಲೆವಲ್‌–1, 2005ರಲ್ಲಿ ಫಂಕಿ ಹಾಕಿ ಕೋರ್ಸ್‌ (ಸಿಂಗಪುರ) ಮುಗಿಸಿ ಜ್ಞಾನ ಭಂಡಾರವನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಫೆಲಿಕ್ಸ್‌ ಅವರ ಕ್ರೀಡಾಬದುಕಿನ ಎರಡನೇ ಅಧ್ಯಾಯ ತೆರೆದುಕೊಂಡಿದ್ದು 2001ರಲ್ಲಿ. ಆ ವರ್ಷ ಅವರು ಸಿಂಗಪುರ ರಿಕ್ರಿಯೇಷನ್‌ ಕ್ಲಬ್‌ನ ಮುಖ್ಯಕೋಚ್‌ ಆಗಿ ನೇಮಕಗೊಂಡರು. ಬರೋಬ್ಬರಿ 10 ವರ್ಷಗಳ ಕಾಲ ಆ ಕ್ಲಬ್‌ ಜೊತೆ ಕೆಲಸ ಮಾಡಿದ ಅವರಿಗೆ ಎರಡು ಬಾರಿ (2005 ಮತ್ತು 2007) ಸಿಂಗಪುರ ಸ್ಪೋರ್ಟ್ಸ್‌ ಕೌನ್ಸಿಲ್‌ ನೀಡುವ ‘ವರ್ಷದ ಶ್ರೇಷ್ಠ ಕೋಚ್‌’ ಗೌರವ ಒಲಿದಿತ್ತು.

2014 ಫೆಲಿಕ್ಸ್‌ ಪಾಲಿಗೆ ಸ್ಮರಣೀಯ. ಆ ವರ್ಷದ ಏಪ್ರಿಲ್‌ನಲ್ಲಿ ಅವರು ಭಾರತ ಸೀನಿಯರ್‌ ಪುರುಷರ ಹಾಕಿ ತಂಡದ ಕೋಚ್‌ ಹುದ್ದೆಗೇರಿದ್ದರು. 2015ರ ಆಗಸ್ಟ್‌ವರೆಗೂ ಆ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ತಂಡವು 2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು. ಅದೇ ವರ್ಷ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಬೆಡಗು ಮೂಡಿಸಿತ್ತು. 2015ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿತ್ತು.

ಅಷ್ಟಕ್ಕೇ ಅವರ ಪಯಣ ಮುಗಿಯಲಿಲ್ಲ. ಹಿರಿಯರು ತೆರೆಗೆ ಸರಿಯುತ್ತಿರುವುದನ್ನು ಮನಗಂಡ ಹಾಕಿ ಇಂಡಿಯಾ (ಎಚ್‌ಐ) ಹೊಸ ಪ್ರತಿಭೆಗಳನ್ನು ಹೆಕ್ಕಲು ಅಣಿಯಾಯಿತು. ಈ ಕಾರ್ಯಕ್ಕೆ ಆಯ್ಕೆಮಾಡಿಕೊಂಡಿದ್ದು ಫೆಲಿಕ್ಸ್‌ ಅವರನ್ನು. 2017ರ ಜೂನ್‌ನಲ್ಲಿ ಜೂನಿಯರ್‌ ಪುರುಷರ ತಂಡದ ತರಬೇತುದಾರರಾಗಿ ನೇಮಕಗೊಂಡ ಫೆಲಿಕ್ಸ್‌, ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಲಿಲ್ಲ. ಅವರ ಗರಡಿಯಲ್ಲಿ ಪಳಗಿದ್ದ ತಂಡವು 2017ರಲ್ಲಿ ನಡೆದಿದ್ದ ಸುಲ್ತಾನ್ ಜೋಹರ್‌ ಕಪ್‌ ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು.

ಎರಡು ದಶಕಗಳ (21 ವರ್ಷ) ಕೋಚಿಂಗ್‌ ಪಯಣದಲ್ಲಿ ಹಲವು ಪ್ರತಿಭಾನ್ವಿತರನ್ನು ಪ್ರವರ್ಧಮಾನಕ್ಕೆ ತಂದಿರುವ 55 ವರ್ಷ ವಯಸ್ಸಿನ ಫೆಲಿಕ್ಸ್‌ ಅವರಿಗೆ ಈ ಸಲದ ‘ದ್ರೋಣಾಚಾರ್ಯ’ ಪುರಸ್ಕಾರ ಸಂದಿದೆ.

ಅನಾಥ ಮಕ್ಕಳ ಪಾಲಿನ ಆಶಾಕಿರಣ

ಫೆಲಿಕ್ಸ್‌ ಅವರು ಬೆಂಗಳೂರಿನ ಕುಕ್‌ ಟೌನ್‌ನಲ್ಲಿರುವ ಸೇಂಟ್‌ ಮೇರಿಸ್‌ ಅನಾಥಾಶ್ರಮದ ಮಕ್ಕಳಲ್ಲೂ ಹಾಕಿ ಪ್ರೀತಿ ಮೊಳೆಯುವಂತೆ ಮಾಡಿ ಅವರ ಪಾಲಿನ ಆಶಾಕಿರಣವಾಗಿದ್ದಾರೆ. ‌  

‘ಆರಂಭದಲ್ಲಿ ಅನಾಥಾಶ್ರಮದಲ್ಲಿದ್ದ 30ರಿಂದ 40 ಮಂದಿಗಷ್ಟೇ ಹಾಕಿ ತರಬೇತಿ ನೀಡುತ್ತಿದ್ದೆ. ಈಗ ಈ ಸಂಖ್ಯೆ 100ರ ಗಡಿ ದಾಟಿದೆ. ಜೂಡ್‌ ಫೆಲಿಕ್ಸ್‌ ಹಾಕಿ ಅಕಾಡೆಮಿ ಹೆಸರಿನ ತಂಡವು ಬೆಂಗಳೂರಿನ ವಿವಿಧ ಡಿವಿಷನ್‌ ಟೂರ್ನಿಗಳಲ್ಲಿ ಆಡಿ ಗಮನ ಸೆಳೆಯುತ್ತಿದೆ. ನಮ್ಮ ಅಕಾಡೆಮಿಯಲ್ಲಿ ಕಲಿತವರು ರಾಜ್ಯ ತಂಡಕ್ಕೂ ಆಯ್ಕೆಯಾಗಿದ್ದಾರೆ. ಇದು ಹೆಮ್ಮೆಯ ಸಂಗತಿ’ ಎಂದು ಫೆಲಿಕ್ಸ್‌ ಸಂತಸಪಡುತ್ತಾರೆ.

‘ನನ್ನ ಅಣ್ಣಂದಿರು ಹಾಗೂ ನೆರೆಹೊರೆಯವರೆಲ್ಲಾ ನಿತ್ಯವೂ ಹಾಕಿ ಆಡುತ್ತಿದ್ದರು. ಅದು ನನ್ನ ಮೇಲೆ ಗಾಢ ಪ್ರಭಾವ ಬೀರಿತು. ಹೀಗಾಗಿ ಒಂಬತ್ತನೇ ವಯಸ್ಸಿನಲ್ಲೇ ಹಾಕಿ ಸ್ಟಿಕ್‌ ಹಿಡಿದು ಮೈದಾನಕ್ಕಿಳಿದೆ. ಬಳಿಕ ತಿರುಗಿ ನೋಡಿದ್ದೇ ಇಲ್ಲ’ ಎಂದು ತಮ್ಮ ಹಾಕಿ ಪಯಣವನ್ನು ನೆನಪಿಸಿಕೊಳ್ಳುವ ಅವರು ಆಟಗಾರನಾಗಿ ‘ಅರ್ಜುನ’ ಹಾಗೂ ಕೋಚ್‌ ಆಗಿ ‘ದ್ರೋಣಾಚಾರ್ಯ’ ಪುರಸ್ಕಾರ ಒಲಿದಿರುವುದಕ್ಕೆ ಅತೀವ ಖುಷಿ ವ್ಯಕ್ತಪಡಿಸುತ್ತಾರೆ. ಈ ಗೌರವಗಳು ಸಾರ್ಥಕತೆಯ ಭಾವ ಮೂಡಿಸಿವೆ ಎನ್ನುತ್ತಾ ನೆಮ್ಮದಿಯ ನಿಟ್ಟುಸಿರುಬಿಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು