ಮಂಗಳವಾರ, ಜೂನ್ 22, 2021
28 °C
ಈಕ್ವೆಸ್ಟ್ರಿಯನ್‌: ‘ಜಿ’ ಗುಂಪಿನಲ್ಲಿ ಅಗ್ರ ರ‍್ಯಾಂಕ್‌

ಒಲಿಂಪಿಕ್ಸ್‌ಗೆ ಅರ್ಹತೆ ಖಚಿತಪಡಿಸಿಕೊಂಡ ಫವಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಬಾರಿಯ ಬೆಳ್ಳಿ ಪದಕ ವಿಜೇತ ಈಕ್ವೆಸ್ಟ್ರಿಯನ್‌ ಪಟು ಫವಾದ್‌ ಮಿರ್ಜಾ, ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ವಿವಿಧ ಹಂತದ ಅರ್ಹತಾ ಸುತ್ತಿನ ನಂತರ ಅವರು ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಸವಾರ ಎನಿಸಿದರು.

27 ವರ್ಷದ ಫವಾದ್‌, ಎರಡು ದಶಕಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಮೊದಲ ಅಶ್ವಾರೋಹಿ ಸವಾರ ಎನಿಸಿದರು.

ಈ ಹಿಂದೆ ಇಮ್ತಿಯಾಜ್‌ ಅನೀಸ್‌ (ಸಿಡ್ನಿ, 2000) ಮತ್ತು ದಿ. ವಿಂಗ್‌ ಕಮಾಂಡರ್‌ ಐ.ಜೆ.ಲಂಬಾ (1996, ಅಟ್ಲಾಂಟಾ) ಅವರು ಒಲಿಂಪಿಕ್ಸ್‌ ಈಕ್ವೆಸ್ಟ್ರಿಯನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದವರು.

‘ಜಿ’ ಗುಂಪಿಗೆ ಸೇರುವ ಆಗ್ನೇಯ ಏಷ್ಯಾ– ಒಷಾನಿಯಾ ವಲಯದ ‘ಇಂಡಿವಿಜುವಲ್‌ ಇವೆಂಟಿಂಗ್‌’ ವಿಭಾಗದಲ್ಲಿ ಯುರೋಪ್‌ ಹಂತದ ಸ್ಪರ್ಧೆಯ ನಂತರ ಅವರು ಅಗ್ರಕ್ರಮಾಂಕದ ರೈಡರ್‌ ಎನಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಯುರೋಪ್‌ ಹಂತ ಮುಗಿದಿತ್ತು. 

ಮಿರ್ಜಾ ಒಟ್ಟು ಆರು ಅರ್ಹತಾ ಸುತ್ತಿನ ಸ್ಪರ್ಧೆಗಳಿಂದ 64 ಪಾಯಿಂಟ್ಸ್‌ ಕಲೆಹಾಕಿದ್ದಾರೆ. ಅವರು ‘ಫೆರ್ನ್‌ಹಿಲ್‌ ಪೇಸ್‌ಟೈಮ್‌’ ಕುದುರೆಯ ಮೇಲೆ ಸವಾರಿಯಲ್ಲಿ 34 ಪಾಯಿಂಟ್ಸ್‌ ಮತ್ತು ಎರಡನೆಯದಾದ ‘ಟಚಿಂಗ್‌ವುಡ್‌’ ಕುದುರೆಯ ಮೇಲಿಂದ 30 ಪಾಯಿಂಟ್ಸ್‌ ಕೂಡಿಹಾಕಿದ್ದಾರೆ.

ಆದರೆ ಅವರು ಅರ್ಹತೆ ಪಡೆದಿರುವುದನ್ನು ಅಂತರರಾಷ್ಟ್ರೀಯ ಈಕ್ವೆಸ್ಟ್ರಿಯನ್‌ ಫೆಡರೇಷನ್‌ (ಎಫ್‌ಇಐ) ಅಧಿಕೃತವಾಗಿ ಫೆಬ್ರುವರಿ 20ರಂದು ಪ್ರಕಟಿಸಲಿದೆ. 

‘ನನಗೆ ಸಂತಸವಾಗಿದೆ. ಆದರೆ ಕ್ರಮಿಸಬೇಕಾದ ಹಾದಿ, ಹಾಕಬೇಕಾದ ಶ್ರಮ ಸಾಕಷ್ಟಿದೆ. ಶ್ರೇಷ್ಠ ಅಶ್ವಸವಾರರ ಎದುರು ಸ್ಪರ್ಧೆಗೆ ಸಜ್ಜಾಗಬೇಕಾಗುತ್ತದೆ’ ಎಂದು ಅವರು ಜರ್ಮನಿಯಿಂದ ಸುದ್ದಿಸಂಸ್ಥೆಗೆ ತಿಳಿಸಿದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು