ಶನಿವಾರ, ಡಿಸೆಂಬರ್ 7, 2019
22 °C

ಫಿಟ್‌ನೆಸ್‌ ಚಾಲೆಂಜ್‌ನಿಂದ ಫಿಟ್‌ ಇಂಡಿಯಾವರೆಗೆ..

Published:
Updated:

ಈ ಸಮಯೋಚಿತ ಅಭಿಯಾನ ಕಾಯಿಲೆಗಳ ಸುನಾಮಿಗೇ ತಡೆಯೊಡ್ಡಬಲ್ಲದು.. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ‘ಫಿಟ್‌ ಇಂಡಿಯಾ’ ಅಭಿಯಾನವನ್ನು ಬಣ್ಣಿಸಿದ್ದು ಹೀಗೆ. ಅಸೀಮ ಯುವ ಬಲವನ್ನು ಹೊಂದಿರುವ ಭಾರತದ ಇಂಥಹ ಪ್ರಯೋಗಗಳ ಮೇಲೆ ವಿಶ್ವದ ಕಣ್ಣು ಸದಾ ತೆರೆದಿರುತ್ತದೆ.   

2019ರ ಆಗಸ್ಟ್‌ 29ರಂದು ಅಧಿಕೃತವಾಗಿ ‘ಫಿಟ್‌ ಇಂಡಿಯಾ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಬಹು ವರ್ಷದಿಂದ ಆಚರಿಸಲಾಗುತ್ತಿದೆ. ಭಾರತದ ಪ್ರತಿಯೊಬ್ಬ ಕ್ರೀಡಾ ತಾರೆಯಲ್ಲೂ ಚಿನ್ನದ ಕನಸನ್ನು ಬಿತ್ತಿದವರು ಧ್ಯಾನ್‌ಚಂದ್‌. ಈ ಅಭಿಯಾನ ಅವರ ನೆನಪಿನೊಂದಿಗೇ ಆರಂಭವಾದದ್ದು ಔಚಿತ್ಯಪೂರ್ಣವಾಗಿದೆ. 

ಆ ಒಂದು ಟ್ವೀಟ್‌...

‘ಹಮ್‌ಫಿಟ್‌ ತೋ ಇಂಡಿಯಾ ಫಿಟ್‌’ ಎಂದು 2018ರ ಮೇ 23ರಂದು ಆಗಿನ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮಾಡಿದ ಆ ಒಂದು  ‘ಫಿಟ್‌ನೆಸ್‌ ಚಾಲೆಂಜ್‌’ ಟ್ವೀಟ್, ಅಭಿಯಾನದ ಹುಟ್ಟಿಗೆ ಕಾರಣವಾಯಿತು. ಈ ಮೂಲಕ ಠಾಥೋಡ್‌ ತಮ್ಮ ಫಿಟ್‌ನೆಸ್‌ ಗುಟ್ಟಿನ ಹಿಂದಿರುವ ವ್ಯಾಯಾಮಕ್ಕೆ ಟ್ವಿಟರ್‌ ಅನ್ನು ಅನಾವರಣದ ವೇದಿಕೆಯಾಗಿಸಿದರು. ವಿರಾಟ್‌ ಕೊಹ್ಲಿ, ಸೈನಾ ನೆಹ್ವಾಲ್‌ ಮತ್ತು ಹೃತಿಕ್‌ ರೋಶನ್‌ ಅವರಿಗೆ ಚಾಲೆಂಜ್‌ ಎಸೆದರು. ಕೊಹ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಸವಾಲು ಎಸೆದರು. 

ಸವಾಲೆಸೆಯುವ ಆಟ: ಸೈನಾ– ಪಿ.ವಿ.ಸಿಂಧು– ದೀಪಿಕಾ ಪಡುಕೋಣೆ– ಸುರೇಶ್‌ ರೈನಾ– ಸಲ್ಮಾನ್‌ ಖಾನ್‌ ಹೀಗೆ... ವಿವಿಧ ಕ್ಷೇತ್ರಗಳ ತಾರೆಯರು ಒಬ್ಬರ ಸವಾಲು ಸ್ವೀಕರಿಸಿ ಮತ್ತೊಬ್ಬರಿಗೆ ಎಸೆಯುವ ಆಟ ಮುಂದುವರಿಸಿದರು. ಅವರ ಅಭಿಮಾನಿಗಳೂ ಈ ಚಾಲೆಂಜ್‌ಗಳಿಂದ ಹಿಂದೆ ಬೀಳಲಿಲ್ಲ. ಎಲ್ಲರ ಚಾಲೆಂಜ್‌ಗಳಲ್ಲಿ ಜೀವಂತವಿದ್ದದ್ದೂ ಫಿಟ್‌ನೆಸ್‌ಗಾಗಿ ತಾವು ನಿತ್ಯ ಆಯ್ದುಕೊಂಡ ಆಟಗಳು.. ಅವರ ಸರಳ ವ್ಯಾಯಾಮಗಳು.. ವ್ಯಾಯಾಮಗಳ ಮಿಲಿಯಾಂತರ ಆಯಾಮಗಳು..!

ಮೆರೆದ ಕ್ರೀಡಾ ಸ್ಫೂರ್ತಿ: ಎಲ್ಲ ಕ್ಷೇತ್ರದ ಎಲ್ಲ ಜನರೂ ‘ಫಿಟ್‌ನೆಸ್‌ ಚಾಲೆಂಜ್‌’ಗೆ ಪ್ರತಿಸ್ಪಂದಿಸಿ ಕ್ರೀಡಾ ಸ್ಫೂರ್ತಿಯನ್ನು ಮೆರೆದರು. ಇಂಥಹ ಪ್ರತಿಸ್ಪ‍ಂದನೆಯ ಗುಣ ಇದ್ದಾಗ ಮಾತ್ರ ಒಂದು ಚಿಕ್ಕ ಕಾರ್ಯ, ಮಹಾ ಅಭಿಯಾನವಾಗಿ ರೂಪುಗೊಳ್ಳುತ್ತದೆ. ಆ ಒಂದು ‘ಫಿಟ್‌ನೆಸ್‌ ಸವಾಲು’ ದೇಶವನ್ನೇ ‘ಫಿಟ್‌’ ಆಗಿಸಲು ಪ್ರೇರೇಪಿಸಿದೆ.  ಈಗಲೂ ಪ್ರೇರೇಪಿಸುತ್ತಿದೆ.. ಅದಕ್ಕೆ ಫಿಟ್‌ ಇಂಡಿಯಾ ಅಭಿಯಾನವೇ ಸಾಕ್ಷಿ.

ಆಯುಷ್ಯ ವೃದ್ಧಿ: ಭಾರತದಲ್ಲಿ ಪ್ರತಿವರ್ಷ 30 ಲಕ್ಷ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಇವರಲ್ಲಿ 55 ವರ್ಷದ ಒಳಗಿನವರ ಪ್ರಮಾಣ ಶೇ 40. ಚಿಕ್ಕ ವಯಸ್ಸಿನಲ್ಲೇ ಮೂಡಿದರೆ ಫಿಟ್‌ನೆಸ್‌ ಪ್ರಜ್ಞೆ ಆಯಸ್ಸು ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿ ವ್ಯಕ್ತಿಯಲ್ಲಿ ವರ್ಧಿಸುತ್ತದೆ. ಸಾವನ್ನು ಆಲಂಗಿಸುವ ವರ್ಷಗಳು ದೂರ ಸರಿಯುತ್ತವೆ. ಅಭಿಯಾನ ವರ್ಷವಿಡೀ ನಡೆದರೆ ‘ಆರೋಗ್ಯ ಭಾರತ’ ನಿರ್ಮಾಣ ಎಲ್ಲ ನಾಗರಿಕರಿಂದ ಸಾಧ್ಯ.   

ಕಾಯಿಲೆಗಳಿಗೆ ಚಾಲೆಂಜ್‌: ಎಲ್ಲ ರೋಗಗಳನ್ನು ಎದುರಿಸುವ ಆತ್ಮಬಲವನ್ನು ಈ ಅಭಿಯಾನ ಕಟ್ಟಿಕೊಡಬಲ್ಲದು. ‘ಫಿಟ್‌ನೆಸ್‌ ಚಾಲೆಂಜ್‌’ ನಾವು ನಮ್ಮ ಸ್ನೇಹಿತರಿಗಷ್ಟೇ ಎಸೆಯುವುದಲ್ಲ. ಎಲ್ಲ ಕಾಯಿಲೆಗಳಿಗೂ ಸವಾಲು ಎಸೆಯುತ್ತೇವೆ. ಚಾಲೆಂಜ್ ಅನ್ನು ದಿನವೂ ಸ್ವೀಕರಿಸಬೇಕಾಗುತ್ತದೆ. ಆಗಲೇ ಅಭಿಯಾನ ಆಗುವುದು. ಫಿಟ್‌ನೆಸ್‌ಗಾಗಿ ವ್ಯಾಯಾಮಗಳನ್ನು ನಿತ್ಯ ಮಾಡುತ್ತ ದೇಶದ ಆರೋಗ್ಯದ ನೊಗವನ್ನು ಎಲ್ಲರೂ ಎಳೆಯಬೇಕಾಗುತ್ತದೆ.  ಮೈ ಕೈ ಗಟ್ಟಿಗೊಳಿಸುತ್ತ, ನಮ್ಮ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. 

ಬದುಕಿನ ಸವಾಲು ಎದುರಿಸಲು: ಆಟದಲ್ಲಿ ಏರಿಳಿತಗಳು ಇರುವಂತೆ ಜೀವನದಲ್ಲೂ ಏರಿಳಿತಗಳು ಇರುತ್ತವೆ. ನಮ್ಮ ದೇಹದ ಆರೋಗ್ಯದಲ್ಲೂ ಏರುಪೇರಾಗುವುದೂ ಸಹಜ ಇವನ್ನೆಲ್ಲ ಎದುರಿಸಲು ನಮ್ಮ ಆರೋಗ್ಯ ಕ್ಷಮತೆಯನ್ನು ಹೆಚ್ಚಿಸಲು ಕ್ರೀಡೆ, ವ್ಯಾಯಾಮಗಳು ಸಹಾಯ ನೀಡಬಲ್ಲವು. ಎಷ್ಟು ಚಿಕ್ಕ ವಯಸ್ಸಿನಲ್ಲಿ ಫಿಟ್‌ನೆಸ್‌ ಕಾಳಜಿ ತೋರುತ್ತೇವೆಯೂ ಅಲ್ಲಿಂದಲೂ ದೇಹದಾರೋಗ್ಯ ಸ್ಥಿರವಾದ ಆಲಯವಾಗುತ್ತದೆ. ವಯಸ್ಸಾದಂತೆಲ್ಲ ಎದುರಾಗುವ ಕಾಯಿಲೆಗಳನ್ನು ದಿಟ್ಟವಾಗಿ ಎದುರಿಸಲು ಸಹಾಯಕವಾಗುತ್ತದೆ. ಇದೇ ಅಭಿಯಾನದ ಆಶಯ ಕೂಡ.

ಗ್ರಾಮ ಭಾರತಕ್ಕೂ ವಿಸ್ತರಿಸಬೇಕಿದೆ: ನಗರ ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿರುವ ಈ ಅಭಿಯಾನವನ್ನು ಗ್ರಾಮ ಭಾರತದತ್ತ ತಲುಪಿಸಲೂ ಯೋಚಿಸಬೇಕಿದೆ. ನಿರುದ್ಯೋಗ, ಅಪೌಷ್ಟಿಕತೆ, ಅತಿವೃಷ್ಟಿ–ಅನಾವೃಷ್ಟಿ ಇವೇ ಮೊದಲಾದ ಸಮಸ್ಯೆಗಳು ಗ್ರಾಮ ಭಾರತವನ್ನು ಕಂಗೆಡಿಸಿವೆ. ಉದ್ಯೋಗ ಖಾತರಿ ಯೋಜನೆಯಂತಹ ಕ್ರಾಂತಿಕಾರಕ ಯೋಜನೆಗಳೂ ಈ ಅಭಿಯಾನದ ಭಾಗದಂತೆಯೇ ಇವೆ. ಶಾಲಾ ಮಕ್ಕಳು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡಂತೆ ಈ ಅಭಿಯಾನದಲ್ಲೂ ಭಾಗವಹಿಸಿದರೆ ಭಾರತ ನಿಜಕ್ಕೂ ಫಿಟ್‌ ಆಗಲಿದೆ ಎಂಬುದು ತಜ್ಞರ ಅಭಿಮತ. 

ಅಭಿಯಾನದ ಪರಿಣಾಮ

* ಚಟುವಟಿಕೆ ರಹಿತ ಜೀವನವಿಧಾನ ಮತ್ತು ಒತ್ತಡ ಹಲವು ಮಂದಿಯನ್ನು ಸಕ್ಕರೆ ಕಾಯಿಲೆ, ಅತೀವ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಫಿಟ್‌ ಇಂಡಿಯಾ ಅಭಿಯಾನ ಮಾನಸಿಕ ಮತ್ತು ದೈಹಿಕ ಕ್ಷಮತೆಗೆ ಉತ್ತಮ ಆಹಾರವನ್ನು ಸ್ವೀಕರಿಸಲು ಪ್ರೇರೇಪಿಸಿದೆ. 

* ಜಾಹೀರಾತುಗಳು, ರಿಯಾಯಿತಿ ಮಾರುಕಟ್ಟೆ ಜಂಕ್‌ ಫುಡ್‌ಗಳನ್ನು ಕೊಳ್ಳಲು ಉದ್ದೀಪಿಸುತ್ತದೆ. ಈ ಅಭಿಯಾನ ಶಾಲಾ ಮಕ್ಕಳನ್ನು ಆಹಾರ ಮತ್ತು ವ್ಯಾಯಾಮದ ಕುರಿತು ಜಾಗೃತಿಯನ್ನು ಮೂಡಿಸಬಲ್ಲದು. ಮನೆ ಅಡಿಗೆ ಮತ್ತು ಆಟಗಳ ಮಹತ್ವದ ಕುರಿತು ಮಕ್ಕಳ ಮೇಲೆ ಬೆಳಕು ಚೆಲ್ಲಬಲ್ಲದು. 

* ಕೆಲವು ಪೋಷಕರು ಮಕ್ಕಳು ಓದಿನತ್ತಲೇ ಹೆಚ್ಚು ಗಮನ ಹರಿಸಬೇಕೆಂದು ಬಯಸುತ್ತಾರೆ. ಶಾಲಾ ಕಲಿಕೆ ನಂತರ ಟ್ಯೂಷನ್‌ ಕೇಂದ್ರಗಳಿಗೆ ದಬ್ಬುತ್ತಾರೆ. ಮಕ್ಕಳಿಗೆ ಆಟದ ಸಮಯವೇ ಇಲ್ಲವಾಗುತ್ತಿದೆ. ಈ ಅಭಿಯಾನ ಪೋಷಕರ ಕಣ್ಣು ತೆರೆಸುತ್ತದೆ. 

* ಫಿಟ್‌ನೆಸ್‌ ಸ್ಟಾರ್ಟ್‌ಅಪ್‌ಗಳು  ಹೆಚ್ಚುತ್ತಿವೆ. ಇದಕ್ಕೆ ಜನರಲ್ಲಿ ಫಿಟ್‌ನೆಸ್‌ ಪ್ರಜ್ಞೆ ಹೆಚ್ಚುತ್ತಿರುವುದೇ ಕಾರಣ. ಆಟ– ನೃತ್ಯ ತರಬೇತಿ ಕೇಂದ್ರಗಳೂ ಹೆಚ್ಚುತ್ತಿವೆ. ಅಭಿಯಾನದಿಂದ ಮತ್ತಷ್ಟು ಜನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು.  

* ಸಾಂಪ್ರಾದಾಯಿಕ ಸಮರ ಕಲೆಗಳತ್ತ ಜನರು ಮುಖ ಮಾಡಲು ಈ ಅಭಿಯಾನ ಸಹಕಾರಿಯಾಗಿದೆ.

ಪ್ರತಿಕ್ರಿಯಿಸಿ (+)