ಗುರುವಾರ , ಆಗಸ್ಟ್ 5, 2021
21 °C

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡಕ್ಕೆ ಪದಕ: ಧನರಾಜ್‌ ಪಿಳ್ಳೈ ಭರವಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡವು ಉತ್ತಮ ಪ್ರದರ್ಶನ ನೀಡಲಿದ್ದು, ಪದಕ ಗೆಲ್ಲಬಹುದು ಎಂದು ಖ್ಯಾತ ಹಾಕಿ ಆಟಗಾರ ಧನರಾಜ್‌ ಪಿಳ್ಳೈ ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಅವರು, 'ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಹಾಕಿ ತಂಡವು ಸಮರ್ಥವಾಗಿದೆ. ನನ್ನ ಪೀಳಿಗೆಯ ಆಟಗಾರರು ಗೆಲ್ಲಲಾಗದ ಪದಕವನ್ನು ಈಗಿನ ಆಟಗಾರರು ಗೆಲ್ಲುವ ನಿರೀಕ್ಷೆ ಇದೆ' ಎಂದು ಪಿಳ್ಳೈ ಅಭಿಪ್ರಾಯಪಟ್ಟಿದ್ದಾರೆ.

1992 ರಿಂದ 2004ರ ವರೆಗೆ ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾರತದ ಹಾಕಿ ತಂಡವನ್ನು ಪಿಳ್ಳೈ ಪ್ರತಿನಿಧಿಸಿದ್ದರು.

ಭಾರತದ ಹಾಕಿ ತಂಡಕ್ಕೆ ಫಿಟ್‌ನೆಸ್‌ ಅತಿದೊಡ್ಡ ಆಸ್ತಿಯಾಗಿದೆ ಎಂದಿರುವ ಅವರು, 'ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ತಂಡವು ಕಳೆದ 5 ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ತಂಡಕ್ಕೆ ಫಿಟ್‌ನೆಸ್ ದೊಡ್ಡ ಆಸ್ತಿಯಾಗಿದೆ' ಎಂದು ತಿಳಿಸಿದ್ದಾರೆ.

'ನಾನು ಬೆಂಗಳೂರಿನಲ್ಲಿ ಇದ್ದರೂ ಕೋವಿಡ್‌ ನಿಯಮಾವಳಿಗಳ ಹಿನ್ನೆಲೆಯಲ್ಲಿ ತಂಡವನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಆ ಕಾರಣ, ಶುಭ ಹಾರೈಸಿ ತಂಡಕ್ಕೆ ಪತ್ರವನ್ನು ರವಾನಿಸಿದ್ದೇನೆ' ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ ಹೇಳಿದ್ದಾರೆ.

ಆಟಗಾರರು ಶಾಂತಿ ಮತ್ತು ನೆಮ್ಮದಿಯಿಂದ ತಮ್ಮ ಕ್ರೀಡಾ ಜೀವನವನ್ನು ಆನಂದಿಸಬೇಕೆಂದು ಪಿಳ್ಳೈ ಸಲಹೆ ನೀಡಿದ್ದಾರೆ.

ಮನ್‌ಪ್ರೀತ್ ನಾಯಕತ್ವದಲ್ಲಿ ಜಪಾನಿಗೆ ತೆರಳಿರುವ ಭಾರತ ಹಾಕಿ ತಂಡವು ಈಗಾಗಲೇ ಹಲವು ಮೈಲುಗಲ್ಲುಗಳನ್ನು ಸಾಧಿಸಿದೆ. 2017ರಲ್ಲಿ ಏಷ್ಯಾ ಕಪ್‌, 2018ರಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಂಡಿದ್ದ ತಂಡ, ಎರಡು ವರ್ಷಗಳ ಹಿಂದೆ ಎಫ್‌ಐಎಚ್‌ ವಿಶ್ವ ಸರಣಿ ಫೈನಲ್‌ನಲ್ಲೂ ಜಯಗಳಿಸಿತ್ತು.

ಮನ್‌ಪ್ರೀತ್‌ ನಾಯಕರಾಗಿದ್ದಾಗಲೇ ಭಾರತ ತಂಡವು, ತವರಿನಲ್ಲಿ (ಭುವನೇಶ್ವರ) ನಡೆದ 2018ರ ವಿಶ್ವ ಕಪ್‌ನಲ್ಲಿ ಎಂಟರ ಘಟ್ಟ ತಲುಪಿತ್ತು. ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿತ್ತು. ತಂಡವು ಸುಧಾರಿತ ಪ್ರದರ್ಶನದಿಂದ ಈಗ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ.

ಹಲವು ದಿಗ್ಗಜ ಆಟಗಾರರು ಮನ್‌ಪ್ರೀತ್ ಬಳಗದ ಕುರಿತು ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಹಾದಿ ಸುಗಮವಲ್ಲ. ಈ ಬಳಗದಲ್ಲಿರುವ 10 ಮಂದಿಗೆ ಇದೇ ಮೊದಲ ಒಲಿಂಪಿಕ್ಸ್. ಅಲ್ಲದೇ ಭಾರತವು ಕಣಕ್ಕಿಳಿಯಲಿರುವ ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸೇರಿದಂತೆ ಬಲಿಷ್ಠ ತಂಡಗಳು ಇವೆ. ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸ್ಪೇನ್ ತಂಡಗಳ ಪೈಪೋಟಿಯನ್ನು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು