ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಟುತ್ತ, ನಡೆಯುತ್ತ ಗಳಿಸೋಣ ಫಿಟ್‌ನೆಸ್‌

Last Updated 9 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಅನೇಕ ಜನ ಸ್ನೇಹಿತರಿಗೆ ನಿತ್ಯ ಬೆಳಿಗ್ಗೆ ವಾಕಿಂಗ್ ಹೋಗಬೇಕು, ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎನ್ನುವ ಆಸೆಯಿದೆ. ಆದರೆ, ಬೆಳಿಗ್ಗೆ ಏಳಲು ಆಗುವುದೇ ಇಲ್ಲ ಎಂದು ಹೇಳುತ್ತಾರೆ. ಇದು ನನ್ನ ಸ್ನೇಹಿತರದ್ದಷ್ಟೇ ಸಮಸ್ಯೆಯಲ್ಲ. ಬಹುತೇಕರಿಗೆ ಬೆಳಿಗ್ಗೆ ಬೇಗನೆ ಏಳುವುದು ದೊಡ್ಡ ಸಾಧನೆ ಮಾಡಿದಂತೆ. ಬೆಳಗಿನ ಜಾವದ ಸಕ್ಕರೆಯ ಸವಿನಿದ್ದೆ ಬಿಟ್ಟು ಹಾಸಿಗೆಯಿಂದ ಎದ್ದು ಬರಲು ಯಾರಿಗೆ ತಾನೆ ಇಷ್ಟ ಹೇಳಿ?

ಆದರೆ, ಈಗ ಏಳುವುದು ಅನಿವಾರ್ಯ. ಮೊದಲಾಗಿದ್ದರೆ ಪೌಷ್ಟಿಕಾಂಶಯುಕ್ತ ಆಹಾರ ಸಿಗುತ್ತಿತ್ತು. ಅದನ್ನು ತಿಂದು, ಹೆಚ್ಚು ದೈಹಿಕ ಶ್ರಮ ಪಡುತ್ತಿದ್ದರಿಂದ ಆರೋಗ್ಯದ ಸಮಸ್ಯೆ ಈಗಿನಷ್ಟು ಇರುತ್ತಿರಲಿಲ್ಲ. ಆದರೆ, ಈಗ ಸ್ಪರ್ಧೆಯ ಭರದಲ್ಲಿ ನಿಲ್ಲಲೂ ಪುರಸೊತ್ತು ಇಲ್ಲ. ಯಾರೊಂದಿಗೂ ನೇರವಾಗಿ ಮಾತನಾಡುವಷ್ಟು ಸಮಯವಿಲ್ಲ. ಆದ್ದರಿಂದ ಎಲ್ಲರಿಗೂ ಓಡುವುದೊಂದೇ ಕೆಲಸ.

ಓದು, ನೌಕರಿ, ರಾತ್ರಿ ಪಾಳೆಯಲ್ಲಿ ಕೆಲಸ, ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಾದ ಸವಾಲುಗಳ ಮಧ್ಯೆಯೂ ನಾವು, ನಾವಾಗಿ ಉಳಿಯಬೇಕು. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ನಮ್ಮ ಇತಿಮಿತಿಯಲ್ಲಿ ಯೋಜನೆ ರೂಪಿಸಿಕೊಳ್ಳಬೇಕು.

ಬೆಳಿಗ್ಗೆ ಬೇಗನೆ ಏಳಲು ನಿಮ್ಮ ಸುತ್ತಮುತ್ತಲಿನ ಸ್ನೇಹಿತರ ಗುಂಪು ಕಟ್ಟಿಕೊಂಡು ಒಂದೆಡೆ ಸೇರಿ ಒಂದಷ್ಟು ದಿನ ಹರಟೆ ಹೊಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೆಲ ದಿನಗಳ ನಂತರ ನಡೆಯುತ್ತಾ, ಹರಟೆ ಹೊಡೆಯುತ್ತಾ, ಕೈ ಜೋರಾಗಿ ಬೀಸುತ್ತಾ ಹೋಗುವುದನ್ನು ರೂಢಿಸಿಕೊಳ್ಳಿ. ಈ ರೀತಿಯ ವಾತಾವರಣದಿಂದ ಹರಟುವ ಖುಷಿಗಾದರೂ ಎದ್ದು ಬಿಡಬಹುದು.

ಆರಂಭದ ದಿನಗಳಲ್ಲಿ ನಿಧಾನವಾಗಿ, ನಂತರ ವೇಗವಾಗಿ ನಡೆಯುವುದನ್ನು ರೂಢಿಸಿಕೊಳ್ಳಿ. ಇನ್ನೊಂದಿಷ್ಟು ದಿನಗಳ ಬಳಿಕ ನಿಧಾನವಾಗಿ ಓಡುವುದನ್ನು ಕಲಿತುಕೊಳ್ಳಿ. ಹೀಗೆ ಮೂರು ತಿಂಗಳು ಹರಟೆ, ನಡಿಗೆ ಮುಂದುವರಿಸಿದರೆ ವ್ಯಾಯಾಮ ದಿನಚರಿಯ ಭಾಗವೇ ಆಗಿ ಬಿಡುತ್ತದೆ. ಎಷ್ಟೇ ಕೆಲಸವಿದ್ದರೂ ದಿನಕ್ಕೆ ಕನಿಷ್ಠ 12 ನಿಮಿಷ ಬಯಲಲ್ಲಿ ಓಡಿ.

ಹೀಗೆ ಹಂತಹಂತವಾಗಿ ಹೊಸದನ್ನು ಕಲಿಯುತ್ತಾ ಹೋದಂತೆಲ್ಲ, ದೇಹದ ಅಂಗಾಂಗಗಳು ಸಡಿಲಗೊಳ್ಳುತ್ತವೆ. ಓಡುವುದು ಸುಲಭವಾಗುತ್ತದೆ. ಮೂರು ತಿಂಗಳು ನಿತ್ಯ ವ್ಯಾಯಾಮ ಮಾಡಿ ಒಂದು ವಾರ ರಜೆ ತೆಗೆದುಕೊಳ್ಳಿ. ಮತ್ತೆ ನಡಿಗೆ ಆರಂಭಿಸಿ.

ಬಹುತೇಕರು ವಾಕಿಂಗ್‌ಗೆ ಹೋಗುವ ಮೊದಲ ದಿನವೇ ವೇಗವಾಗಿ ಓಡಿ ಕಾಲು ನೋವು ಮಾಡಿಕೊಳ್ಳುತ್ತಾರೆ. ನಂತರ ‘ವಾಕಿಂಗ್‌ ನಮಗೆ ಸರಿ ಹೊಂದುವುದಿಲ್ಲ’ ಎಂದು ತಮ್ಮಷ್ಟಕ್ಕೆ ತಾವೇ ನಿರ್ಧರಿಸಿಬಿಡುತ್ತಾರೆ. ಇದಕ್ಕಿಂತ ಸ್ನೇಹಿತರ ಬಳಗ ಕಟ್ಟಿಕೊಂಡು, ಹರಟುತ್ತಾ ನಡಿಗೆ ಅರಂಭಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಬಿ.ಪಿ., ದಯಾಬಿಟಿಸ್‌ನ ರಗಳೆಯೂ ಇರುವುದಿಲ್ಲ.

ವಾಕಿಂಗ್‌ ಜೊತೆಗೆ ಊಟದ ಬಗ್ಗೆಯೂ ಎಚ್ಚರಿಕೆಯಿರಲಿ. ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಹೆಚ್ಚು ತಿನ್ನಬೇಡಿ. ನಿತ್ಯದ ದೈಹಿಕ ಚಟುವಟಿಕೆಗಳ ಆಯಾಸ ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯುವುದು ಅವಶ್ಯ. 15ರಿಂದ 20 ನಿಮಿಷ ವ್ಯಾಯಾಮ ಮಾಡಿದ ಬಳಿಕ ಕನಿಷ್ಠ 250 ಎಂ.ಎಲ್‌. ಲೀಟರ್‌ ನೀರು ಕುಡಿಯಬೇಕು.

ಟ್ರೈನರ್‌ ಪ್ರಶಾಂತ ಪೂಜಾರ ಬಗ್ಗೆ
ಧಾರವಾಡದ ಪ್ರಶಾಂತ ಪೂಜಾರ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ತರಬೇತಿ ಪಡೆದಿದ್ದಾರೆ.

ಕರ್ನಾಟಕ ಕ್ರಿಕೆಟ್ ತಂಡ ರಣಜಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಾಗ ಪ್ರಶಾಂತ ತಂಡದ ಟ್ರೈನರ್ ಆಗಿದ್ದರು. ರಾಜ್ಯ ತಂಡದ ಜೊತೆ ವಿವಿಧ ಟೂರ್ನಿಗಳಲ್ಲಿ ಐದು ವರ್ಷ ಕೆಲಸ ಮಾಡಿದ್ದಾರೆ.

ಇರಾನಿ ಕಪ್‌ನಲ್ಲಿ ಭಾರತ ‘ಎ’ ತಂಡ, ದುಲೀಪ್‌ ಟ್ರೋಫಿ ಟೂರ್ನಿ, ವಿಜಯ್‌ ಹಜಾರೆ ಟೂರ್ನಿ, 19 ವರ್ಷದೊಳಗಿನವರ ಭಾರತ ತಂಡಕ್ಕೆ ಟ್ರೈನರ್‌ ಆಗಿದ್ದರು. ಸದ್ಯಕ್ಕೆ ಅವರು ಉತ್ತರಾಖಂಡ ರಣಜಿ ತಂಡದ ಟ್ರೈನರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT