ಬುಧವಾರ, ನವೆಂಬರ್ 20, 2019
26 °C

ಗೌರವ್ ಗಿಲ್ ಕಾರು ದುರಂತ: 3 ಸಾವು

Published:
Updated:
Prajavani

ಬಾರ್ಮೆರ್, ರಾಜಸ್ತಾನ (ಪಿಟಿಐ): ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶನಿವಾರ ಟ್ರ್ಯಾಕ್‌ನಲ್ಲಿ ದುರಂತ ಸಂಭವಿಸಿದ್ದು ಗೌರವ್ ಗಿಲ್ ಅವರ ಕಾರು ಅಪಘಾತಕ್ಕೆ ಒಳಗಾಗಿ ಮೂವರು ಸಾವಿಗೀಡಾಗಿದ್ದಾರೆ. ಗಾಯಗೊಂಡಿರುವ ಗಿಲ್ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವಘಡದ ನಂತರ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ.

‘ಮ್ಯಾಕ್ಸ್‌ಪಿರಿಯನ್ಸ್ ರ‍್ಯಾಲಿಯ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಗೌರವ್ ಗಿಲ್ ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಮುನ್ನುಗ್ಗುತ್ತಿದ್ದರು. ಎಡಕ್ಕೆ ತಿರುಗುವ ಸಂದರ್ಭದಲ್ಲಿ ಭದ್ರತೆಯನ್ನು ಭೇದಿಸಿ ಬೈಕ್ ಸವಾರನೊಬ್ಬ ಟ್ರ್ಯಾಕ್‌ಗೆ ನುಗ್ಗಿದ್ದಾನೆ. ಟ್ರ್ಯಾಕ್ ಸಮೀಪ ನಿಂತಿದ್ದ ನರೇಂದ್ರ, ಅವರ ಪತ್ನಿ ಪುಷ್ಪಾ ಮತ್ತು ಪುತ್ರ ಜಿತೇಂದ್ರ ಅವರಿಗೆ ಕಾರು ಅಪ್ಪಳಿಸಿದ್ದರಿಂದ ಸ್ಥಳದಲ್ಲೇ ಸಾವಿಗೀಡಾದರು’ ಎಂದು ರ‍್ಯಾಲಿಯ ಪೋಷಕ ವಂಶಿ ಮೇರ್ಲ ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಕಾರನ್ನು ನಿಯಂತ್ರಿಸಲು ಗೌರವ್ ಗಿಲ್ ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದರು. ಆದರೆ ಅತಿವೇಗದಲ್ಲಿ ಇದ್ದ ಕಾರಣ ಫಲ ಸಿಗಲಿಲ್ಲ. ಗ್ರಾಮಸ್ಥರು ತಡೆಗೋಡೆಗಳನ್ನು ದಾಟಿ ಒಳಗೆ ನುಗ್ಗಿದ್ದರು. ಪದೇ ಪದೇ ಎಚ್ಚರಿಕೆ ನೀಡಿದರೂ ಟ್ರ್ಯಾಕ್ ಬಳಿಯಿಂದ ದೂರ ಸರಿಯಲಿಲ್ಲ. ಸಾವಿಗೀಡಾದ ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ’ ಎಂದು ಮೇರ್ಲ ವಿವರಿಸಿದರು.

ಪ್ರತಿಕ್ರಿಯಿಸಿ (+)